Advertisement

ರೈತರ ವಿರುದ್ಧ ಮೊಕದ್ದಮೆ ದಾಖಲಿಸದಿರಿ

11:04 PM Nov 12, 2019 | Team Udayavani |

ಬೆಂಗಳೂರು: ರೈತರು, ನೆರೆ ಸಂತ್ರಸ್ತರಿಗೆ ನೆರವಾಗುವ ಸಂಬಂಧ ನೀಡಿರುವ ಸಲಹೆ, ಸೂಚನೆ ಬಗ್ಗೆ ಪರಿಗಣಿಸಲಾಗುವುದು ಹಾಗೂ ಚೆಕ್‌ ಬೌನ್ಸ್‌ ಪ್ರಕರಣಗಳಲ್ಲಿ ರೈತರ ವಿರುದ್ಧ ಮೊಕದ್ದಮೆ ದಾಖಲಿಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ರೈತರ ಮುಖಂಡರಿಗೆ ಭರವಸೆ ನೀಡಿದರು.

Advertisement

ಗೃಹ ಕಚೇರಿ ಕೃಷ್ಣಾದಲ್ಲಿ ಕೋಡಿಹಳ್ಳಿ ಚಂದ್ರಶೇಖರ್‌ ನೇತೃತ್ವದ ರೈತ ಮುಖಂಡರೊಂದಿಗೆ ಸಭೆ ನಡೆಸಿದ ಯಡಿಯೂರಪ್ಪ, ರೈತ ಮುಖಂಡರ ಸಲಹೆ, ಸೂಚನೆಯನ್ನು ಪರಿಗಣಿಸಲಾಗುವುದು. ಸರ್ಕಾರದ ಇತಿಮಿತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಸಾಧ್ಯವಾದಷ್ಟು ಬೇಗ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಇದಕ್ಕೂ ಮೊದಲು ರೈತ ಮುಖಂಡರ ನಿಯೋಗ ಪ್ರಮುಖ ಬೇಡಿಕೆಗಳನ್ನು ಪ್ರಸ್ತಾಪಿಸಿ, ನೆರೆಯಿಂದ ಮನೆ ಕಳೆದುಕೊಂಡವರಿಗೆ 10 ಲಕ್ಷ ರೂ.ಗಿಂತ ಕಡಿಮೆಯಿಲ್ಲದಂತೆ ಗುಣಮಟ್ಟದ ಮನೆ ನಿರ್ಮಿಸಬೇಕು. ನೆರೆಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು. ನೆರೆಯಿಂದಾದ ಬೆಳೆ ನಷ್ಟಕ್ಕೆ ಡಾ.ಸ್ವಾಮಿನಾಥನ್‌ ವರದಿಯನ್ವಯ ನಷ್ಟ ಭರಿಸಬೇಕು. ಪ್ರವಾಹದಿಂದ ಪ್ರತಿ ಬಾರಿ ಮುಳುಗಡೆಯಾಗುವ ಹಳ್ಳಿಗಳನ್ನು ಸ್ಥಳಾಂತರಿಸಬೇಕು ಎಂದು ನಿಯೋಗ ಮನವಿ ಮಾಡಿತು.

ನೆರೆಯಿಂದ ಸಂಪೂರ್ಣ ಹಾಳಾಗಿರುವ ಭೂಮಿಗೆ ಪರ್ಯಾಯ ಭೂಮಿ ನೀಡಬೇಕು. ಬರ, ನೆರೆಯಿಂದ ತತ್ತರಿಸಿರುವ ಹೊತ್ತಿನಲ್ಲಿ ಹಣಕಾಸು ಸಂಸ್ಥೆಗಳ ಕಿರು ಸಾಲ ವಸೂಲಾತಿಗೆ ಕಡಿವಾಣ ಹಾಕಬೇಕು. ಬರಪೀಡಿತ ಪ್ರದೇಶದ ರೈತರ ಜಮೀನುಗಳಿಗೆ ಎಕರೆಗೆ 25,000 ರೂ. ನೀಡಬೇಕು. ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಮಾಡಬೇಕು. ನೀರಾವರಿ ಯೋಜನೆಗಳಿಗೆ ಬಜೆಟ್‌ನಲ್ಲಿ ಒಂದು ಲಕ್ಷ ಕೋಟಿ ರೂ. ಅನುದಾನ ಕಾಯ್ದಿರಿಸಬೇಕು ಎಂದು ಆಗ್ರಹಿಸಿತು.

ಕೆಪಿಸಿಎಲ್‌ ವಿಧಾನ ಅಳವಡಿಕೆಗೆ ಕೆಪಿಟಿಸಿಎಲ್‌ ಒಪ್ಪಿಗೆ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದ ನಿರ್ದೇಶಕರ ಮಂಡಳಿ ಸಭೆಯಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ನೇಮಕಾತಿಗೆ ಕರ್ನಾಟಕ ವಿದ್ಯುತ್‌ ನಿಗಮ (ಕೆಪಿಸಿಎಲ್‌) ಅನುಸರಿಸುವ ವಿದ್ಯಾರ್ಹತೆ ಹಾಗೂ ಇತರೆ ಮಾನದಂಡ ಅನುಸರಿಸುವ ಕುರಿತು ಒಪ್ಪಿಗೆ ನೀಡಲಾಗಿದೆ. ರೇಸ್‌ಕೋರ್ಸ್‌ ರಸ್ತೆಯ ಕೆಪಿಸಿಎಲ್‌ನ ಶಕ್ತಿ ಭವನದಲ್ಲಿ ನಡೆದ ಕೆಪಿಟಿಸಿಎಲ್‌ ನಿರ್ದೇಶಕರ ಮಂಡಳಿ ಸಭೆಯಲ್ಲಿ ಹಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.

Advertisement

ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ನೇಮಕಕ್ಕೆ ಸಂಬಂಧಪಟ್ಟಂತೆ ಕೆಪಿಸಿಎಲ್‌ ವಿಧಿಸುವ ವಿದ್ಯಾರ್ಹತೆ, ಪ್ರಮಾಣ ಇತರೆ ಮಾನದಂಡಗಳನ್ನು ಕೆಪಿಟಿಸಿಎಲ್‌ನಲ್ಲಿ ಅಳವಡಿಸಿಕೊಳ್ಳಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಅದರಂತೆ ಇನ್ನು ಮುಂದೆ ಕೆಪಿಟಿಸಿಎಲ್‌ನಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ನೇಮಕದಲ್ಲಿ ಕೆಪಿಸಿಎಲ್‌ನಲ್ಲಿ ಅನುಸರಿಸುತ್ತಿರುವ ಮಾನದಂಡಗಳು ಜಾರಿಗೆ ಬರಲಿವೆ ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next