ಯಾದಗಿರಿ: ಹೆಣ್ಣು, ಗಂಡು ಎಂಬ ಭೇದಭಾವ ಮಾಡದೆ ಇಬ್ಬರನ್ನು ಸಮಾನವಾಗಿ ಕಾಣಬೇಕು. ಸಾಧನೆಗೆ ಸ್ತ್ರೀ, ಪುರುಷ ಎಂಬುದಿಲ್ಲ. ಅಚಲ ನಂಬಿಕೆ ಅಪಾರವಾದ ಶ್ರಮದೊಂದಿಗೆ ಸಾಧನೆ ಹಾದಿಯಲ್ಲಿ ಸಾಗಿದಾಗ ಯಾರೆ ಆಗಲಿ ನಿಶ್ಚಿತ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ ಎಂದು ನಾಗರತ್ನಾ ಕುಪ್ಪಿ ಹೇಳಿದರು.
ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಅಡಿಯಲ್ಲಿ ಹಮ್ಮಿಕೊಂಡ ಯುವ ಸಂಸತ್ತು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವಕರು ನಾಳಿನ ಭವ್ಯ ಭಾರತದ ನಾಗರಿಕರು, ಇಂತಹ ಅದಮ್ಯ ಚೇತನದ ಯುವ ಶಕ್ತಿ ದೇಶದ ಅಭಿವೃದ್ಧಿಗೆ ಸದ್ಬಳಕೆಯಾಗಲಿ. ಕೇಂದ್ರ ಸರ್ಕಾರ ಅದರಲ್ಲಿಯೂ ಪ್ರಧಾನ ಮಂತ್ರಿಗಳು ಯುವಕರ ಮೇಲೆ ಅಪಾರವಾದ ನಂಬಿಕೆಯನ್ನು ಇಟ್ಟಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ| ಸುಭಾಶ್ಚಂದ್ರ ಕೌಲಗಿ ಮಾತನಾಡಿ, ಯುವಕರು ರಾಜಕೀಯ ಪ್ರಜ್ಞೆಯನ್ನು ಮೂಡಿಸಿಕೊಳ್ಳಬೇಕು. ರಾಜಕೀಯದ ಬಗ್ಗೆ ವಿಶೇಷವಾಗಿ ಅಧ್ಯಯನ ಮಾಡಿ ತಾವು ಅಳವಡಿಸಿಕೊಂಡ ಉತ್ತಮವಾದ ಗುಣ ಮತ್ತು ಆದರ್ಶಗಳನ್ನು ಇತರರಿಗೂ ತಿಳಿಸುವುದರ ಮೂಲಕ ಉತ್ತಮವಾದ ಸಮಾಜ ನಿರ್ಮಾಣಕ್ಕೆ ಕಾರಣೀಕರ್ತರಾಗಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಅಶೋಕ ವಾಟ್ಕರ್, ಜೆಟ್ಟಪ್ಪ ಡಿ. ಅಶೋಕರಡ್ಡಿ ಪಾಟೀಲ, ರಾಘವೇಂದ್ರ ಬಂಡಿಮನಿ, ಪಂಪಾಪತಿ ರಡ್ಡಿ, ಡಾ| ಮೋನಯ್ಯ ಕಲಾಲ್, ಚೆನ್ನಬಸ್ಸಪ್ಪ ಓಡ್ಕರ್, ಯಲ್ಲಪ್ಪ ಕಶೆಟ್ಟಿ ಇದ್ದರು.
ರಾಜೇಶ್ವರಿ ಪ್ರಾರ್ಥಿಸಿದರು. ರೇಣುಕಾ, ಸುಗುಣಾ, ಬುಗ್ಗಪ್ಪ, ಅಜಯ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಯುವ ಸಂಸತ್ತಿನಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆ ಅಭಿಪ್ರಾಯ ಹಂಚಿಕೊಂಡರು. ಎನ್‌ಎಸ್‌ಎಸ್ ಅಧಿಕಾರಿ ಡಾ| ದೇವಿಂದ್ರಪ್ಪ ಹಳ್ಳಿಮನಿ ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿ, ವಂದಿಸಿದರು.