ದಾವಣಗೆರೆ: ಪೊಲೀಸರು ಯಾವುದೇ ಕಾರಣಕ್ಕೂ ದುಶ್ಚಟಕ್ಕೆ ಬಲಿಯಾಗಿ ಆರೋಗ್ಯ ಕೆಡಿಸಿಕೊಳ್ಳಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಭೀಮಾಶಂಕರ್ ಎಸ್. ಗುಳೇದ್ ಸಲಹೆನೀಡಿದ್ದಾರೆ. ನಗರದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಕಚೇರಿಯ ಪೊಲೀಸ್ ಕಲ್ಯಾಣ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ, ಮಾತನಾಡಿದರು.
ಪೊಲೀಸ್ ಕೆಲಸ ಒತ್ತಡದ ಕೆಲಸ, ಸಾಮಾನ್ಯವಾಗಿ ಪೊಲೀಸರಿಗೆ ಕೆಲಸದ ಒತ್ತಡ ಮತ್ತು ಕೆಲಸ ಜಾಸ್ತಿಯಾಗಿರುವುದರಿಂದ ಅವರ ಮತ್ತು ತಮ್ಮ ಕುಟುಂಬದ ಸದಸ್ಯರಿಗೆ ಆನಾರೋಗ್ಯದ ಸಂಧರ್ಭದಲ್ಲಿ ಚಿಕಿತ್ಸೆಗೆ ಹೋಗಲು ಸಾಧ್ಯವಾಗದಿರಬಹುದು ಎಂದರು.
ಆರೋಗ್ಯದ ದೃಷ್ಠಿಯಿಂದ ನಮ್ಮ ಜೀವನ ವಿಧಾನದಲ್ಲಿ ಉತ್ತಮವಾದ ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ಇದೆ. ಅನಾರೋಗ್ಯಕ್ಕೆ ಕಾರಣವಾಗುವ ಕುಡಿತ, ಧೂಮಪಾನ ಇತರೆ ಕೆಟ್ಟ ಚಟಗಳಿಂದ ದೂರವಿದ್ದು ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಂದಾಗಬೇಕು ಎಂದರು.
ಪೊಲೀಸರ ನಿರಂತರ ಕೆಲಸದ ಹಿನ್ನೆಲೆಯಲ್ಲಿ ಇಲಾಖೆ ಮತ್ತು ಸ್ಪೆಷಲಿಸ್ಟ್ ವೈದ್ಯರ ಸಹಾಯೋಗದೊಂದಿಗೆ ಇಂತಹ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುವುದರಿಂದ ಪೊಲೀಸರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಅನುಕೂಲವಾಗುತ್ತದೆ.
ವರ್ಷಕ್ಕೊಮ್ಮೆಯಾದರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಪ್ರತಿ ವರ್ಷ ಪೊಲೀಸ್ ಇಲಾಖೆಯಿಂದ ಅ ಧಿಕಾರಿ ಮತ್ತು ಸಿಬ್ಬಂದಿಗೆ ಉಚಿತ ಆರೋಗ್ಯ ತಪಾಸಣೆ ಮಾಡಿಸಲಾಗುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ತಿಳಿದುಕೊಂಡು ಅದನ್ನು ಇತರೆ ಜನರಿಗೆ ತಿಳಿಹೇಳಿದರೆ ಇದರಿಂದ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಬಾಪೂಜಿ ವೈದ್ಯಕೀಯ ಕಾಲೇಜಿನ ಡಾ| ನಂದೀಶ, ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ| ರುದ್ರೇಶ್, ಸುನೈನಾ ಅಪ್ಟಿಕಲ್ಸ್ ನಿರ್ವಾಹಕ ಜುನೈದ್ ಪಾಷಾ, ನಗರದ ಉಪಾಧೀಕ್ಷಕ ಅಶೋಕ ಕುಮಾರ್, ಪೊಲೀಸ್ ನಿರೀಕ್ಷಕರಾದ ಜಿ.ಬಿ. ಉಮೇಶ್, ದುರುಗಪ್ಪ, ಬಸವರಾಜ, ಪಿಎಸ್‌ಐ ಕಿರಣ್ ಕುಮಾರ್ ಇತರರು ಶಿಬಿರದಲ್ಲಿ ಪಾಲ್ಗೊಂಡರು.