Advertisement

ಸಿದ್ದರಾಮಯ್ಯರ ಆಮಿಷಕ್ಕೆ ಬಲಿಯಾಗಬೇಡಿ: ಎಚ್‌ಡಿಕೆ

12:23 PM Feb 25, 2018 | Team Udayavani |

ಮೈಸೂರು: ಮುಂಬರುವ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಜನತೆ ಸಿದ್ದರಾಮಯ್ಯ ಒಡ್ಡುವ ಪಾಪದ ಹಣದ ಆಮಿಷಕ್ಕೆ ಬಲಿಯಾಗದೆ ಸ್ವಾಭಿಮಾನ ಕಾಪಾಡಿಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮನವಿ ಮಾಡಿದರು.

Advertisement

ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಮಾವಿನಹಳ್ಳಿ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಶ್ರೀಚನ್ನಬಸವೇಶ್ವರ ದೇವಸ್ಥಾನ, ಶ್ರೀ ಸಿದ್ಧಪ್ಪಾಜಿ ದೇವಸ್ಥಾನದ ಪ್ರತಿಷ್ಠಾಪನೆ, ಕಾಳಿಕಾಂಬ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಚಾಮುಂಡೇಶ್ವರಿ ನನಗೆ ಜನ್ಮ ಕೊಟ್ಟ ಕ್ಷೇತ್ರ. ನಿಮ್ಮ ಋಣ ತೀರಿಸಲು ಮತ್ತೆ ಬರುತ್ತಿದ್ದೇನೆ. ನನ್ನನ್ನು ಉಳಿಸಿಕೊಳ್ಳುತ್ತೀರೋ ಇಲ್ಲವೋ ಎಂಬ ಸಿದ್ದರಾಮಯ್ಯ ಅವರ ಮಾತಿಗೆ ಕ್ಷೇತ್ರದ ಜನತೆ ಬೆಲೆ ಕೊಡಬೇಡಿ. ಜೆಡಿಎಸ್‌ನಲ್ಲಿದ್ದಾಗ ಏಳು ಬಾರಿ ಹಣಕಾಸು ಸಚಿವರಾಗಿ ಬಜೆಟ್‌ ಮಂಡಿಸಿ, ಉಪ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದಾಗ ಕ್ಷೇತ್ರದ ಹಳ್ಳಿಗಳಿಗೆ ಸೌಲಭ್ಯ ಕೊಡಲಾಗಲಿಲ್ಲ.

ಈಗ ಚುನಾವಣೆ ಹತ್ತಿರ ಬಂದಾಗ ಅವರ ಮಗ ಯತೀಂದ್ರಗೆ ಗುದ್ದಲಿ ಕೊಟ್ಟು ಕಳುಹಿಸುತ್ತಿದ್ದಾರೆ. ಕ್ಷೇತ್ರದ ಶಾಸಕರಾಗಿ ಜಿ.ಟಿ.ದೇವೇಗೌಡ ಇರುವಾಗ ಯತೀಂದ್ರಗೆ ಗುದ್ದಲಿ ಪೂಜೆ ಮಾಡಲು ಅಧಿಕಾರ ಕೊಟ್ಟರ್ಯಾರು ಎಂದು ಪ್ರಶ್ನಿಸಿದರು.

ಕೊಳ್ಳುವ ಮಾತು: ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸಿದ್ದೇನೆ. ಮುಂದೆಯೂ ನಾನೇ ಮುಖ್ಯಮಂತ್ರಿ ಅನ್ನುತ್ತಿದ್ದಾರೆ. ಹಣ ಕೊಟ್ಟು ಗೆಲ್ಲಬಹುದು ಎಂದುಕೊಂಡಿದ್ದಾರೆ. ಅದು ವಕೀಲಗಾರಿಕೆ ಮಾಡಿ ಗಳಿಸಿದ ಹಣವಲ್ಲ. ರಾಜಕೀಯವಾಗಿ ಬೆಳೆಸಿದ ಕ್ಷೇತ್ರದ ಜನರನ್ನೇ ಹಣ ಕೊಟ್ಟು ಕೊಳ್ಳುವ ಮಾತನಾಡುತ್ತಾರೆ.

Advertisement

ಇಲ್ಲಿನ ಮುಖಂಡರನ್ನು ರಾತ್ರಿ ವೇಳೆ ಕರೆಸಿಕೊಂಡು ಹಣದ ಆಮಿಷ ಒಡ್ಡುತ್ತಿದ್ದಾರೆ. ನಿಮ್ಮ ಪಾಪದ ಹಣ ಎಷ್ಟು ಕೋಟಿ ತಂದು ಸುರಿದರೂ ಇಲ್ಲಿ ಗೆಲ್ಲಲಾಗಲ್ಲ ಎಂಬುದನ್ನು ತಿಳಿದುಕೊಳ್ಳಿ. ಚಾಮುಂಡೇಶ್ವರಿ ಕ್ಷೇತ್ರ ರಾಜಕೀಯವಾಗಿ ಜನ್ಮ ಕೊಟ್ಟ ಕ್ಷೇತ್ರ ಭಾವನೆ ಅವರಿಗೆ ಇದ್ದಿದ್ದರೆ ಕ್ಷೇತ್ರವನ್ನು ಬಿಟ್ಟು ಹೋಗುತ್ತಿರಲಿಲ್ಲ ಎಂದರು.

ಅಧಿಕಾರ ಯಾರಿಗೂ ಶಾಶ್ವತವಲ್ಲ. ನಾನೂ 20 ತಿಂಗಳು ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದೇನೆ. ಅವರಂತೆ ದೌಲತ್ತು, ದುರಂಹಕಾರದಿಂದ ಆಡಳಿತ ನಡೆಸಲಿಲ್ಲ. ರಾಜ್ಯದ ಜನರ ಮನೆ ಮಗನಾಗಿ ಆಡಳಿತ ನಡೆಸಿದ್ದೇನೆ. ಈ ಪಕ್ಷದಿಂದಲೇ ಬೆಳೆದು, ಈಗ ಜೆಡಿಎಸ್‌ ಎಲ್ಲಿ ಅಧಿಕಾರಕ್ಕೆ ಬರುತ್ತೆ ಎಂದು ದುರಂಹಕಾರದ ಮಾತನ್ನಾಡುತ್ತಾರೆ. ಜೆಡಿಎಸ್‌ ಮುಗಿಸಲು ಹೊರಟಿದ್ದಾರೆ.

ಎಚ್‌.ಡಿ.ದೇವೇಗೌಡರು, ಚಾಮುಂಡೇಶ್ವರಿ ಕ್ಷೇತ್ರದ ಜನ ಬೆಳೆಸಿದ್ದರಿಂದ ಅವರನ್ನು ಸೋನಿಯಾಗಾಂಧಿ ನೋಡುವಂತಾಯಿತು ಎಂಬುದನ್ನು ಅರ್ಥ ಮಾಡಿಕೊಳ್ಳಲಿ ಎಂದರು. ಮುಂಬರುವ ಚುನಾವಣೆಯಲ್ಲಿ ಜಾತೀ ಹೆಸರು ನೋಡಬೇಡಿ. ಜಿ.ಟಿ.ದೇವೇಗೌಡ ನೊಂದಿದ್ದಾರೆ. ಅವರಿಗೆ ಅನ್ಯಾಯ ಮಾಡಬೇಡಿ ಎಂದು ಮನವಿ ಮಾಡಿದರು.

ಈಗ ಮಗನಿಗೆ ಕ್ಷೇತ್ರ ಬಿಟ್ಟುಕೊಡಲು ಇಲ್ಲಿಗೆ ಬರುತ್ತಿದ್ದಾರೆ. ಇವರು ಮಾಡುವುದು ಅಪ್ಪ-ಮಕ್ಕಳ ರಾಜಕೀಯವಲ್ಲ. ದೇವೇಗೌಡರು ಅವರ ಮಕ್ಕಳು ಮಾಡಿದರೆ ಅಪ್ಪ-ಮಕ್ಕಳ ಪಕ್ಷ ಎನ್ನುತ್ತಾರೆ.
-ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next