Advertisement

ಸ್ಪೀಕಿಂಗ್‌ ಸ್ತ್ರೀ : ಅರ್ಥ, ಕಾಮಗಳು ಧರ್ಮದ ಚೌಕಟ್ಟು ಮೀರದಿರಲಿ…

03:58 PM Jul 29, 2020 | mahesh |

ಇಕ್ಷ್ವಾಕು ವಂಶದ ಅರಸನಾದ ದಿಲೀಪನು ಮಹಾಪರಾಕ್ರಮ, ದಕ್ಷತೆಗಳಿಂದ ಆಳುತ್ತಾ ಪ್ರಜೆಗಳನ್ನು ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ. ಆದರೆ, ಸಂತಾನ ಭಾಗ್ಯವಿಲ್ಲದ ನೋವು ದಿಲೀಪ-ಸುದಕ್ಷಿಣೆ ದಂಪತಿಯನ್ನು ಬಾಧಿಸುತ್ತಿತ್ತು. ಕುಲಗುರುಗಳಾದ ಬ್ರಹ್ಮರ್ಷಿ ವಸಿಷ್ಠರಲ್ಲಿ ಸಮಸ್ಯೆಯನ್ನು ಹೇಳಿಕೊಂಡಾಗ, ಅವರು ತಮ್ಮ ದಿವ್ಯದೃಷ್ಟಿಯಿಂದ ರಾಜನ ಪೂರ್ವವೃತ್ತಾಂತವನ್ನು ತಿಳಿಸಿದರು.

Advertisement

“ಹಿಂದೊಮ್ಮೆ ದೇವಾಸುರ ಸಂಗ್ರಾಮದಲ್ಲಿ ನೀನು ದೇವತೆಗಳಿಗೆ ಸಹಾಯ ಮಾಡಿ, ನಿನ್ನ ರಾಣಿಯನ್ನು ಸ್ಮರಿಸುತ್ತಾ ಹಿಂದಿರುಗುತ್ತಿದ್ದೆ . ಆಗ, ಕಲ್ಪವೃಕ್ಷದ ನೆರಳಿನಲ್ಲಿ ವಿಶ್ರಮಿಸುತ್ತಿದ್ದ ಕಾಮಧೇನುವಿಗೆ ನಮಸ್ಕರಿಸದೆ ಬಂದುಬಿಟ್ಟೆ. ಅದರಿಂದ ಕೋಪಗೊಂಡ ಕಾಮಧೇನುವು, ಸಂತಾನ ಪ್ರಾಪ್ತಿಯಾಗದಿರುವಂತೆ ನಿನಗೆ ಶಪಿಸಿದೆ’ ಎಂದರು ವಸಿಷ್ಠರು.

ತಿಳಿಯದೆ ಮಾಡಿದ ತಪ್ಪಿಗೆ ಪರಿಹಾರವೇನೆಂದು ರಾಜ ಕೇಳಿದಾಗ, ಕಾಮಧೇನುವಿನ ಮಗಳಾದ ನಂದಿನಿಯನ್ನು ಸ್ವಂತ ಮಗುವಿನ ಹಾಗೆ ನೋಡಿಕೊಳ್ಳಬೇಕೆಂದರು. ರಾಜ ದಂಪತಿ ಆನಂದದಿಂದ ಸಮ್ಮತಿಸಿ, ಋಷ್ಯಾಶ್ರಮದಲ್ಲಿಯೇ ನಂದಿನಿಯ ಸೇವೆ ಮಾಡತೊಡಗಿದರು. ರಾಜ ದಿಲೀಪನು ನಿತ್ಯವೂ ಗೋವನ್ನು ಮೇಯಲು ಕರೆದುಕೊಂಡು ಹೋಗುತ್ತಿದ್ದನು. ಹೀಗೆ 21 ದಿನಗಳು ಕಳೆದವು. ಮರುದಿನ ಗೋವು ಕಾಡಿನಲ್ಲಿ ಮೇಯುತ್ತಿರಲು, ಸಿಂಹವೊಂದು ಅದನ್ನು ಬೇಟೆಯಾಡಲು ಹೊಂಚುಹಾಕುತ್ತಿತ್ತು. ಶಸ್ತ್ರವನ್ನೆತ್ತಿದ ದಿಲೀಪನು, ಶಿವಕಿಂಕರನಾಗಿದ್ದ ಸಿಂಹದ ಮಾಯಾಪ್ರಭಾವದಿಂದ ನಿಶ್ಚಲನಾದನು. ಕರ್ತವ್ಯಪರಾಯಣ ನಾದ ದಿಲೀಪನು, ಹಸುವನ್ನು ಬಿಟ್ಟುಬಿಡುವಂತೆ ಸಿಂಹವನ್ನು ಪರಿಪರಿಯಾಗಿ ಬೇಡಿಕೊಂಡನು. ಆದರೆ ಸಿಂಹವು ಒಪ್ಪಲಿಲ್ಲ. ಆಗ ರಾಜನು, ಗೋವಿನ ಬದಲು ತನ್ನನ್ನೇ ಭಕ್ಷಿಸುವಂತೆ ಪ್ರಾರ್ಥಿಸಿದನು.

ಆಗ ಆಶ್ಚರ್ಯವೆನ್ನುವಂತೆ, ಅವನ ಮೇಲೆ ಪುಷ್ಪವೃಷ್ಟಿಯಾಯಿತು. ನಂದಿನಿಯು ರಾಜನ ಕರ್ತವ್ಯ ನಿಷ್ಠೆಯನ್ನು ಪರೀಕ್ಷಿಸಲು, ತಾನೇ ಹೀಗೆ ಮಾಡಿದುದಾಗಿ ತಿಳಿಸಿತು. ರಾಜನನ್ನು ಶಾಪವಿಮುಕ್ತನನ್ನಾಗಿಸಿ ತನ್ನ ದಿವ್ಯಕ್ಷೀರವನ್ನು ಸ್ವೀಕರಿಸಿ ಸತ್‌ -ಸಂತಾನವನ್ನು ಪಡೆಯುವಂತೆ ಆಶೀರ್ವದಿಸಿತು.

ಈ ವೃತ್ತಾಂತವನ್ನು ಗಮನಿಸಿದಾಗ, ಇಷ್ಟು ಸಣ್ಣ ತಪ್ಪಿಗೆ ಇಂತಹ ಶಿಕ್ಷೆಯೇ? ಎನ್ನಿಸಬಹುದು. ಆದರೆ, ಧರ್ಮದ ನಡೆ ಸೂಕ್ಷ್ಮವಾದದ್ದು. ರಾಣಿಯಲ್ಲಿ ಮೋಹಪರವಶನಾಗಿದ್ದ ದಿಲೀಪನು ಅವಳನ್ನು ಶೀಘ್ರವಾಗಿ ಕಾಣಬೇಕೆಂಬ ತವಕದಲ್ಲಿ ಧರ್ಮಮೂರ್ತಿಯಾದ ಕಾಮಧೇನುವನ್ನು ನಿರ್ಲಕ್ಷಿಸಿದ್ದನು. ಸದ್ಧರ್ಮದ ನಡೆಯಿಂದ ಜಾರಿದ್ದರಿಂದಾಗಿ ಶಾಪಗ್ರಸ್ತನಾಗಿ ಪ್ರಜೋತ್ಪತ್ತಿಯ ಧರ್ಮವನ್ನು ಕಳೆದುಕೊಂಡನು. ವಸಿಷ್ಠರ ಅನುಗ್ರಹ- ದೇವತಾ ಸಾನ್ನಿಧ್ಯದಿಂದ ಕೂಡಿದ ಗೋಸೇವೆಯಿಂದ ಪಾಪ ಪ್ರಾಯಶ್ಚಿತ್ತವಾಯಿತು.

Advertisement

“ಯಥಾ ರಾಜಾ ತಥಾ ಪ್ರಜಾ’ ಎನ್ನುವಂತೆ, ಪ್ರಜೆಗಳೂ ರಾಜನಂತೆಯೇ ಆಗಿಬಿಡುತ್ತಾರೆ. ಹಾಗಾಗಿ, ರಾಜನ ಕೆಲಸ- ಕಾರ್ಯಗಳು ಪ್ರಜೆಗಳಿಗೆ ಆದರ್ಶವಾಗಿರಬೇಕು. “ಅರ್ಥ-ಕಾಮಗಳು ಧರ್ಮದ ಚೌಕಟ್ಟನ್ನು ಮೀರಬಾರದು’ ಎನ್ನುವ ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ.

ಯೋಗಶ್ರೀ ಎಚ್‌.ಕೆ, ಸಂಸ್ಕೃತಿ ಚಿಂತಕಿ

Advertisement

Udayavani is now on Telegram. Click here to join our channel and stay updated with the latest news.

Next