Advertisement
ಇದು ಮಳವಳ್ಳಿ ತಾಲೂಕಿನ ಹೊನಗಹಳ್ಳಿ ಗ್ರಾಮದ ಕಥೆ. ಈ ಊರಿನಲ್ಲಿ 220 ಕುಟುಂಬಗಳು ನೆಲೆಸಿವೆ. 1300 ಜನಸಂಖ್ಯೆ ಹೊಂದಿರುವ ಹಳ್ಳಿ. ಊರಿಗೆ ಅಗತ್ಯವಾಗಿ ಬೇಕಾಗಿರುವ ರಸ್ತೆ, ಚರಂಡಿ, ಕುಡಿಯುವ ನೀರು, ಆಸ್ಪತ್ರೆ ಸೇರಿದಂತೆ ಯಾವೊಂದು ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಅಂಬೇಡ್ಕರ್ ಭವನಕ್ಕೆ ಗುದ್ದಲಿ ಪೂಜೆ ಮಾಡಿದ್ದಷ್ಟೇ ಮುಂದೆ ಕೆಲಸ ಸಾಗಲೇ ಇಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಬಂದು ಹೋದ ಬಳಿಕ ಗ್ರಾಮದ ಅಭಿವೃದ್ಧಿ ಕನಸು ಇಂದಿಗೂ ಕನಸಾಗಿಯೇ ಉಳಿದಿದೆ. ಈ ಗ್ರಾಮದ ಮಸಣಯ್ಯ ಅವರ ಮನೆಯಲ್ಲಿ 6 ಏಪ್ರಿಲ್ 2007ರಲ್ಲಿ ಸಿಎಂ ಕುಮಾರಸ್ವಾಮಿ ವಾಸ್ತವ್ಯ ಹೂಡಿದ್ದರು. ಮುಖ್ಯಮಂತ್ರಿ ಊರಿಗೆ ಬರುತ್ತಾರೆಂಬ ಕಾರಣಕ್ಕೆ ಮಸಣಯ್ಯನವರ ಮನೆಯ ಬೀದಿಗೆ ರಸ್ತೆ ನಿರ್ಮಿಸಲಾಗಿತ್ತು. ಊರಿನ ಜನರಿಗೆ ಪಡಿತರ ಚೀಟಿ, ಅರ್ಹರಿಗೆ ಸಂಧ್ಯಾ ಸುರಕ್ಷಾ ಹಾಗೂ ವಿಧವಾ ವೇತನ ಸೌಲಭ್ಯವನ್ನು ಕಲ್ಪಿಸಿಕೊಡಲಾಗಿತ್ತು. ಗ್ರಾಮದ ಹರಿಜನ ಕಾಲೋನಿ ಕತ್ತಲೆಯಲ್ಲಿ ಮುಳುಗಿತ್ತು. ಈಗ ಕಾಲೋನಿಗೆ ಪ್ರತ್ಯೇಕ ಟ್ರಾನ್ಸ್‌ಫಾರ್ಮರ್ ಅಳವಡಿಸಿ ವಿದ್ಯುಚ್ಚಕ್ತಿ ಸೌಲಭ್ಯ ಕಲ್ಪಿಸಿದ್ದರಿಂದ ಬೆಳಕು ಕಂಡಿದೆ. ಅದನ್ನು ಹೊರತು ಪಡಿಸಿದಂತೆ ಇನ್ನಾವುದೇ ಅಭಿವೃದ್ಧಿ ಕಂಡಿಲ್ಲ.
Related Articles
Advertisement
ಚರಂಡಿ ವ್ಯವಸ್ಥೆ ಹಾಳು: ಊರಿನಲ್ಲಿರುವ ಚರಂಡಿ ವ್ಯವಸ್ಥೆಯೂ ಹಾಳಾಗಿವೆ. ಅದನ್ನು ಉತ್ತಮಗೊಳಿ ಸುವುದಕ್ಕೆ ಯಾರೂ ಮುಂದಾಗಿಲ್ಲ. ಚರಂಡಿಗಳು ಅಲ್ಲಲ್ಲಿ ಕಟ್ಟಿಕೊಂಡು ಅಧ್ವಾನ ಸ್ಥಿತಿಯಲ್ಲಿವೆ. ಸೊಳ್ಳೆಗಳ ಉತ್ಪತ್ತಿ ಕೇಂದ್ರಗಳಾಗಿವೆ. ಅಂಗನವಾಡಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿಎಂ ಕುಮಾರ ಸ್ವಾಮಿ ಗ್ರಾಮ ವಾಸ್ತವ್ಯಕ್ಕಿಂತ ಮೊದಲೇ ಇದ್ದವು. ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲ. ದಾದಿಯರಿರುವ ಕೇಂದ್ರ ಮಾತ್ರ ಇದ್ದು, ಆಸ್ಪತ್ರೆಗಾಗಿ ಬೆಳಕವಾಡಿಗೆ ಹೋಗುವುದು ಗ್ರಾಮಸ್ಥರಿಗೆ ಅನಿವಾರ್ಯವಾಗಿದೆ.
ಶಿಥಿಲಗೊಂಡ ವಿದ್ಯುತ್ ಕಂಬಗಳು: ಗ್ರಾಮದಲ್ಲಿ ಹಲವು ವಿದ್ಯುತ್ ಕಂಬಗಳು ಶಿಥಿಲಾವಸ್ಥೆಯಲ್ಲಿದ್ದು, ಈಗಲೂ 15 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ದುಸ್ಥಿತಿಯಲ್ಲಿವೆ. ಇತ್ತೀಚೆಗೆ 6 ಕಂಬಗಳನ್ನು ಮಾತ್ರ ಬದಲಿಸಲಾಗಿದೆ. ಇನ್ನುಳಿದ ಕಂಬಗಳ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರೂ ಬದಲಾಯಿಸಿಲ್ಲ ಎನ್ನುವುದು ಗ್ರಾಮಸ್ಥರು ಹೇಳುವ ಮಾತು.
● ಎ.ಎಸ್.ಪ್ರಭಾಕರ್