Advertisement
ಜಿಲ್ಲಾ ಪತ್ರಕರ್ತರ ಸಂಘ ಮಂಗಳವಾರ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆಯ ಮೇರೆಗೆ ಕಳೆದ 20 ದಿನಗಳಿಂದ ಮೈಸೂರಿನಲ್ಲಿ ದಸರಾ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಪಾರಂಪರಿಕ ಮೈಸೂರು ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ಆಚರಿಸುವ ಮೂಲಕ ಮೈಸೂರಿಗೆ ಬರುವ ಪ್ರವಾಸಿಗರ ಮನಗೆಲ್ಲುವ ಮೂಲಕ ಮೈಸೂರಿನ ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸಲು ಪ್ರಯತ್ನ ನಡೆಸಿರುವುದಾಗಿ ಹೇಳಿದರು. ಮೈಸೂರಿನ ರಸ್ತೆಗಳಲ್ಲಿನ ಗುಂಡಿ ಮುಚ್ಚುವ ಕೆಲಸ ಮಾಡಲಾಗುತ್ತಿಲ್ಲ. ರಸ್ತೆ ಗುಂಡಿ ಮುಚ್ಚಲು ಟೆಂಡರ್ ಆಗಿದ್ದು, ಮಳೆ ನಿಂತ ಕೂಡಲೇ ಗುಂಡಿಗಳನ್ನು ಮುಚ್ಚಲಾಗುವುದು ಎಂದರು.
Related Articles
Advertisement
ಗೊಂದಲ ನಿವಾರಣೆ: ಪ್ರತಿ ವರ್ಷ ಪಾಸ್‌ಗಳಿಗಾಗಿ ಗೊಂದಲ ಏರ್ಪಡುವ ಮಾಹಿತಿ ಇದೆ. ಒಂದೇ ಪಾಸನ್ನು ನಾಲ್ಕು ನಾಲ್ಕು ಜನರಿಗೆ ಕೊಟ್ಟು ಗೊಂದಲ ಸೃಷ್ಟಿಮಾಡುತ್ತ ಇದ್ದಿದ್ದೂ ಇದೆ. ಇದೇ ಕಾರಣಕ್ಕೆ ದಸರಾ ಗೋಲ್ಡ್‌ಕಾರ್ಡ್ ಅನ್ನು 2500ದೊಳಗೆ ಮಿತಿಗೊಳಿಸಲು ನಿರ್ಧರಿಸಲಾಗಿದೆ. ಜತೆಗೆ ರಾತ್ರಿ ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯತು ಸಂದರ್ಭದಲ್ಲಿ ಅಧಿಕಾರಿಗಳೇ ತುಂಬಿರುತ್ತಾರೆ ಎಂಬ ಅಪವಾದ ಹೋಗಲಾಡಿಸಲು ಹಿಂದಿನ ದಿನ ನಡೆಯುವ ಪಂಜಿನ ಕವಾಯತು ತಾಲೀಮಿಗೆ ಅಧಿಕಾರಿಗಳು ಮತ್ತು ಅವರ ಕುಟುಂಬ ವರ್ಗದವರು ವೀಕ್ಷಿಸಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದರು.
ವಾಹನಗಳಿಗೆ ಪ್ರವೇಶ ತೆರಿಗೆ ಕಡಿತ: ದಸರಾ ಸಂದರ್ಭದಲ್ಲಿ ಒಂದು ತಿಂಗಳ ಕಾಲ ಹೊರ ರಾಜ್ಯಗಳಿಂದ ಮೈಸೂರಿಗೆ ಬರುವ ಪ್ರವಾಸಿ ವಾಹನಗಳಿಗೆ ಪ್ರವೇಶ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಈ ಬಾರಿ ಮೈಸೂರಿನ ಜೊತೆಗೆ ಸುತ್ತಮುತ್ತಲಿನ ಮಂಡ್ಯ, ಕೊಡಗು, ಚಾಮರಾಜನಗರ ಜಿಲ್ಲೆಗಳಿಗೂ ಪ್ರವಾಸಿಗರು ಹೋಗಿ ಬರಲಿ ಎಂಬ ಕಾರಣಕ್ಕೆ ಆ ಜಿಲ್ಲೆಗಳಿಗೂ ಪ್ರವೇಶ ತೆರಿಗೆ ವಿನಾಯಿತಿ ನೀಡಲು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುವುದಾಗಿ ಸಚಿವ ವಿ.ಸೋಮಣ್ಣ ತಿಳಿಸಿದರು.
ತೆಪ್ಪೋತ್ಸವದವರೆಗೆ ದೀಪಾಲಂಕಾರ: ನಾಡಹಬ್ಬ ದಸರೆಗೆ ವಿದ್ಯುತ್ ದೀಪಾಲಂಕಾರದಿಂದ ಮೈಸೂರು ಝಗಮಗಿಸುತ್ತದೆ. ಆದರೆ, ಪ್ರತಿ ವರ್ಷ ಜಂಬೂಸವಾರಿ ಮುಗಿದ ಮರು ದಿನವೇ ದೀಪಾಲಂಕಾರ ಸ್ಥಗಿತಗೊಳಿಸುವುದರಿಂದ ಆ ನಂತರ ಮೈಸೂರಿಗೆ ಬರುವ ಪ್ರವಾಸಿಗರಿಗೆ ನಿರಾಸೆಯಾಗುತ್ತದೆ. ಇದಕ್ಕಾಗಿ ಜಂಬೂಸವಾರಿ ಮುಗಿದ ನಂತರ ಚಾಮುಂಡೇಶ್ವರಿ ತೆಪ್ಪೋತ್ಸವ ನಡೆಯುವ ಅ.17ರವರೆಗೂ ದೀಪಾಲಂಕಾರ ಉಳಿಸಿಕೊಳ್ಳಲು ತೀರ್ಮಾನಿಸಲಾಗಿದೆ.