ಮಂಡ್ಯ: ಮೈಕ್ರೋ ಫೈನಾನ್ಸ್‌ಗಳು ಹಾಗೂ ವಾಹನ ಸಾಲ ನೀಡುವ ಸಂಸ್ಥೆಗಳು ಸಾಲ ವಸೂಲಾತಿಗೆ ಯಾವುದೇ ಒತ್ತಡ ಹಾಕಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮೈಕ್ರೋ ಫೈನಾನ್ಸ್ ಹಾಗೂ ಕರುನಾಡ ಸೇವಕರ ಸಂಘಟನೆ ಪದಾಧಿಕಾರಿಗಳೊಂದಿಗೆ ನಡೆದ ಜಂಟಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಕೋವಿಡ್ ಕಾರಣಕ್ಕೆ ಇಡೀ ದೇಶದಲ್ಲಿ ಉದ್ಯೋಗ, ಉದ್ದಿಮೆ ಸ್ಥಗಿತಗೊಂಡಿದೆ. ಜನರ ದುಡಿಯುವ ಅವಕಾಶಗಳು ಕಡಿಮೆಯಾಗಿವೆ. ಈ ಸಂದರ್ಭದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲ ವಸೂಲಾತಿಗೆ ಸಾರ್ವಜನಿಕರ ಮೇಲೆ ಒತ್ತಡ ಹಾಕದೆ, ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಬೇಕು. ಅತ್ಯಂತ ಸಂದಿಗ್ಧ ಸನ್ನಿವೇಶ ದೇಶಾದ್ಯಂತ ನಿರ್ಮಾಣವಾಗಿದೆ. ಸಾಲ ವಸೂಲು ಮಾಡುವ ಕೆಳಹಂತದ ನೌಕರರು ಅನುಚಿತವಾಗಿ ವರ್ತಿಸಿ ಸಂಘರ್ಷ ಸೃಷ್ಟಿ ಮಾಡಬಾರದು. ಈ ಸಂಬಂಧ ಈಗಾಗಲೇ ಜನಪರ ಸಂಘಟನೆಗಳು ಜಿಲ್ಲಾಡಳಿತಕ್ಕೆ ದೂರು ನೀಡಿವೆ. ಸಾಲ ಕಟ್ಟುವ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಕಂತುಗಳನ್ನು ಸಂಗ್ರಹಿಸುವಂತೆ ಸೂಚನೆ ನೀಡಿದರು.
ಗೂಂಡಾಗಿರಿ: ಸಭೆ ಆರಂಭಕ್ಕೂ ಮುನ್ನ ಮಾತನಾಡಿದ ಸಂಘಟನೆಯ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ, ರಿಸರ್ವ್ ಬ್ಯಾಂಕ್ ರಿಯಾಯಿತಿ ಘೋಷಿಸಿದ ಸಂದರ್ಭದಲ್ಲೂ ಸಹ ಸಾಲ ವಸೂಲಾತಿಗೆ ಮೈಕ್ರೋ ಫೈನಾನ್ಸ್‌ಗಳು ಪಟ್ಟು ಹಿಡಿದಿವೆ. ವಾಹನ ಸಾಲ ನೀಡುವ ಬಜಾಜ್ ಮಹೇಂದ್ರ, ಚೋಳಮಂಡಲ, ಶ್ರೀರಾಮ್ ಸಂಸ್ಥೆಗಳು ಅಕ್ಷರಶಃ ಸಂಘಟಿತ ಗೂಂಡಾಗಿರಿ ನಡೆಸುತ್ತಿವೆ. ಇವರುಗಳ ಕಿರುಕುಳದಿಂದಾಗಿ ಜಿಲ್ಲೆಯ ಹಲವರು ಊರು ತೊರೆದಿದ್ದಾರೆ. ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಾಹನಗಳ ಜಪ್ತಿ ಹೆಸರಲ್ಲಿ ರೌಡಿಗಳನ್ನು ಮುಂದಿಟ್ಟುಕೊಂಡು ಹೆದರಿಸಲಾಗುತ್ತಿದೆ. ನಿಯಮಾನುಸಾರ ಸಾಲ ಕಟ್ಟಲು ಸ್ಥಳೀಯವಾಗಿ ಕಚೇರಿ ತೆರೆಯದೆ ಬೆಂಗಳೂರು ಮೈಸೂರಿಗೆ ಅಲೆಸುವುದು ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭರವಸೆ: ಮೈಕ್ರೋ ಫೈನಾನ್ಸ್ ಒಕ್ಕೂಟದ ಮುಖ್ಯಸ್ಥ ರವಿಚಂದ್ರ ಮಾತನಾಡಿ, ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೂಲಕ ಒಂದೂವರೆ ಸಾವಿರ ಕೋಟಿ ಸಾಲ ನೀಡಲಾಗಿದೆ. ಸಾಲ ವಸೂಲಾತಿಯಲ್ಲಿ ಮಂಡ್ಯ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಸಾರ್ವಜನಿಕರ ದೂರುಗಳ ಸಂಬಂಧ ಕ್ರಮ ವಹಿಸಿ ವಸೂಲಾತಿಯಲ್ಲಿ ಯಾವುದೇ ಒತ್ತಡ ಹೇರುವ ಬದಲು ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸುವುದಾಗಿ ಸಭೆಗೆ ಭರವಸೆ ನೀಡಿದರು. ಸಭೆಯಲ್ಲಿ ಲೀಡ್ ಬ್ಯಾಂಕ್ ಪ್ರತಿನಿಧಿಗಳು, ವಿವಿಧ ಮೈಕ್ರೋ ಫೈನಾನ್ಸ್ ಮುಖ್ಯಸ್ಥರು, ಕರುನಾಡ ಸೇವಕರು ಸಂಘಟನೆ ನಗರಾಧ್ಯಕ್ಷ ಚಂದ್ರಶೇಖರ, ಸಂದೀಪ್, ಶಂಕರ್, ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ವೇಣುಗೋಪಾಲ, ರೈತಸಂಘದ ಕೆಂಪೂಗೌಡ, ಜಬೀವುಲ್ಲಾ, ಪ್ರಸನ್ನ ಬಾಣಸವಾಡಿ, ನಗರಸಭಾ ಸದಸ್ಯರಾದ ನಯೀಮ್, ಝಾಕೀರ್ ಇತರರಿದ್ದರು.