Advertisement

ಕಾರಂಜಿ ಕೆರೆ ಆವರಣದಲ್ಲಿ ಕಾಂಕ್ರೀಟ್‌ ಕಾಮಗಾರಿ ಮಾಡದಿರಿ

09:06 PM Dec 17, 2019 | Lakshmi GovindaRaj |

ಮೈಸೂರು: ಕಾರಂಜಿ ಕೆರೆ ಆವರಣ ಸುಂದರವಾಗಿದೆ ಎಂದು ಕಾಂಕ್ರೀಟ್‌ ಹಾಕಿ ವನ್ಯ ಜೀವಿಗಳಿಗೆ ಧಕ್ಕೆ ತರದೇ ಕೆರೆ ಸಂರಕ್ಷಿಸಬೇಕು ಎಂದು ಜಲತಜ್ಞ ಯು.ಎನ್‌. ರವಿಕುಮಾರ್‌ ತಿಳಿಸಿದರು. ಮೈಸೂರು ಮೃಗಾಲಯ ಹಾಗೂ ಕರ್ನಾಟಕ ಮೃಗಾಲಯ ಪ್ರಾಧಿಕಾರದ ವತಿಯಿಂದ ಕಾರಂಜಿ ಕೆರೆ ಆವರಣದಲ್ಲಿ ಆಯೋಜಿಸಿರುವ ಕಾರಂಜಿ ಕೆರೆ ಹಬ್ಬದ ಎರಡನೇ ದಿನವಾದ ಮಂಗಳವಾರ ಕೆರೆ ಸಂರಕ್ಷಣೆ ಕುರಿತು ಮಾತನಾಡಿದರು.

Advertisement

ಕೆರೆಗೆ ಚರಂಡಿ ನೀರು: ಮೈಸೂರು ನಗರದಲ್ಲಿ 80ರ ದಶಕದಲ್ಲಿ ಹಲವು ಕೆರೆಗಳು ಬತ್ತಿ ಹೋಗಿದ್ದವು. ಆಗ 90ರ ದಶಕದಲ್ಲಿ ಕೆರೆಗಳಿಗೆ ಒಳಚರಂಡಿ ನೀರು ಹರಿಸಲು ಪ್ರಾರಂಭಿಸಲಾಯಿತು. ಇದರಿಂದ ಕೆರೆಯಲ್ಲಿ ಕಲುಷಿತ ನೀರು ಹೆಚ್ಚುತ್ತಿದ್ದ ಕಾರಣ 2000ದಲ್ಲಿ ಒಳಚರಂಡಿ ನೀರು ಕೆರೆಗೆ ಬಾರದಂತೆ ನೋಡಿಕೊಳ್ಳಲಾಯಿತು. ಆದರೆ, ಇಂದಿಗೂ ಕೆಲ ಕೆರೆಗಳಿಗೆ ಒಳಚರಂಡಿ ನೀರು ಹರಿದು ಬರುತ್ತಿರುವುದನ್ನು ತಡೆಯಲು ಸಾಧ್ಯವಾಗಿಲ್ಲ ಎಂದರು.

ಕೆರೆಯಲ್ಲಿ ಜೋಂಡು ಬೆಳೆಯುವುದು ಕೆರೆಗೆ ಅಪಾಯ ಎನ್ನುತ್ತಾರೆ, ಅದು ಅಪಾಯವಲ್ಲ. ಕೆರೆಯಲ್ಲಿ ಜೋಂಡು ಬೆಳೆಯುವುದರಿಂದ ಕೆರೆಗೆ ಮತ್ತು ಅಲ್ಲಿನ ಜೀವರಾಶಿಗಳಿಗೆ ಉಪಯುಕ್ತತೆ ಇರುತ್ತದೆ. ಹಾಗೆಯೇ, ಕೆರೆಯಲ್ಲಿ ಮೀನುಗಾರಿಕೆ ಮಾಡುವುದರಿಂದಲೂ ಅಲ್ಲಿನ ಜೀವ ವೈವಿಧ್ಯಕ್ಕೆ ಧಕ್ಕೆಯಾಗುವುದಿಲ್ಲ ಎಂದು ವಿವರಿಸಿದರು.

ದೋಣಿ ವಿಹಾರ: ಕೆರೆಯ ಪಾರಂಪರಿಕತೆ ಕುರಿತು ಮಾತನಾಡಿದ ಇತಿಹಾಸ ತಜ್ಞ ಈಚನೂರು ಕುಮಾರ್‌, ಮೈಸೂರು ರಾಜಮನೆತನ ಕೆರೆಗಳ ಸಂರಕ್ಷಣೆಗೆ ಬಹಳ ಒತ್ತು ನೀಡಿತ್ತು. ಹಿಂದೆ ಅರಮನೆ ಸುತ್ತಲೂ ದೋಣಿ ವಿಹಾರ ನಡೆಸುವ ಸಲುವಾಗಿ ಕೆರೆ ನಿರ್ಮಿಸಲು ಸಯ್ನಾಜಿ ರಾವ್‌ ರಸ್ತೆಯಲ್ಲಿ ರಾಜಕಾಲುವೆ ನಿರ್ಮಿಸಲು ಮುಂದಾಗಿದ್ದರು. ಆ ಸಮಯದಲ್ಲಿ ಕೆ.ಆರ್‌.ವೃತ್ತದಲ್ಲಿ ಒಡೆಯಲಾಗದ ಬಂಡೆಯಿಂದ ಕಾಮಗಾರಿ ಸ್ಥಗಿತವಾಯಿತು.

ಕಾಲುವೆ ಪೂರ್ಣಗೊಳಿಸುವ ಕೆಲಸ ಕೈಗೂಡಲೇ ಇಲ್ಲ. ನಂತರ ಕಾಲುವೆ ನಿರ್ಮಾಣಕ್ಕಾಗಿ ತೋಡಿದ ಹಳ್ಳವನ್ನು ಮುಚ್ಚಲಾಯಿತು ಎಂದು ತಿಳಿಸಿದರು. ಅರಮನೆ ಬಳಿ ಪ್ರತಿನಿತ್ಯ ಹುಲಿ ಪ್ರತ್ಯಕ್ಷ ಆಗುತ್ತಿತ್ತು. ನಂತರದಲ್ಲಿ ಅದು ನಿಗೂಢವಾಗಿ ಕಣ್ಮರೆಯಾಯಿತು. ಇದರ ಸ್ಮರಣಾರ್ಥವಾಗಿ ಕಂಚಿನ ಲೋಹದಿಂದ 8 ಹುಲಿಗಳ ಶಿಲ್ಪ ಕೆತ್ತಿಸಲಾಗಿದೆ ಎಂದರು.

Advertisement

ಹಿಂದೆ ದೊಡ್ಡ ಕೆರೆ, ಜೀವನರಾಯನ ಕೆರೆ, ಸುಬ್ಬರಾಯನ ಕೆರೆಗಳಲ್ಲಿ ನೀರು ತುಂಬಿರುತ್ತಿತ್ತು. ಅವೆಲ್ಲ ಈಗ ಬರಿದಾಗಿವೆ. ಮುಂದೆ ಇಂತಹ ಕೆರೆ ನಿರ್ಮಿಸಲು ಸಾಧ್ಯವಿಲ್ಲ. ಹಾಗಾಗಿ ಇರುವ ಕೆರೆಗಳನ್ನು ರಕ್ಷಣೆ ಮಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಬೇಕು ಎಂದು ಮನವಿ ಮಾಡಿದರು.

ಇದಕ್ಕೂ ಮುನ್ನ ಪರಿಸರ ಪ್ರಿಯರು ಕೆರೆ ಆವರಣದಲ್ಲಿ ಪರಿಸರ ನಡಿಗೆಯಲ್ಲಿ ಪಾಲ್ಗೊಂಡು, ಕೆರೆಯ ಆವರಣದಲ್ಲಿರುವ ನಾನಾ ಪ್ರಬೇಧಗಳ ಸಸ್ಯಗಳು, ಅವುಗಳ ಮೂಲ, ಅದರ ಪ್ರಯೋಜನದ ಬಗ್ಗೆ ತಿಳಿದುಕೊಂಡರು. ನಂತರ ದಟ್ಟ ಹಸಿರು ವಾತಾವರಣದ ನಡುವೆ ಸ್ವತ್ಛಂದವಾಗಿ ಹಾರುವ ಪಕ್ಷಿಗಳನ್ನು ವೀಕ್ಷಿಸಿ ಪಕ್ಷಿಪ್ರೇಮಿಗಳು ಮನ ತಂಪಾಗಿಸಿಕೊಂಡರು.

ಮೈಸೂರಿನ 69 ಕೆರೆ ಪೈಕಿ 42 ಕೆರೆ ಅಳಿವಿನ ಅಂಚಿನಲ್ಲಿ: ಮೈಸೂರಿನ ವಿವಿಧ ಭಾಗಗಳಲ್ಲಿ ಗುರುತಿಸಿದ್ದ 106 ಕೆರೆಗಳಲ್ಲಿ ಇಂದು 37 ಕೆರೆಗಳು ಕಣ್ಮರೆಯಾಗಿದ್ದು, 69 ಕೆರೆಗಳು ಮಾತ್ರ ಉಳಿದಿವೆ. ಅವುಗಳಲ್ಲಿ 42 ಕೆರೆಗಳು ಅಳಿವಿನ ಅಂಚಿನಲ್ಲಿದ್ದು, ಈ ಪೈಕಿ 2 ಕೆರೆಗಳು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿವೆ.

5 ಕೆರೆಗಳು ಮೈಸೂರು ತಾಲೂಕು ವ್ಯಾಪ್ತಿಗೆ ಬರುತ್ತವೆ ಎಂದು ಜಲತಜ್ಞ ಯು.ಎನ್‌. ರವಿಕುಮಾರ್‌ ವಿವರಿಸಿದರು. ಸದ್ಯಕ್ಕೆ ಉಳಿದಿರುವ 69 ಕೆರೆಗಳಲ್ಲಿ 35 ಕೆರೆಗಳು 10 ಖುತುವಿನಲ್ಲೂ ನೀರು ತುಂಬುವುದರಿಂದ ವರ್ಷಪೂರ್ತಿ ತುಂಬಿರಲಿವೆ. 6 ಕೆರೆಗಳಿಗೆ ಮಾತ್ರ ನೀರು ಬಾರದಂತಾಗಿದೆ. ಒಂದು ಕೆರೆ ಅಧ್ಯಯನ ಮಾಡಿದರೆ, ಜೀವಶಾಸ್ತ್ರ ಓದಿದಂತೆ, ಏಕೆಂದರೆ ಅಷ್ಟು ಬಗೆಯ ಸಹಸ್ರಾರು ಕೀಟ, ಸಸ್ಯ ಹಾಗೂ ಜೀವಿಗಳು ಅಲ್ಲಿರುತ್ತವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next