ಬಾಗಲಕೋಟೆ: ಜಮಖಂಡಿ ತಾಲೂಕಿನ ತಮದಡ್ಡಿಯ ಸಂತ್ರಸ್ತರು, ನಮಗೆ ನೆಲೆ ಕಲ್ಪಿಸಿ ಎಂದು ಡಿಸಿ ಕಚೇರಿ ಎದುರು ಧರಣಿ ನಡೆಸಿದರು.
ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದ ನಮ್ಮನ್ನು, ಹೊರ ಹಾಕುತ್ತಿದ್ದು, ನಾವು ಎಲ್ಲಿಗೆ ಹೋಗಬೇಕು ಎಂದು ಡಿಸಿ ಎದುರು ಗೋಳಿಟ್ಟರು. ಡಿಎಸ್‌ಎಸ್ ನೇತೃತ್ವದಲ್ಲಿ ಜಿಲ್ಲೆಯ ಜಮಖಂಡಿ, ತೇರದಾಳ, ರಬಕವಿ-ಬನಹಟ್ಟಿ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ತಂತ್ರಸ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ತಮಗೆ ಶಾಶ್ವತ ಮನೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಕಳೆದ ವಾರ ಕೃಷ್ಣೆಯ ಪ್ರವಾಹಕ್ಕೆ ತುತ್ತಾಗಿ ತೀವ್ರ ಸಂಕಷ್ಟದಲ್ಲಿರುವ ಸಂತ್ರಸ್ತರು, ಇದೀಗ ಶಾಶ್ವತ ನೆಲೆಗಾಗಿ ಬೀದಿಗಿಳಿಯುವ ಅನಿವಾರ್ಯತೆ ಎದುರಾಗಿದೆ.
ಕೃಷ್ಣಾ ನದಿ ಪ್ರವಾಹದಿಂದ ಮನೆ, ಭೂಮಿ, ಮನೆಯಲ್ಲಿನ ದಿನ ಬಳಕೆ ಸಾಮಗ್ರಿ ಎಲ್ಲವೂ ಕಳೆದುಕೊಂಡು ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದ ದಯನೀಯ ಸ್ಥಿತಿಯಲ್ಲಿ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದ ಸಂತ್ರಸ್ತರು ಇದೀಗ ಸಂಪೂರ್ಣ ಬೀದಿಗೆ ಬೀಳುವ ಆತಂಕ ಎದುರಾಗಿದೆ. ಶಾಲೆಗಳಲ್ಲಿ ತೆರೆಯಲಾದ ತಾತ್ಕಾಲಿಕ ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರು ಆಸರೆ ಪಡೆದಿದ್ದು, ಅಧಿಕಾರಿಗಳು ಪರಿಹಾರ ಕೇಂದ್ರದಿಂದ ಹೊರಹೋಗಲು ಸೂಚಿಸುತ್ತಿದ್ದಾರೆ. ಮನೆಗಳು ಬಿದ್ದು, ಇರಲು ವ್ಯವಸ್ಥೆ ಇಲ್ಲ. ಇತ್ತ ಪರಿಹಾರ ಕೇಂದ್ರದಿಂದ ಹೊರ ಹೋಗು ಎಂದರೆ ಎಲ್ಲಿಗೆ ಹೋಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂತ್ರಸ್ತರ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್, ಶಾಲೆಗಳಲ್ಲಿ ಇರುವ ಪರಿಹಾರ ಕೇಂದ್ರ ಸ್ಥಗಿತಗೊಳಿಸಿ, ಅದೇ ಗ್ರಾಮಗಳಲ್ಲಿ ಇರುವ ದೇವಸ್ಥಾನ, ಸಮುದಾಯ ಭವನ ಅಥವಾ ಇತರೇ ಸರ್ಕಾರಿ ಕಟ್ಟಡಗಳಲ್ಲಿ ಪರಿಹಾರ ಕೇಂದ್ರ ತೆರೆಯಲಾಗುತ್ತಿದೆ. ಯಾವುದೇ ಅಧಿಕಾರಿ, ಸಂತ್ರಸ್ತರನ್ನು ಪರಿಹಾರ ಕೇಂದ್ರದಿಂದ ಹೊರ ಹೋಗು ಎಂದರೆ ನೇರವಾಗಿ ತಮಗೆ ತಿಳಿಸಬೇಕು. ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪ್ರಮುಖರಾದ ಶ್ರೀಕಾಂತ ಮೇತ್ರಿ, ಬಾಲಪ್ಪ ಚಲವಾದಿ, ಮಹೇಶ ಮಾದರ, ಅಂಜಲಿ ಬಾನು, ಬಸವರಾಜ ಚಲವಾದಿ, ಮಾರುತಿ ಹೊಸಮನಿ, ಮಂಜುನಾಥ ಚಲವಾದಿ, ಲಕ್ಷ್ಮಣ ಹಟ್ಟೆನ್ನವರ ಪಾಲ್ಗೊಂಡಿದ್ದರು.