Advertisement

ಯೋಜನೆಗಳ ಜಾರಿಗೆ ತಾರತಮ್ಯ ಬೇಡ

12:54 PM Jun 20, 2017 | Team Udayavani |

ಪಿರಿಯಾಪಟ್ಟಣ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಯೋಜನೆಗಳನ್ನು ತಾರತಮ್ಯ ಮಾಡದೆ ಜಾರಿಗೊಳಿಸಲು ಎಲ್ಲಾ ಇಲಾಖೆಯ ಅಧಿಕಾರಿಗಳು ಮುಂದಾಗಬೇಕು ಎಂದು ಸಂಸದ ಪ್ರತಾಪ್‌ಸಿಂಹ ಹೇಳಿದರು.

Advertisement

ಪಟ್ಟಣದ ತಾಪಂ ಸಭಾಂಗಳದಲ್ಲಿ ನಡೆದ ಕೇಂದ್ರ ಪುರಸ್ಕೃತ ವಿವಿಧ ಇಲಾಖೆಗಳ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ನರೇಗ ಯೋಜನೆಯಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹೆಚ್ಚಿನ ಕಾಮಗಾರಿಗಳನ್ನು ಹಮ್ಮಿಕೊಂಡು ಕಾರ್ಯಗತಗೊಳಿಸಲು ವಿಫ‌ುಲ ಅವಕಾಶವಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಕೃಷಿ ಇಲಾಖೆಯ ಸಹಾಯ ನಿರ್ದೇಶಕ ಶಿವರಾಮೇಗೌಡ ಸಭೆಗೆ ವಿವಿರ ನೀಡಿ ಈ ಜೂನ್‌ ಹಂಗಾಮಿಗೆ 301 ಮಿ.ಮೀ. ಮಳೆಯಾಗಬೇಕಾಗಿದ್ದು, ಆದರೆ 419ಮಿ.ಮೀ. ಮಳೆಯಾಗಿದೆ. ತಾಲೂಕಿನಲ್ಲಿ 30 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತಂಬಾಕು ಬೆಳೆ ನಾಟಿ ನಡೆದಿದ್ದು, 10 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮುಸುಕಿನ ಜೋಳ ಹಾಗೂ ಮತ್ತಿತರ ಬೆಳೆಗಳ ಬಿತ್ತನೆ ನಡೆದಿದೆ ಎಂದು ತಿಳಿಸಿದರು.

ಸಂಸದ ಪ್ರತಾಪ್‌ಸಿಂಹ ಮಾತನಾಡಿ, ಕೇರಳದ ಬೇನಾಮಿ ರೈತರು ಶುಂಠಿ ಬೆಳೆಗೆ ಸ್ಥಳೀಯ ರೈತರ ಜಮೀನುಗಳನ್ನು ಗುತ್ತಿಗೆ ಪಡೆಯುತ್ತಿದ್ದು, ಇದು ಮುಂದಿನ ದಿನಗಳಲ್ಲಿ ರೈತರ ಬದುಕಿನ ಮೇಲೆ ಪರಿಣಾಮ ಬೀರುವುದರಿಂದ ಕೃಷಿ ಇಲಾಖೆಯ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ಸೂಚಿಸಿದರು.

ರೇಷ್ಮೆ ಬೆಳೆಯನ್ನು ತಾಲೂಕಿನಲ್ಲಿ 250 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ ಎಂದು ಸಹಾಯಕ ನಿರ್ದೇಶಕ ಸಿದ್ದರಾಜು ವಿವರ ನೀಡುತ್ತಿದ್ದಂತೆ ಬೇಸರಗೊಂಡ ಸಂಸದರು ತಂಬಾಕಿಗೆ ಪರ್ಯಾಯವಾಗಿ ರೇಷ್ಮೆ ಬೆಳೆ ಬೆಳೆಯಲು ರೈತರಿಗೆ ಉತ್ತೇಜನ ನೀಡಿ ಕಾರ್ಯಾಗಾರಗಳನ್ನು ಮಾಡಿ ಅರಿವು ಮೂಡಿಸುವಂತೆ ಸೂಚಿಸಿದರು.

Advertisement

ಪುರಸಭಾ ವ್ಯಾಪ್ತಿಯಲ್ಲಿ ಮನೆಯಿಲ್ಲದ ಬಡವರಿಗೆ ಸಾಮೂಹಿಕವಾಗಿ ಮನೆ ನೀಡಲು ಜಮೀನು ಖರೀದಿಸಿ ಆದರೂ ನಿವೇಶನ ನೀಡಬೇಕು ಅಲ್ಲದೆ ಇಂತಹವರಿಗೆ ವಾಜಪೇಯಿ ವಸತಿ ಯೋಜನೆಯಲ್ಲಿ ಮನೆಗಳನ್ನು ನಿರ್ಮಿಸಲು ಪುರಸಭೆ ಸಹಾಯ ಹಸ್ತ ಚಾಚಬೇಕೆಂದು ಪುರಸಭಾ ಅಧಿಕಾರಿಗಳಿಗೆ ತಿಳಿಸಿದರು.

ಸಾಮಾಜಿಕ ಅರಣ್ಯ ವಲಯ ಅರಣ್ಯ ಅಧಿಕಾರಿ ಪರಮೇಶ್ವರ್‌ ಮಾತನಾಡಿ, ಒಂದು ಲಕ್ಷ ವಿವಿಧ ಜಾತಿಯ ಗಿಡಗಳನ್ನು ರೈತರಿಗೆ ವಿತರಿಸಲಾಗಿದ್ದು, ಗ್ರಾಮ ಸಭೆಗಳನ್ನು ಅನುಮೋದನೆ ಗೊಂಡಿರುವವರಿಗೆ ಸಸಿಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.

ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ ಮಿಷನ್‌ ಇದ್ದರೂ ಇಲ್ಲಿ ತಜ್ಞರಿಲ್ಲ, ಮಹಿಳಾ ವೈದ್ಯರಿಲ್ಲ, ಜನರಿಕ್‌ ಔಷಧಿ ಕೇಂದ್ರ ಇನ್ನು ಚಾಲನೆಯಾಗಿಲ್ಲ ಇನ್ನೂ ಮುಂತಾದ ಸಮಸ್ಯೆಗಳನ್ನು ಒಳಗೊಂಡ ಮನವಿಯನ್ನು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ರವಿಕುಮಾರ್‌ ಸಂಸದರಿಗೆ ಸಲ್ಲಿಸಿದರು. ತಾಲೂಕಿನಲ್ಲಿ ಇದುವರೆಗೆ 13 ಸಾವಿರ ಮಂದಿ ರೈತರಿಗೆ ಬೆಳೆ ಪರಿಹಾರ ಒದಗಿಸಲಾಗಿದೆ ಎಂದು ತಹಶೀಲ್ದಾರ್‌ ಮಹೇಶ್‌ ತಿಳಿಸಿದರು.

ತಾಲೂಕಿನಲ್ಲಿ ಪಶುಸಂಗೋಪನಾ ಇಲಾಖೆ ವತಿಯಿಂದ 40 ಫ‌ಲಾನುಭವಿಗಳಿಗೆ ಜರ್ಸಿ ಹಸುಗಳನ್ನು ವಿತರಿಸಲಾಗಿದೆ. 7 ಮಂದಿಗೆ ಕುರಿಗಳನ್ನು ವಿತರಿಸಲಾಗಿದೆ ಎಂದು ಇಲಾಖೆ ಅಧಿಕಾರಿ ಡಾ.ಚಾಮರಾಜ್‌ ಹೇಳಿದರು. ಇದಲ್ಲದೆ ತೋಟಗಾರಿಕೆ, ಕಾರ್ಮಿಕ, ಬಿಸಿಎಂ, ಶಿಕ್ಷಣ ಇಲಾಖೆಗಳು, ತಾಪಂ, ಸೆಸ್ಕ್ ವಿಭಾಗ ಹಾಗೂ ಲೋಕೋಪಯೋಗಿ ಇಲಾಖೆಗಳ ಪ್ರಗತಿ ಪರಿಶೀಲನೆಯಲ್ಲಿ ಸಂಸದರು ಇದೇ ಸಂದರ್ಭ ನಡೆಸಿದರು.

ತಾಪಂ ಅಧ್ಯಕ್ಷೆ ನಿರೂಪರಾಜೇಶ್‌, ತಹಶೀಲ್ದಾರ್‌ ಮಹೇಶ್‌, ಇಒ ಬಸವರಾಜು, ಸಹ ನಿರ್ದೇಶಕ ಬಾಬು, ಸಿಡಿಪಿಒ ಇಂದಿರಾ, ಎಇಇ ಪ್ರಕಾಶ್‌, ಎಂಜಿನಿಯರ್‌ ಪ್ರಭು, ಸಮಾಜ ಕಲ್ಯಾಣ ಚಂದ್ರಪ್ಪ, ಅಕ್ಷರ ದಾಸೋಹದ ಶಿವರಾಜು ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next