Advertisement

ಚುನಾವಣಾ ವೆಚ್ಚ ಮಿತಿ ಮೀರದಿರಲಿ

11:15 AM Mar 30, 2018 | |

ಚಿತ್ರದುರ್ಗ: ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾವಣಾ ವೆಚ್ಚವಾಗಿ 28 ಲಕ್ಷ ರೂ. ವರೆಗೆ ವೆಚ್ಚ ಮಾಡಲು ಅವಕಾಶವಿದೆ. ಚುನಾವಣೆಯಲ್ಲಿ ಖರ್ಚು ಮಾಡಬಹುದಾದ ಎಲ್ಲಾ ವಸ್ತುಗಳ ದರಗಳನ್ನು ಅಂತಿಮಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿ.ವಿ. ಜ್ಯೋತ್ಸ್ನಾ ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಮುದ್ರಣಾಲಯಗಳ ಮಾಲೀಕರು ಹಾಗೂ ಮಾಧ್ಯಮದವರೊಂದಿಗೆ ಸಭೆ ನಡೆಸಿದ ಅವರು ಚುನಾವಣಾ ವೆಚ್ಚಗಳ ದರವನ್ನು ಅಂತಿಮಗೊಳಿಸಿ ಮಾತನಾಡಿದರು.

ಚುನಾವಣಾ ಸಂದರ್ಭದಲ್ಲಿ ಕಣದಲ್ಲಿನ ಪ್ರತಿ ಅಭ್ಯರ್ಥಿಗಳಿಗೆ 28 ಲಕ್ಷ ರೂ.ವರೆಗೆ ವೆಚ್ಚ ಮಾಡಲು ಅವಕಾಶ ಇದೆ. ಇದರ ಮಿತಿ ದಾಟಿದಲ್ಲಿ ಅಭ್ಯರ್ಥಿ ಆಯ್ಕೆಯಾದರೂ ಸಹ ಅನರ್ಹರಾಗುತ್ತಾರೆ. ರ್ಯಾಲಿ ವೇಳೆ ಉಪಯೋಗಿಸುವ ಪೆಂಡಾಲ್‌, ಕುರ್ಚಿ, ಶಾಮಿಯಾನ, ಜನರೇಟರ್‌, ಪ್ಲೆಕ್ಸ್‌, ಕರಪತ್ರ, ಮೈಕ್‌ ಸೇರಿದಂತೆ ಪ್ರತಿಯೊಂದಕ್ಕೂ ಲೆಕ್ಕ ನೀಡಬೇಕಾಗುತ್ತದೆ. ಅಭ್ಯರ್ಥಿಗೆ
ಅವರ ಸ್ವಂತ ವಾಹನವಾದರೆ ಒಂದಕ್ಕೆ ಮಾತ್ರ ಇಂಧನ, ವಾಹನ ಚಾಲಕರ ಭತ್ಯೆ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ.

ಸ್ವಂತ ವಾಹನಗಳು ಒಂದಕ್ಕಿಂತ ಹೆಚ್ಚು ಇದ್ದು ಅವುಗಳನ್ನು ಉಪಯೋಗಿಸಿದಲ್ಲಿ ಅವುಗಳ ಬಾಡಿಗೆ ವೆಚ್ಚವನ್ನು ಅಭ್ಯರ್ಥಿಯ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. ವಿದ್ಯುನ್ಮಾನ ಮಾಧ್ಯಮ, ಸಾಮಾಜಿಕ ಜಾಲತಾಣ. ಕೇಬಲ್‌ ಟಿವಿಗಳಲ್ಲಿ ನೀಡುವ ಜಾಹೀರಾತನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜಾಹೀರಾತು ನೀಡಲು ಪೂರ್ವ ಪ್ರಮಾಣೀಕರಣ ಪ್ರಮಾಣಪತ್ರ
ಪಡೆದುಕೊಳ್ಳಬೇಕಾಗುತ್ತದೆ. ಮುದ್ರಣ ಮಾಧ್ಯಮಗಳಲ್ಲಿ ನೀಡಲಾಗುವ ಜಾಹೀರಾತುಗಳು ಸೇರಿದಂತೆ ಇತರೆ ಎಲ್ಲಾ ವೆಚ್ಚಗಳನ್ನು ಸಹ ಅಭ್ಯರ್ಥಿಯ ವೆಚ್ಚವಾಗಿ ಪರಿಗಣಿಸಲಾಗುತ್ತದೆ. ಕಾನೂನಾತ್ಮಕ ವೆಚ್ಚಗಳಿಗೆ ಅವಕಾಶ ಇದ್ದು, ಕಾನೂನು ಬಾಹಿರ ವೆಚ್ಚಗಳಿಗೆ ಅವಕಾಶವಿಲ್ಲ. ಅಭ್ಯರ್ಥಿಗಳು ಚುನಾವಣಾ ಲೆಕ್ಕವನ್ನು ಕರಾರುವಾಕ್‌ ಆಗಿ ನಿಗದಿತ ಅವ ಧಿಯಲ್ಲಿ ನೀಡಬೇಕಾಗುತ್ತದೆ. ಫಲಿತಾಂಶ
ಬಂದು 30 ದಿನಗಳೊಳಗಾಗಿ ಅಂತಿಮ ಖರ್ಚಿನ ವಿವರವನ್ನು ನೀಡಬೇಕಾಗುತ್ತದೆ ಎಂದರು. 

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ. ಸಂಗಪ್ಪ, ಉಪವಿಭಾಗಾಧಿಕಾರಿ ಹಾಗೂ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ವಿಜಯಕುಮಾರ್‌ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಿದ್ದರು ಎಲ್ಲಾ ರಾಜಕೀಯ ಪಕ್ಷದವರು
ಚುನಾವಣಾ ಆಯೋಗದ ನಿರ್ದೇಶನವನ್ನು ಕಡ್ಡಾಯವಾಗಿ ಪಾಲಿಸಬೇಕು. ರ್ಯಾಲಿ ನಡೆಸಲು ನಿಗದಿತ ನಮೂನೆಯಲ್ಲಿ ಪ್ರಮಾಣಪತ್ರದೊಂದಿಗೆ ಅರ್ಜಿ ಸಲ್ಲಿಸಬೇಕು. ಅದರಲ್ಲಿ ಉಪಯೋಗಿಸುವ ಪ್ರತಿ ವಸ್ತುವಿನ ದರದ ವಿವರವನ್ನು ನೀಡಬೇಕಾಗುತ್ತದೆ. ವೆಚ್ಚದ ದರಗಳ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರಿಗೆ ಕ್ರೋಢೀಕೃತ ಪುಸ್ತಕ ಒದಗಿಸಲಾಗಿದೆ. ಚುನಾವಣಾಧಿಕಾರಿಗಳ
ಕಚೇರಿಯಲ್ಲೂ ವಿವರ ಲಭ್ಯವಿದೆ.
●ವಿ.ವಿ. ಜ್ಯೋತ್ಸ್ನಾ, ಜಿಲ್ಲಾಧಿಕಾರಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next