ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯ ನಲವತ್ತು ಮಂದಿ ಯೋಧರ ಸಾವಿಗೆ ಕಾರಣವಾದ ದಾಳಿಗೆ ಪಾಕಿಸ್ತಾನದ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ ಹೊಣೆಯನ್ನು ಹೊತ್ತುಕೊಂಡಿದೆ. ಇದರ ಹೊರತಾಗಿಯೂ “ಸೂಕ್ತವಾದ ಸಾಕ್ಷ್ಯಗಳನ್ನು ನೀಡಿದರೆ ತನಿಖೆ ನಡೆಸುತ್ತೇವೆ. ಭಾರತ ದಾಳಿ ಮಾಡಿದರೆ ಸೂಕ್ತ ಪ್ರತ್ಯುತ್ತರ ನೀಡುತ್ತೇವೆ’ ಎಂದು ನೆರೆಯ ರಾಷ್ಟ್ರದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. 2008ರ ಮುಂಬೈ ದಾಳಿಯ ವಿಷಯದಲ್ಲೂ ಪಾಕಿಸ್ತಾನ ಇದೇ ಮೊಂಡು ವಾದ ಮುಂದಿಡುತ್ತಾ ಬಂದಿದೆ. ಎಷ್ಟೇ ಪುರಾವೆಗಳನ್ನು ಕೊಟ್ಟರೂ “ಸಾûಾ$Âಧಾರದ ಕೊರತೆಯಿದೆ’ ಎನ್ನುತ್ತದೆ. ಆ ಘಟನೆಯಲ್ಲಿ ಯಾವ ರೀತಿ ದಾಳಿ ನಡೆಸಬೇಕು ಎಂಬ ಬಗ್ಗೆ ಆ ರಾಷ್ಟ್ರದ ನೆಲದಿಂದಲೇ ಉಪಗ್ರಹ ಆಧಾರಿತ ಫೋನ್‌ಗಳಿಂದ ಸಂದೇಶ ಬಂದದ್ದು ಈಗ ಜಗಜ್ಜಾಹೀರು.
ಪ್ರಸಕ್ತ ಘಟನೆಯಲ್ಲಿ ಸ್ವತಃ ಜೈಶ್ ಉಗ್ರ ಸಂಘಟನೆ ಮತ್ತು ದಾಳಿ ನಡೆಸಿದ ಅದಿಲ್ ಅಹ್ಮದ್ ದರ್ ಕೂಡ ವಿಡಿಯೋದಲ್ಲಿ ತನ್ನ ಕೃತ್ಯದ ಬಗ್ಗೆ ಹೇಳಿಕೊಂಡಿದ್ದ. ಹೀಗಾಗಿ ಪಾಕಿಸ್ತಾನದ ಕೈವಾಡ ಇದೆ ಎನ್ನುವುದು ಬಹಳ ಸ್ಪಷ್ಟ. ಈ ಹಿನ್ನೆಲೆಯಲ್ಲಿ ರಾಷ್ಟ್ರವೊಂದರ ಪ್ರಧಾನಿಯಾಗಿ ಇಮ್ರಾನ್ ಖಾನ್ ಹೇಳಿರುವ ಮಾತು ಉಚಿತ ಅಲ್ಲವೇ ಅಲ್ಲ. ಹಿಂದಿನ ಸಂದರ್ಭಗಳಲ್ಲಿಯೂ ಆ ರಾಷ್ಟ್ರದ ಮುಖ್ಯಸ್ಥರಾ ಗಿದ್ದವರು ಇಮ್ರಾನ್ ಖಾನ್ ಮಂಗಳವಾರ ಹೇಳಿದ್ದ ಮಾತುಗಳನ್ನೇ ಬೇರೊಂದು ರೀತಿಯಲ್ಲಿ ಹೇಳಿದ್ದರು.
ಚುನಾವಣೆ ಹಿನ್ನೆಲೆಯಲ್ಲಿ ಮಾಧ್ಯಮದವರು ಮತ್ತು ರಾಜಕೀಯ ನಾಯಕರು ಪ್ರತೀಕಾರ ನಡೆಸುವ ಬಗ್ಗೆ ಮಾತುಗಳನ್ನಾಡುತ್ತಿದ್ದಾರೆ ಎಂದು ಆಕ್ಷೇಪಾರ್ಹವಾಗಿ ಮಾತನಾಡಿದ್ದಾರೆ ಇಮ್ರಾನ್. ಅಫ್ಘಾನಿಸ್ತಾನ ಸಮಸ್ಯೆ ಮಾತುಕತೆ ಮೂಲಕ ಇತ್ಯರ್ಥವಾಗುವುದಿದ್ದರೆ ಪಾಕಿಸ್ತಾನ ವಿಚಾರದಲ್ಲಿ ಏಕೆ ಸಾಧ್ಯವಿಲ್ಲ ಎಂದು ಖಾನ್ ಪ್ರಶ್ನೆ ಮಾಡಿದ್ದಾರೆ. ಹಾಗಿದ್ದರೆ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಭಾರತದ ವತಿಯಿಂದಲೇ ಹೆಚ್ಚಿನ ಅವಧಿಯಲ್ಲಿ ಮಾತುಕತೆಗೆ ಮಿತ್ರತ್ವದ ಕೈಯ್ಯೊಡ್ಡಿದ್ದಾಗ ಅದನ್ನು ಕುಯ್ದು ಹಾಕುವ ಕೆಲಸ ಮಾಡಿದ್ದವರು ಯಾರೆಂಬ ಪ್ರಶ್ನೆಗೆ ಅವರೇ ಉತ್ತರ ಕಂಡುಕೊಳ್ಳಬೇಕಾಗಿದೆ.
ಇತಿಹಾಸದ ಪುಟಗಳನ್ನು ತಿರುವಿ ಸಿಂಹಾವಲೋಕನ ನಡೆಸಿದಾಗ ಮಾತುಕತೆ ಬೇಕೆಂದು ಪಾಕಿಸ್ತಾನ ಸರ್ಕಾರದ ವತಿಯಿಂದ ಎಷ್ಟು ಬಾರಿ ಮುತುವರ್ಜಿ ವಹಿಸಲಾಗಿದೆ ಎಂಬ ಅಂಶ ಹಗಲಿನಷ್ಟೇ ಸತ್ಯವಾಗಿ ಗೊತ್ತಾಗುತ್ತದೆ.
ನೆರೆಯ ರಾಷ್ಟ್ರದ ರೈಲ್ವೆ ಸಚಿವ ಶೇಖ್ ರಶೀದ್ ಅಹ್ಮದ್ ಭಾರತದ ಜತೆಗೆ ಪರಮಾಣು ಯುದ್ಧ ನಡೆಸುವ ಬೆದರಿಕೆ ಹಾಕುತ್ತಿದ್ದಾರೆ. ಆ ರಾಷ್ಟ್ರದಲ್ಲಿನ ಸರ್ಕಾರ ಮೇಲ್ನೋಟಕ್ಕೆ ಮಾತ್ರ ಚುನಾಯಿತರಿಂದ ನಡೆಸಲ್ಪಡುತ್ತಿದೆ. ಸತ್ಯವೇನೆಂದರೆ ಉಗ್ರ ಸಂಘಟನೆಗಳು, ಸೇನೆಯೇ ಅಲ್ಲಿನ ಸರ್ಕಾರವೆಂಬ ರಥದ ಕುದುರೆಗಳ ವಾಘೆಗಳನ್ನು ಹಿಡಿದು ನಿಯಂತ್ರಿಸುತ್ತಿವೆ.
ನೆರೆಯ ರಾಷ್ಟ್ರದ ಪ್ರಧಾನಮಂತ್ರಿ ಬೂಟಾಟಿಕೆಯ ಮಾತುಗಳನ್ನು ಬಿಟ್ಟು ನಿಜ ಒಪ್ಪಿಕೊಳ್ಳುವ ಧೈರ್ಯ ತೋರಿಸಲಿ. ಆ ದಿಟ್ಟತನವೇ ಅವರಲ್ಲಿ ಇಲ್ಲದ್ದಕ್ಕೆ ಭಾರತವನ್ನು ಆಡಿಕೊಂಡರೆ ಪ್ರಯೋಜನವೇ ಇಲ್ಲ. ಸಾಕ್ಷ್ಯವಿದ್ದರೆ ಕೊಡಿ ಎಂದಿರುವುದಕ್ಕೆ ಪಂಜಾಬ್ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಕ್ಯಾ.ಅಮರಿಂದರ್ ಸಿಂಗ್ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ನಾಯಕ, ಉಗ್ರ ಮಸೂದ್ ಅಝರ್ ಭಾವಲ್ಪುರದಲ್ಲಿ ಕುಳಿತಿದ್ದಾನೆ. ಸಾಧ್ಯವಿದ್ದರೆ ಬಂಧಿಸಿ ಎಂದು ಹೇಳಿದ್ದಾರೆ. ಅದನ್ನು ಸ್ವೀಕರಿಸುವ ಧೈರ್ಯ ಪಾಕಿಸ್ತಾನದ ಪ್ರಧಾನಮಂತ್ರಿಗೆ ಇದೆಯೇ?
ದೇಶದ ಒಳಗೆ ಕೂಡ ನೆರೆಯ ರಾಷ್ಟ್ರದ ಕುಕೃತ್ಯ ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲಿಸುವ ಪ್ರಯತ್ನವೇಕೆ ನಡೆಯುತ್ತಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಇಂಥ ಪ್ರಯತ್ನ ನಡೆದಿರುವುದು ಖಂಡನೀಯ. ಜತೆಗೆ ಸೇನಾ ಪಡೆಗಳ ಸ್ಥೈರ್ಯ ತಗ್ಗಿಸುವಂತೆ ಹೇಳಿಕೆ ನೀಡುವುದನ್ನೂ ಕಾನೂನಿನ ಅನ್ವಯ ಸೂಕ್ತವಾಗಿಯೇ ದಂಡಿಸಬೇಕಾಗಿದೆ. ಹೀಗಾಗಿ ದೇಶದೊಳಗಿರುವವರೂ ಅರಿತುಗೊಂಡು ವ್ಯವಹರಿಸುವುದು ಉತ್ತಮ.