Advertisement

ಸಾಮಾಜಿಕ ಜಾಲತಾಣದ ಕಸ ತಲೆಗೆ ತುಂಬಿಕೊಳ್ಳಬೇಡಿ: ಕಾಯ್ಕಿಣಿ

01:01 PM Sep 28, 2017 | |

ಮೈಸೂರು: ಯುವ ಕವಿಗಳು ಫೇಸ್‌ಬುಕ್‌ಗೆ ಸೀಮಿತಗೊಳ್ಳದೆ ಹಳೆಯ ಕವಿಗಳ ಬಗ್ಗೆ ಓದಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಿ ಎಂದು ಖ್ಯಾತ ಗೀತರಚನಕಾರ ಜಯಂತ್‌ಕಾಯ್ಕಿಣಿ ಕಿವಿಮಾತು ಹೇಳಿದರು. ದಸರಾ ಕವಿಗೋಷ್ಠಿ ಉಪಸಮಿತಿ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ವಿಖ್ಯಾತ ಕವಿಗೋಷ್ಠಿಯಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡು ಮಾತನಾಡಿದರು.

Advertisement

ಪ್ರತಿಯೊಬ್ಬ ಕವಿಯೂ ಮೂಲತಃ ಓದುಗ, ಓದು ಮಾತ್ರ ಕವಿಯನ್ನು ಬೆಳೆಸುತ್ತದೆ. ಹೀಗಾಗಿ ಹಳೆಯ ಕವಿಗಳನ್ನು ಓದಿಕೊಳ್ಳಿ, ಅದನ್ನು ಬಿಟ್ಟು ಫೇಸ್‌ಬುಕ್‌ನಲ್ಲಿ ಓದುತ್ತೇನೆ. ಫೇಸ್‌ಬುಕ್‌ನಲ್ಲೇ ಬರೆಯುತ್ತೇನೆ ಎಂದರೆ ಕಷ್ಟ ಎಂದರು. ಮೊದಲೆಲ್ಲಾ ದಸರಾ ಕವಿಗೋಷ್ಠಿಯೆಂದರೆ ಭಯ ಇರುತ್ತಿತ್ತು. ಈಗ ಓದುಗರಿಗಿಂತ ಕವಿಗಳು ಹೆಚ್ಚಾಗಿ, ಕೇಳುಗರಿಗಿಂತ ಹಾಡುಗಾರರು ಹೆಚ್ಚಾಗಿ ವಿಫ‌ುಲತೆ ಹೆಚ್ಚಿರುವುದರಿಂದ ಗುಣಮಟ್ಟ ಇದ್ದರೂ ಕಣ್ಣಿಗೆ ಕಾಣದಂತಾಗಿದೆ.

ಈ ವಿಫ‌ುಲತೆಯೇ ವಿಫ‌ಲತೆ ಉಂಟುಮಾಡುತ್ತಿದೆ. ಸಾಮಾಜಿಕ ಕೌಟುಂಬಿಕತೆಯಿಂದ ವಂಚಿತವಾಗಿ, ಮನೋದಾಸ್ಯಕ್ಕೆ ಒಳಗಾಗಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿನ ಕಸವನ್ನು ತಲೆಯಲ್ಲಿ ತುಂಬಿಕೊಂಡು, ಏನೂ ಮಾಡದೆ, ಏನೋ ಮಾಡಿದ್ದೇನೆ ಎಂಬ ಭ್ರಮೆಯಲ್ಲಿದ್ದೇವೆ ಎಂದು ಹೇಳಿದರು. ಕವಿಗಳಾದವರು ನೀರಲ್ಲಿ ಮುಳುಗಿ ಮುತ್ತು,ರತ್ನಗಳನ್ನು ಹುಡುಕುತ್ತಿರುತ್ತೇವೆ. ಮೇಲೆದ್ದು ಉಸಿರುತೆಗೆದುಕೊಂಡು ಮತ್ತೆ ಮುಳುಗಿದಾಗ ಮಾತ್ರ ಮುತ್ತು, ರತ್ನಗಳು ಸಿಗುತ್ತವೆ ಎಂದರು.

ಕಾವ್ಯ ಬರೆಯುವುದರಿಂದ ಪತ್ರಿಕೆಗಳಲ್ಲಿ ಫೋಟೋ ಬರುತ್ತೆ, ವಿಸಿಟಿಂಗ್‌ ಕಾರ್ಡ್‌ ಮಾಡಿಸಿಕೊಳ್ಳಬಹುದು, ಪ್ರಶಸ್ತಿ ಬರಬೇಕು ಎಂಬ ಕಾರಣಕ್ಕೆ ತಗಡು ಫ‌ಲಕಗಳಿಗೆ ಸೀಮಿತವಾಗಬೇಡಿ ಎಂದ ಅವರು, ಕವಿಗಳು ತನ್ನ ಹೆಸರಿನ ಹಿಂದೆ ಡಾಕ್ಟರೇಟ್‌ ಪದವಿ ಹಾಕಿಕೊಳ್ಳುವುದು ಭಾರತದ ಅವಲಕ್ಷಣ. ಜಗತ್ತಿನ ದೊಡ್ಡ ದೊಡ್ಡ ಕವಿಗಳಾÂರು ತಮ್ಮ ಹೆಸರಿನ ಹಿಂದೆ ಡಾಕ್ಟರೇಟ್‌ ಹಾಕಿಕೊಂಡಿಲ್ಲ ಎಂದರು.

ಕವಿಗಳು ಬರೆಯುವುದನ್ನು ಕಷ್ಟ ಮಾಡಿಕೊಳ್ಳಬೇಕು. ಆಗ ಮಾತ್ರ ಬೆಳೆಯಲು ಸಾಧ್ಯ, 20 ಕವನ ಬರೆದು ಒಂದು ಪುಸ್ತಕ ಮಾಡಿದೆ, ಪ್ರಶಸ್ತಿ ಬಂತು ಎಂಬಂತೆ ಆಗಬಾರದು ಎಂದು ಹೇಳಿದರು. ಹಂಪಿ ಕನ್ನಡ ವಿವಿ ಕುಲಪತಿ ಡಾ.ಮಲ್ಲಿಕಾ ಘಂಟಿ, ದಸರಾ ಕವಿಗೋಷ್ಠಿ ಮೂಲಕ ಕಾವ್ಯಕ್ಕೆ ಮತ್ತೆ ರಾಜ ಮನ್ನಣೆ, ಗೌರವ ಸಿಕ್ಕಿದೆ. ಇಂತಹ ಸಂದರ್ಭದಲ್ಲಿ ಹೇಗೆ? ಏನು ಮಾತನಾಡಬೇಕು ಎಂಬುದನ್ನು ಕವಿತೆ ನಿರ್ಧಾರ ಮಾಡಬೇಕಿದೆ ಎಂದರು. 

Advertisement

ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಸ್‌.ಜಿ.ಸಿದ್ದರಾಮಯ್ಯ, ಕವಿಗಳು ನನ್ನ ಕವಿತೆ ಸುಳ್ಳು ಹೇಳುತ್ತಿಲ್ಲ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಆದಿ ಕವಿ ಪಂಪ ಕನ್ನಡ ಕಾವ್ಯ ಪರಂಪರೆಗೆ ಹೊಸ ಕಾವ್ಯ ಮೀಮಾಂಸೆ ಬರೆದಿರುವಂತೆ ಸರಸ್ವತಿ ಹೆಣ್ಣಿನ ಅಲಂಕಾರ ಪಡೆದವಳಲ್ಲ, ನನ್ನ ಸರಸ್ವತಿ ಪರಮ ಜಿನೇಂದ್ರವಾಣಿ ಎಂದಿದ್ದಾನೆ. ಶರಣರು ಮಾತೆಂಬುದು ಜ್ಯೋತಿರ್ಲಿಂಗ ಎಂದಿದ್ದಾರೆ.

ಹೀಗಾಗಿ ಕಾವ್ಯ ಯಾವತ್ತೂ ಸೌಖ್ಯ ಕೊಡುತ್ತದೆ. ಅಂಕಿತಗಳಿಂದಲ್ಲ ಎಂದರು. ಇದೇ ವೇಳೆ ನಾಡಿನ ವಿವಿಧ ಮೂಲೆಗಳಿಂದ ಆಗಮಿಸಿದ್ದ 36 ಜನ ಕವಿಗಳು ತಮ್ಮ ಕವನ ವಾಚನ ಮಾಡಿದರು. ಕವಿಗೋಷ್ಠಿ ಉಪ ಸಮಿತಿ ಅಧ್ಯಕ್ಷೆ ರತ್ನ ಅರಸ್‌, ಉಪ ವಿಶೇಷಾಧಿಕಾರಿ ಡಾ.ಬಿ.ಕೆ.ಎಸ್‌.ವರ್ಧನ್‌, ಡಾ.ಮಂಜುನಾಥ್‌, ಡಾ.ಲೋಲಾಕ್ಷಿ ಮತ್ತಿತರರಿದ್ದರು.

ಮೃಗೀಯ ಭಾವದೊಳಗೆ ವಿಚ್ಛಿದ್ರಕಾರಕ ಶಕ್ತಿಗಳನ್ನು ಹೊಡೆದೋಡಿಸಿ ಮನುಷ್ಯನನ್ನಾಗಿಸುವುದೇ ಕಾವ್ಯದ ಶಕ್ತಿ. ಕಲ್ಪನೆ ಕಾವ್ಯವಾಗುವುದಿಲ್ಲ. ಅಕ್ಷರಕ್ಕೆ ತೆರೆದುಕೊಂಡ ಕವಿ ಅಧ್ಯಯನ ಮಾಡದಿದ್ದರೆ ಬರೆಯಲು ವಸ್ತು ಸಿಗಲ್ಲ.
-ಡಾ.ಎಸ್‌.ಜಿ.ಸಿದ್ದರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next