ಜೇವರ್ಗಿ: ಈ ಚುನಾವಣೆ ಸ್ವಾಭಿಮಾನದ ಚುನಾವಣೆಯಾಗಿದ್ದು, ಮತದಾರರು ಬಿಜೆಪಿಯ ಯಾವುದೇ ಆಮಿಷಗಳಿಗೆ ಒಳಗಾಗದೇ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಶಾಸಕ ಡಾ| ಅಜಯಸಿಂಗ್ ಮನವಿ ಮಾಡಿದರು.
ವಿಧಾನಪರಿಷತ್ ಚುನಾವಣೆ ಅಂಗವಾಗಿ ಸೋಮವಾರ ತಾಲೂಕಿನ ಆಲೂರ, ಯಲಗೋಡ, ಕರಕಿಹಳ್ಳಿ, ಕಡಕೋಳ ಗ್ರಾಪಂ ವ್ಯಾಪ್ತಿಯ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಕಲಬುರಗಿ-ಯಾದಗಿರಿ ಮತಕ್ಷೇತ್ರದ ಜನ ಬದಲಾವಣೆ ಬಯಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ ಗೆಲುವು ಖಚಿತ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಜನರ ಗೋಳು ಕೇಳುವುರಿಲ್ಲದಂತಾಗಿದೆ. ಈ ದೇಶದ ಜನ ಒಂದಿಲ್ಲೊಂದು ಸಮಸ್ಯೆಯಿಂದ ಬಳಲುವಂತಾಗಿದೆ. ಯಾವುದೇ ಹೊಸ ಕಾರ್ಯಕ್ರಮ ರೂಪಿಸದೇ ಬರೀ ಭಾಷಣಗಳಿಂದ ಜನರ ಹೊಟ್ಟೆ ತುಂಬಿಸುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದರು.
ಕಳೆದ ಆರು ವರ್ಷಗಳಲ್ಲಿ ಬಿಜೆಪಿಯ ಬಿ.ಜಿ.ಪಾಟೀಲ ಅವರು ಕಲಬುರಗಿ-ಯಾದಗಿರಿ ಜಿಲ್ಲೆಗಳ ಒಂದೂ ತಾಲೂಕಿಗೆ ಭೇಟಿ ನೀಡಿಲ್ಲ, ಗ್ರಾಪಂ ಸದಸ್ಯರ ಸಮಸ್ಯೆ ಆಲಿಸುವ ಕೆಲಸ ಮಾಡಿಲ್ಲ. ಕೇವಲ ಚುನಾವಣೆ ಬಂದಾಗ ಮಾತ್ರ ಮತದಾರರು ನೆನಪಾಗುತ್ತಾರೆ. ಕಳೆದ ಆರು ವರ್ಷಗಳಿಂದ ಯಾರ ಕೈಗೂ ಸಿಗದ ಬಿ.ಜಿ.ಪಾಟೀಲ ಅವರನ್ನು ಹೀನಾಯವಾಗಿ ಸೋಲಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡರಾದ ಸಿದ್ಧ ಲಿಂಗರೆಡ್ಡಿ ಇಟಗಿ, ರುಕುಂ ಪಟೇಲ ಇಜೇರಿ, ಮಲ್ಲಿಕಾರ್ಜುನ ಸಾಹು ಆಲೂರ, ರಾಜಶೇಖರ ಸೀರಿ ಹಾಗೂ ಗ್ರಾಪಂ ಸದಸ್ಯರು ಹಾಗೂ ನೂರಾರು ಜನ ಕಾರ್ಯಕರ್ತರು ಭಾಗವಹಿಸಿದ್ದರು.