ಬೆಂಗಳೂರು: ಸುಮಾರು ಎಂಟು ದಶಕಗಳ ಇತಿಹಾಸ ಹೊಂದಿರುವ ನಗರದ ಕೆಂಪೇಗೌಡ ರಸ್ತೆಯಲ್ಲಿರುವ ಜನತಾ ಬಜಾರ್ ಅನ್ನು (ಏಷಿಯಾಟಿಕ್ ಕಟ್ಟಡ) ನೆಲಸಮಗೊಳಿಸದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಶುಕ್ರವಾರ ಮಧ್ಯಂತರ ಆದೇಶ ನೀಡಿದೆ.
ಜನತಾ ಬಜಾರ್ ನೆಲಸಮಗೊಳಿಸಿ ಆ ಜಾಗದಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣ ಮಾಡಲು 2016ರ ಡಿ.27ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ರದ್ದುಗೊಳಿಸುವಂತೆ ಕೋರಿ “ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆಂಡ್ ಕಲ್ಚರ್ ಹೆರಿಟೇಜ್’ ಸಂಸ್ಥೆ ಸಲ್ಲಿಸಿದ ಸಾರ್ವಜನಿಕ ಹಿತಾಕ್ತಿ ಅರ್ಜಿಯು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಹಾಗೂ ನ್ಯಾ. ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಕಟ್ಟಡ ನೆಲಸಮಗೊಳಿಸುವ ಸಂಬಂಧ ಯಾವುದೇ ಕ್ರಮಕ್ಕೆ ಮುಂದಾಗದಂತೆ ರಾಜ್ಯ ಸರ್ಕಾರಕ್ಕೆ ಮಧ್ಯಂತರ ಆದೇಶ ನೀಡಿ ವಿಚಾರಣೆ ಮುಂದೂಡಿತು. ಮೈಸೂರು ಒಡೆಯರ್ ಅವರಿಂದ 1935ರಲ್ಲಿ ಉದ್ಘಾಟನೆಗೊಂಡ ಈ ಕಟ್ಟಡವನ್ನು ವಿಶ್ವ ಪ್ರಸಿದ್ಧ ಜರ್ಮನಿಯ ವಾಸ್ತುಶಿಲ್ಪಿ ಕೃಂಬಿಗಲ್, ವಿನ್ಯಾಸಗೊಳಿಸಿದ್ದರು.
ಕಟ್ಟಡ ಹಳೆಯದಾಗಿದ್ದು ಬಳಕೆಗೆ ಯೋಗ್ಯವಲ್ಲ ಎಂಬ ಕಾರಣ ನೀಡಿ ಸರ್ಕಾರ ಅದನ್ನು ನೆಲಸಮಗೊಳಿಸಲು ಮುಂದಾಗಿದೆ. ಆದರೆ, ಬಿಡಿಎ ಕರಡು ಪರಿಷ್ಕೃತ ಮಾಸ್ಟರ್ ಪ್ಲಾನ್ -2031ರಲ್ಲಿ ಜನತಾ ಬಜಾರ್ ಕಟ್ಟಡವನ್ನು ಪಾರಂಪರಿಕ ಕಟ್ಟಡ ಎಂದು ಗುರುತಿಸಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಪಾರಂಪರಿಕ ಕಟ್ಟಡಗಳು ಸಂರಕ್ಷಿತ ಕಟ್ಟಡಗಳ ಪಟ್ಟಿಗೆ ಸೇರಲಿದ್ದು, ಅವುಗಳನ್ನು ತೆರವುಗೊಳಿಸಲು ಅವಕಾಶವಿಲ್ಲ. ಹೀಗಾಗಿ ಕಟ್ಟಡ ನೆಲಸಮಗೊಳಿಸಲು ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಹಾಗೂ ಕರಡು ಪರಿಷ್ಕೃತ ಮಾಸ್ಟರ್ ಪ್ಲಾನ್-2031 ಅಂತಿಮಗೊಳಿಸುವವರೆಗೆ ಕಟ್ಟಡ ತೆರವು ಮಾಡದಂತೆ ಸರ್ಕಾರ, ಬಿಬಿಎಂಪಿ ಹಾಗೂ ಬಿಡಿಎಗೆ ನಿರ್ದೇಶಿಸುವಂತೆ ಅರ್ಜಿದಾರರು ಮನವಿ ಮಾಡಿದ್ದಾರೆ.