ಬಂಗಾರಪೇಟೆ: ಗಾಂಧಿ ಜೀವನ ಆದರ್ಶ ಪಾಲಿಸುತ್ತಿರುವ ಒಕ್ಕಲಿಗ ಸಮಾಜವು, ನಮ್ಮ ಹಕ್ಕು ಕಸಿದುಕೊಳ್ಳಲು ಮುಂದಾದರೆ ಸುಭಾಷ್‌ಚಂದ್ರ ಬೋಸ್‌ರಂತೆ ಹೋರಾಟ ಮಾಡುವುದಕ್ಕೆ ಸಿದ್ಧವಿದೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಹಿರಿಯ ಮುಖಂಡ, ವಕೀಲ ಕೆ.ವಿ.ಶಂಕರಪ್ಪ ಹೇಳಿದರು.
ಇತ್ತೀಚೆಗೆ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇಳೆ ಷರತ್ತು ಉಲ್ಲಂಘಿಸಿದ್ದಾರೆ ಎಂದು ಸಮಾಜದ ಕೆಲವು ಮುಖಂಡರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿರುವ ಕ್ರಮ ಖಂಡಿಸಿ ಪಟ್ಟಣದ ಒಕ್ಕಲಿಗರ ಭವನದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಸಮುದಾಯದಲ್ಲಿ ಗೊಂದಲ ಉಂಟಾದಾಗ ಅವುಗಳನ್ನು ಸಾಮೂಹಿಕವಾಗಿ ಬಗೆಹರಿಸುವುದು ಒಕ್ಕಲಿಗರೇ ಆಗಿದ್ದಾರೆ ಎಂದರು.
ಕೇಸಾಕಿದ್ರೂ ಹೆದರಬೇಕಿಲ್ಲ: ಬಹುತೇಕ ಒಕ್ಕಲಿಗರು ಬಲಿಷ್ಠವಾಗಿದ್ದರೂ ಎಲ್ಲಾ ವರ್ಗದ ಜನರ ಪ್ರಗತಿಗೆ ಶ್ರಮಿಸುತ್ತಿದೆ. ಇತ್ತೀಚೆಗೆ ಬಂಗಾರಪೇಟೆಯಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಮಾಡಲು ಪೊಲೀಸ್ ಇಲಾಖೆ ಅನುಮತಿ ನೀಡಿದ್ದರೂ ಕೆಲವು ರಾಜಕೀಯ ದುರುದ್ದೇಶಗಳಿಂದ ಮುಖಂಡರ ವಿರುದ್ಧ ದೂರು ದಾಖಲಿಸಿರುವುದು ದುರ್ದೈವ. ತಾಲೂಕಿನಲ್ಲಿ ಒಕ್ಕಲಿಗ ಸಮುದಾಯ ಬಲಿಷ್ಠವಾಗುವುದನ್ನು ಸಹಿಸದ ಕೆಲವರು, ಪೊಲೀಸರ ಮೂಲಕ ದೂರು ದಾಖಲಿಸಿದರೂ ಹೆದರಬೇಕಾಗಿಲ್ಲ ಎಂದರು.
ಯಾವುದೇ ಹೋರಾಟ ಮಾಡಬೇಕಾಗಿದ್ದರೂ ಒಕ್ಕಲಿಗ ಸಮಾಜವು ಸಂಘರ್ಷಕ್ಕೆ ಎಡೆಮಾಡಿಕೊಡು ವುದಿಲ್ಲ. ಪ್ರತಿ ವರ್ಷವೂ ಜಯಂತಿ ಕಾರ್ಯಕ್ರಮಗಳು ನಡೆಯುತ್ತಿವೆ. ಎಂದೂ ಇಂತಹ ಪ್ರಕರಣ ಕಂಡು ಬಂದಿಲ್ಲ. ಒಕ್ಕಲಿಗ ಸಮಾಜ ಏನೆಂಬುದನ್ನು ಮುಂದಿನ ದಿನಗಳಲ್ಲಿ ತೋರುತ್ತೇವೆ. ಸಮಾಜದ ಮೇಲೆ ನಡೆಸುತ್ತಿರುವ ಜಿದ್ದಾಜಿದ್ದಿನ ಪ್ರಹಾರಕ್ಕೆ ತಕ್ಕ ಪಾಠ ಅನುಭವಿಸಬೇಕಾಗುತ್ತದೆ ಎಂದು ಎದುರಾಳಿಗಳಿಗೆ ಎಚ್ಚರಿಕೆ ನೀಡಿದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ವಕ್ಕಲೇರಿ ರಾಮು, ಯಲುವಹಳ್ಳಿ ರಮೇಶ್, ತಾಲೂಕು ಅಧ್ಯಕ್ಷೆ ಯಳಮ್ಮ, ಡಿವೈಎಸ್‌ಪಿ ಶಿವಕುಮಾರ್, ಕಾರ್ಯಾಧ್ಯಕ್ಷ ಪ್ರಕಾಶ್, ಜ್ಯೋತೇನಹಳ್ಳಿ ರಾಮಪ್ಪ, ಚಿಕ್ಕಹೊಸಹಳ್ಳಿ ಮಂಜುನಾಥ್, ಮಾರ್ಕಂಡೇ ಯಗೌಡ, ಕಣಿಂಬೆಲೆ ಶ್ರೀನಿವಾಸ್, ಕೊಂಡಹಳ್ಳಿ ನಾರಾಯಣಸ್ವಾಮಿ, ಹುನ್ಕುಂದ ವೆಂಕಟೇಶ್, ಜುಂಜನಹಳ್ಳಿ ನಾರಾಯಣಸ್ವಾಮಿ, ಬೆಮಲ್ ಆಂಜನೇಯರೆಡ್ಡಿ ಇದ್ದರು.
ಜಿದ್ದಾಜಿದ್ದ ಹೋರಾಟ: ಇತ್ತೀಚಿಗೆ ಪಟ್ಟಣದಲ್ಲಿ ಡಿವೈಎಸ್‌ಪಿ ಶಿವಕುಮಾರ್ ನೇತೃತ್ವದಲ್ಲಿ ನಡೆದ ಕೆಂಪೇಗೌಡರ ಜಯಂತಿ ಕಾರ್ಯಕ್ರಮ, ಶಾಸಕ ನಾರಾಯಣಸ್ವಾಮಿ ಬೆಂಬಲಿತ ಒಕ್ಕಲಿಗರ ಗುಂಪುಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಹೆಚ್ಚುವಂತೆ ಮಾಡಿದೆ. ಮುಖಂಡರ ಮೇಲೆ ಕೇಸು ದಾಖಲಿಸಿದ ಪೊಲೀಸ್ ಇಲಾಖೆ ವಿರುದ್ಧ ಶನಿವಾರ ಬೃಹತ್ ಪ್ರತಿಭಟನೆ ನಡೆಸುವ ಬಗ್ಗೆ ಜಿಲ್ಲೆಯಲ್ಲಿ ಭಾರೀ ಪ್ರಚಾರವೇ ನಡೆದಿತ್ತು. ಶನಿವಾರ ಮಧ್ಯರಾತ್ರಿಯಿಂದಲೇ ಆರಂಭವಾದ ಮಳೆ ಮಧ್ಯಾಹ್ನವಾದರೂ ನಿಲ್ಲಲಿಲ್ಲ. ಹೀಗಾಗಿ ಪೊಲೀಸ್ ವಿರುದ್ಧ ಪ್ರತಿಭಟನೆ ಮಾಡುವುದನ್ನು ಹಿಂಪಡೆದ ಒಕ್ಕಲಿಗರ ಸಂಘವು ತಹಶೀಲ್ದಾರ್‌ಗೆ ಪೊಲೀಸ್ ಇಲಾಖೆಯ ವಿರುದ್ಧ ಮನವಿ ಸಲ್ಲಿಸಿದರು.