Advertisement

ಅನುತ್ತೀರ್ಣನಾದ್ರೂ ಛಲ ಬಿಡದೆ ಓದಿ ವೈದ್ಯನಾದೆ

12:05 AM Nov 03, 2019 | Lakshmi GovindaRaju |

ಬೆಂಗಳೂರು: “ಪಿಯುಸಿಯಲ್ಲಿ ಅನುತ್ತೀರ್ಣನಾದ ಮೇಲೆ ಛಲ ಬಿಡದೆ ಓದಿ ವೈದ್ಯನಾದೆ. ನಂತರ ಮೂಡಬಿದರೆಯಲ್ಲಿ ಪುಟ್ಟ ಕ್ಲಿನಿಕ್‌ ತೆರೆದು ಮನೆ, ಮನದ ವೈದ್ಯನಾದೆ’ ಎಂದು ಶಿಕ್ಷಣ ತಜ್ಞ ಡಾ.ಮೋಹನ್‌ ಆಳ್ವ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ಶನಿವಾರ ಹಮ್ಮಿಕೊಂಡಿದ್ದ “ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ತಾವು ಸಾಗಿ ಬಂದ ಹಾದಿಯ ಬಗ್ಗೆ ಮೆಲಕು ಹಾಕಿದ ಅವರು, ಪಠ್ಯ ವಿಷಯದಲ್ಲಿ ಹಿಂದಿದ್ದೆ. ಆದರೆ, ಪಠ್ಯೇತರ ವಿಷಯದಲ್ಲಿ ಆಸಕ್ತಿ ಹೊಂದಿದ್ದೆ ಎಂದು ತಿಳಿಸಿದರು.

Advertisement

ನಮ್ಮ ತಂದೆ ಕೃಷಿಕರಾಗಿದ್ದರು. ಆದರೆ, ಆರ್ಥಿಕವಾಗಿ ಸ್ಥಿತಿವಂತರಾಗಿರಲಿಲ್ಲ. ತಂದೆ ಕಟ್ಟಿದ ಶಾಲೆಯಲ್ಲೇ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪೂರೈಸಿದೆ. ತರಗತಿಯಲ್ಲಿ ಪಠ್ಯ ವಿಷಯಗಳಲ್ಲಿ ಹಿಂದಿದ್ದ ನಾನು, ಶೇ.50ರಷ್ಟು ಅಂಕಗಳನ್ನು ಪಡೆಯುವಲ್ಲಿ ಮಾತ್ರ ಸಫ‌ಲನಾಗುತ್ತಿದೆ. ಆದರೆ, ಬಯಲು ಶಾಲೆ ಶಿಕ್ಷಣದಲ್ಲಿ (ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ) ಸಮಗ್ರ ವಿದ್ಯೆ ಕಲಿತೆ ಎಂದು ಹೇಳಿದರು.

ಪಿಜಿ ಶಿಕ್ಷಣವನ್ನು ನಾನು 28ನೇ ವಯಸ್ಸಿಗೆ ಪೂರೈಸಿದೆ. ಅಮೆರಿಕದ ಆಕ್ಸ್‌ಫ‌ರ್ಡ್‌ ವಿಶ್ವವಿದ್ಯಾನಿಲಯ ಸನ್ಮಾನಿಸಿದ ನಂತರ ನನ್ನ ಬದುಕಿನಲ್ಲಿ ಹೊಸ ತಿರುವು ಕಾಣಿಸಿಕೊಂಡಿತು. 1 ಲಕ್ಷ ರೂ.ಬ್ಯಾಂಕ್‌ ಸಾಲ ಪಡೆದು ಕ್ಲಿನಿಕ್‌ ಆರಂಭಿಸಿದ ನಾನು, ನಂತರದ ದಿನಗಳಲ್ಲಿ ವೈದ್ಯಕೀಯ, ಶಿಕ್ಷಣ ಮತ್ತು ಸಾಂಸ್ಕೃತಿ ಲೋಕವನ್ನು ಕಟ್ಟಿದೆ. ಈಗಲೂ ನಾನು, ಸುಮಾರು 228 ಕೋಟಿ.ರೂ.ಸಾಲಗಾರ ಎಂದರು.

ಕನ್ನಡಕ್ಕೆ ಆದ್ಯತೆ ನೀಡಿ ಶಿಕ್ಷಣ ಸಂಸ್ಥೆ ಕಟ್ಟಿದೆ: ಮೂಡಬಿದರೆ ವ್ಯಾಪ್ತಿಯಲ್ಲಿ ಹಲವು ಹೆಸರಾಂತ ಶಿಕ್ಷಣ ಸಂಸ್ಥೆಗಳಿದ್ದವು. ಆದರೆ, ಅವುಗಳಿಗಿಂತ ಭಿನ್ನವಾದ ಶಿಕ್ಷಣ ಸಂಸ್ಥೆ ಕಟ್ಟಬೇಕು ಎಂದು ನಿರ್ಧರಿಸಿ ಕನ್ನಡ ಮಾಧ್ಯಮ ತೆರೆದು ಇದರಲ್ಲಿ ಸಫ‌ಲನಾದೆ. ಈಗ 100 ಎಕರೆ ಪ್ರದೇಶದಲ್ಲಿ ವೈದ್ಯಕೀಯ ಶಿಕ್ಷಣ, ಎಂಜಿನಿಯರಿಂಗ್‌ ಸೇರಿದಂತೆ ಹಲವು ಶಿಕ್ಷಣ ಕೇಂದ್ರಗಳಿವೆ. ರಾಜ್ಯದ ವಿವಿಧೆಡೆಗಳಿಂದ ಸುಮಾರು 24 ಸಾವಿರ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ನುಡಿದರು.

ಉಡುಪಿಯಲ್ಲಿ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಇದು ಯಶಸ್ವಿಯಾದ ನಂತರ ‘ಆಳ್ವಾಸ್‌ ನುಡಿಸಿರಿ’ ಆರಂಭಿಸಿದೆ. ಕನ್ನಡ ನಾಡಿನ ಶ್ರೀಮಂತ ಜಾನಪದ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಸಲುವಾಗಿ “ಆಳ್ವಾಸ್‌ ವಿರಾಸತ್‌’ ಆರಂಭಿಸಿದೆ ಎಂದರು.

Advertisement

ತರಗತಿಗೆ ಒಬ್ಬರಂತೆ ಶಿಕ್ಷಕರನ್ನು ನೀಡಲಿ: ಕನ್ನಡ ಭಾಷೆಗೆ ಯಾವತ್ತೂ ಸೋಲಿಲ್ಲ. ಕನ್ನಡ ಶಾಲೆಗಳಿಗೆ ತರಗತಿಗೆ ಒಬ್ಬರಂತೆ ಶಿಕ್ಷಕರನ್ನು ನೀಡಲು ಆಗದ ಸರ್ಕಾರ, ಆಂಗ್ಲ ಶಾಲೆಗಳನ್ನು ತೆರೆಯಲು ಹೊರಟಿರುವುದು ಸರಿಯಿಲ್ಲ. ಈಗಿರುವ ಶಿಕ್ಷಕರಿಗೆ ಸರಿಯಾದ ತರಬೇತಿ ನೀಡದ ರಾಜ್ಯ ಸರ್ಕಾರ, ಆಂಗ್ಲ ಶಿಕ್ಷಕರಿಗೆ ತರಬೇತಿ ನೀಡಿ ಯಶಸ್ವಿಯಾಗುವುದಿಲ್ಲ. ಆಂಗ್ಲ ಶಾಲೆಗಳನ್ನು ತೆರೆಯಲು ಹೊರಟಿರುವ ಸರ್ಕಾರ ಮೊದಲು ಮೂಡುಬಿದರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಗೆ ಅಧಿಕಾರಿಗಳನ್ನು ಕಳುಹಿಸಿ, ಹೇಗೆ ಎಲ್ಲಿ ಕನ್ನಡದಲ್ಲಿ ಗುಣಮಟ್ಟದ ಶಿಕ್ಷಣವನ್ನು ಶಿಕ್ಷಕರು ನೀಡುತ್ತಿದ್ದಾರೆ ಎಂಬುದನ್ನು ಅರಿಯಲಿ ಎಂದು ಹೇಳಿದರು.

ಹೊರ ರಾಜ್ಯಗಳಿಂದ ಶಿಕ್ಷಣ ಸಂಸ್ಥೆಗಳು ರಾಜ್ಯಕ್ಕೆ ಆಗಮಿಸುತ್ತಿದ್ದು, ಶಿಕ್ಷಣವನ್ನು ವ್ಯಾಪಾರಿ ದೃಷ್ಟಿಯಿಂದ ನೋಡುತ್ತಿವೆ. ಇದು ದುಃಖದ ಸಂಗತಿ ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌, ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ, ರಾಜಶೇಖರ ಹತಗುಂದಿ, ಕೋಶಾಧ್ಯಕ್ಷ ಮಲ್ಲಿಕಾರ್ಜುನಪ್ಪ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next