Advertisement

ಪುರಸಭೆ ವಾರ್ಡ್‌ ಅಭಿವೃದ್ಧಿಯಲ್ಲಿ ತಾರತಮ್ಯ ಮಾಡದಿರಿ

09:33 PM Feb 04, 2020 | Lakshmi GovindaRaj |

ಚನ್ನರಾಯಪಟ್ಟಣ: ಪುರಸಭೆ ಅಧಿಕಾರಿಗಳು ವಾರ್ಡ್‌ಗಳ ಅಭಿವೃದ್ಧಿಯಲ್ಲಿ ತಾರತಮ್ಯ ಮಾಡಬಾರದು ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ ಹೇಳಿದರು.

Advertisement

ಪಟ್ಟಣದ ಪುರಸಭಾ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಅನುದಾನ ನೀಡುತ್ತದೆ ಇದನ್ನು 23 ವಾರ್ಡ್‌ಗಳಿಗೆ ಸಮನಾಗಿ ಹಂಚಿಕೆ ಮಾಡದೇ ಶಾಸಕರ ಮಾತು ಕೇಳಿ ಜೆಡಿಎಸ್‌ ಸದಸ್ಯರು ಇರುವ ವಾರ್ಡ್‌ಗೆ ಹೆಚ್ಚು ಅನುದಾನ ನೀಡಲಾಗುತ್ತಿದೆ. ಅಧಿಕಾರಿಗಳ ಧೋರಣೆ ಇದೇ ರೀತಿ ಮುಂದುವರಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

36 ಲಕ್ಷ ಅನುದಾನ ಬಿಡುಗಡೆ: ಟಾಸ್ಕ್ ಫೋರ್ಸ್‌ನಿಂದ 36 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು 11ನೇ ವಾರ್ಡ್‌ಗೆ 12 ಲಕ್ಷ ಅನುದಾನ ನೀಡಿದರೆ ಉಳಿದ ವಾರ್ಡ್‌ನ ಅಭಿವೃದ್ಧಿ ಹೇಗೆ ಮಾಡುತ್ತೀರಿ? ಈ ರೀತಿ ತಾರತಮ್ಯ ಮಾಡುವುದು ನಿಲ್ಲಬೇಕು ಎಂದರು.

ಎಲ್ಲಾ ವಾರ್ಡ್‌ ಅಭಿವೃದ್ಧಿಯಾಗಲಿ: ಸದಸ್ಯ ಪ್ರಕಾಶ್‌ ಮಾತನಾಡಿ 23 ವಾರ್ಡ್‌ ಸದಸ್ಯರು ಜನರಿಂದ ಆಯ್ಕೆಯಾಗಿ ಬಂದಿದ್ದಾರೆ. ಪ್ರತಿ ವಾರ್ಡಿನ ಸಾರ್ವಜನಿಕರು ತೆರಿಗೆ ಕಟ್ಟುತ್ತಿದ್ದಾರೆ. ಆದರೂ ತಾರತಮ್ಯ ಮಾಡಲಾಗುತ್ತಿದೆ. ಇದೇ ರೀತಿ ಆದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಂದ ತೆರಿಗೆ ವಸೂಲಿಗೆ ಕಷ್ಟವಾಗಲಿದೆ. ಒಂದೆರಡು ವಾರ್ಡ್‌ ಅಭಿವೃದ್ಧಿಯಾದರೆ ನಗರಕ್ಕೆ ಶೋಭೆ ಬರುವುದಿಲ್ಲ ಎಲ್ಲಾ ವಾರ್ಡ್‌ಗಳು ಅಭಿವೃದ್ಧಿ ಹೊಂದಬೇಕಿದೆ ಎಂದು ಹೇಳಿದರು.

ರಸ್ತೆ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಿ: ರೇಣುಕಾಂಬಾ ರಸ್ತೆ ಹಾಗೂ ಬಾಗೂರು ರಸ್ತೆ ಹೆಚ್ಚು ವಾಣಿಜ್ಯ ಮಳಿಗೆ ಹೊಂದಿಗೆ ಇಲ್ಲಿಂದ ಹೆಚ್ಚು ತೆರಿಗೆ ಸಂಗ್ರಹವಾಗುತ್ತಿದೆ ಆದರೂ ರಸ್ತೆ ಗುಂಡಿ ಮುಚ್ಚಲು ಎರಡು ವರ್ಷದಿಂದ ಪುರಸಭೆಗೆ ಆಗುತ್ತಿಲ್ಲ. ಪ್ರಭಾವಿಗಳ ಒತ್ತಡಕ್ಕೆ ಮಣಿದು ಕಂದಾಯ ನಿವೇಶನ ಇರುವ ಜಾಗದಲ್ಲಿ ಸಿಮೆಂಟ್‌ ರಸ್ತೆ ನಿರ್ಮಿಸುತ್ತಿರುವುದಲ್ಲದೇ ಯುಜಿಡಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ .ನಗರದ ಹೃದಯ ಭಾಗದಲ್ಲಿ ಕತ್ತಲು ಆವರಿಸಿದ್ದರೂ ಅನಗತ್ಯವಾಗಿ ತೋಟಕ್ಕೆ ತೆರಳುವ ಕಡೆಗೆ ವಿದ್ಯುತ್‌ ದೀಪ ಹಾಕಲಾಗುತ್ತಿದೆ ಎಂದು ಆರೋಪಿಸಿದರು.

Advertisement

ಕಾಂಗ್ರೆಸ್‌ ಪಕ್ಷದಿಂದ ಆಯ್ಕೆ ಆಗಿರುವು ಸದಸ್ಯರು ಕೈಲಾಗದವರಲ್ಲ. ಪ್ರಶ್ನೆ ಮಾಡುವುದು ತಡವಾಗುತ್ತಿದೆ. ಓರ್ವ ವ್ಯಕ್ತಿ ಪರವಾಗಿ ಒಂದು ಪಕ್ಷದ ಪರವಾಗಿ ಅಧಿಕಾರಿಗಳು ಕೆಲಸ ಮಾಡಲು ಮುಂದಾದರೆ ನಮಗೂ ಕಾನೂನು ಗೊತ್ತಿದೆ ಯಾವ ರೀತಿಯಲ್ಲಿ ಅಧಿಕಾರಿಗಳಗೆ ತಕ್ಕ ಪಾಠ ಕಲಿಸಬೇಕು ಎನ್ನುವುದು, ಇದನ್ನು ಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಿ, ಸರ್ಕಾರ ನಿಯಮ ಪಾಲಿಸುವಂತೆ ತಿಳಿಸಿದರು.

ಪುರಸಭೆ ಮಳಿಗೆ ಹರಾಜಿಗೆ ಮೀನ ಮೇಷ: ಪುರಸಭೆಗೆ 360 ಮಳಿಗೆ ಸೇರಿದ್ದು ಅವುಗಳನ್ನು ವೈಜ್ಞಾನಿಕವಾಗಿ ಹರಾಜು ಮಾಡುತ್ತಿಲ್ಲ.ಎರಡು ವರ್ಷದಿಂದ ರಾಷ್ಟ್ರೀಯ ಹೆದ್ದಾರಿ ಮುಂಭಾಗದ ಮಳಿಗೆಗಳಿಗೆ ಧರ ನಿಗದಿ ಮಾಡಲು ಅಧಿಕಾರಿಗಳು ಮೀನ ಮೇಷ ಎಣಿಸುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ವಿರೋಧ ಪಕ್ಷದವರು ನಮ್ಮನ್ನು ವರ್ತಕರ ವಿರುದ್ಧ ಎತ್ತಿಕಟ್ಟುತ್ತಾರೆ, ಪುರಸಭೆಗೆ ಆದಾಯ ತರುವ ದೃಷ್ಟಿಯಿಂದ ಈ ರೀತಿ ಮಾಡುತ್ತಿದ್ದೇವೆ ಹೊರತು ನಮಗೆ ವೈಯಕ್ತಿಕ ಆದಾಯ ಮುಖ್ಯವಲ್ಲ ಎಂದರು.

ರೈಲ್ವೆ ನಿಲ್ದಾಣ ರಸ್ತೆ ಅಭಿವೃದ್ಧಿ ಮಾಡಿ: ಸದಸ್ಯೆ ಸುಜಾತ ಮಾತನಾಡಿ ರೈಲ್ವೆ ನಿಲ್ದಾಣ ರಸ್ತೆ ಅಭಿವೃದ್ಧಿ ಮಾಡುತ್ತಿಲ್ಲ ಹೊಸದಾಗಿ ನಿವೇಶನ ಮಾಡುತ್ತಿರುವ ಕಡೆ ರಸ್ತೆ ನಿರ್ಮಾಣ ಆಗುತ್ತಿದೆ. 200ಕ್ಕೂ ಹೆಚ್ಚು ವಿದ್ಯುತ್‌ ದೀಪಗಳು ಬಂದಿವೆ. ಕಾಂಗ್ರೆಸ್‌ ಸದಸ್ಯರ ವಾರ್ಡಿಗೆ ನಾಲ್ಕರಿಂದ ಐದು ಹಾಕಿದರೆ ಜೆಡಿಎಸ್‌ ಸದಸ್ಯರ ವಾರ್ಡಿಗೆ 15 ರಿಂದ 20 ಹಾಕಲಾಗುತ್ತಿದೆ ಇದು ಯಾವ ನ್ಯಾಯ ಕಾನೂನು ರೀತಿಯಲ್ಲಿ ಕೆಲಸ ಮಾಡಿ, ಕೆಲವ ಮಾತು ಕೇಳಿ ತಮ್ಮ ಹುದ್ದೆಗೆ ಕುತ್ತು ತಂದುಕೊಳ್ಳಬೇಕಾಗುತ್ತದೆ ಜೋಕೆ ಎಂದು ಎಚ್ಚರಿಸಿದರು.

ಆಶ್ರಯ ಸಭೆ ನಡೆಸಿಲ್ಲ: ವಿಧಾನ ಪರಿಷತ್‌ ಸದಸ್ಯ ಗೋಪಾಲಸ್ವಾಮಿ ಮಾತನಾಡಿ, ಒಂದು ವರ್ಷದಿಂದ ಆಶ್ರಯ ಸಭೆ ಮಾಡಿಲ್ಲ ಪುರಸಭೆ ಅಧಿಕಾರಿಗಳು ಹಾಗೂ ಶಾಸಕರು ತಮಗೆ ಬೇಕಾದಾಗ ಆಶ್ರಯ ಸಭೆ ಮಾಡಿದ್ದಾರೆ. ಆಶ್ರಯ ಸಮಿತಿಯೂ ಅಧ್ಯಕ್ಷರ ಗಮನಕ್ಕೆ ತರದೆ ಸಭೆ ಮಾಡುವುದು ತರವಲ್ಲ. ನಾಗಸಮುದ್ರ ಹಾಗೂ ಮಾರೇನಹಳ್ಳಿ ಬಳಿ ನಿವೇಶನವನ್ನು ಹಂಚಿಕೆ ಮಾಡಿದ್ದು ಒಂದು ನಿವೇಶ ಎರಡು ಮೂರು ಹಕ್ಕು ಪತ್ರ ನೀಡಿರುವ ಬಗ್ಗೆ ಮಾಹಿತಿ ಇದೆ ಈ ರೀತಿ ಮಾಡುವ ಮೂಲಕ ಬಡವರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಆಪಾದಿಸಿದರು.

ಇ ಸ್ವತ್ತು ಮಾಲು ಲಂಚ ವಸೂಲಿ- ಆರೋಪ: ಇ ಸ್ವತ್ತು ಮಾಡಲು 20 ಸಾವಿರ ಹಣ ಪಡೆಯಲಾಗುತ್ತಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಪುರಸಭೆ ಸದಸ್ಯೆಯ ಪತಿ ಹಣ ನೀಡಿ ಈ ಸ್ವತ್ತು ಮಾಡಿಸಿಕೊಳ್ಳುತ್ತಾರೆ ಎಂದರೆ ಪುರಸಭೆಯಲ್ಲಿ ಎಷ್ಟರಮಟ್ಟಿಗೆ ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವುದು ತಿಳಿಯುತ್ತಿದೆ. ಸಿನಿಮಾಮಂದಿರ, ಹೋಟೆಲ್‌ಗ‌ಳಲ್ಲಿ ಶೌಚಾಲಯ ಸ್ವತ್ಛತೆ ಇಲ್ಲ ಭೇಟಿ ನೀಡಿ ಕ್ರಮಕ್ಕೆ ಮುಂದಾಗಬೇಕು ಎಂದು ಸೂಚಿಸಿದರು.

ಜಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ನಲ್ಲಿಗೆ ಮೀಟರ್‌ ಅಳವಡಿಸಲಾಗುತ್ತಿದೆ. ಆದರೆ ಪುರಸಭೆ ವ್ಯಾಪ್ತಿಯಲ್ಲಿ ಏಕೆ ಕುಡಿಯುವ ನೀರಿನ ನಲ್ಲಿಗೆ ಮೀಟರ್‌ ಹಾಕುತ್ತಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಿಒ ಕುಮಾರ್‌, ಪುರಸಭೆ ವ್ಯಾಪ್ತಿಯಲ್ಲಿ 900 ನಲ್ಲಿಗೆ ಪ್ರಯೋಗಿಕವಾಗಿ ಹಾಕಲಾಗುತ್ತಿದೆ ಮುಂದಿನ ದಿನ‌ಗಳಲ್ಲಿ ಸಂಪೂರ್ಣ ಮೀಟರ್‌ ಅಳವಡಿಸುತ್ತೇವೆ ಎಂದರು.

ಯಾವುದೇ ಒತ್ತಡಕ್ಕೆ ಮಣಿಯದೇ ಕೆಲಸ ಮಾಡುತ್ತೇವೆ, ಎರಡೂರು ತಿಂಗಳಲ್ಲಿ ಮಳಿಗೆ ಹರಾಜು ಮಾಡಲಾಗುತ್ತದೆ.ಆಶ್ರಯ ಫ‌ಲಾನುಭವಿಗಳ ಪಟ್ಟಿ ತಯಾರಿಸುತ್ತೇವೆ. ಈ ಹಿಂದೆ ಇ ಸ್ವತ್ತಿಗೆ ಹಣ ಪಡೆಯುತ್ತಿದ್ದ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ ಎಂದರು. ಸದಸ್ಯರಾದ ಆದರ್ಶ, ಲಕ್ಷ್ಮಣೇಗೌಡ, ಇಲಿಯಾಜ್‌ ಮೊದಲಾದವರು ಉಪಸ್ಥಿತರಿದ್ದರು.

ಕಾಮಗಾರಿ ಬಗ್ಗೆ ಮಾಹಿತಿ ನೀಡಿ: ಪುರಸಭೆಗೆ ಅಲ್ಪ ಸಂಖ್ಯಾತ ಇಲಾಖೆ, ಲೋಕೋಪಯೋಗಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ನಗರೋತ್ಥಾನ, ಎಸ್ಸಿ,ಎಸ್ಸಿ ಅನುದಾನ, ನೀರಾವರಿ ಇಲಾಖೆ ಹೀಗೆ ಹಲವು ಇಲಾಖೆ ಮೂಲಕ ಸರ್ಕಾರ ಕೋಟ್ಯಂತರ ರೂ. ಬಿಡುಗಡೆ ಮಾಡಿದ್ದು, ಕಾಮಗಾರಿ ನಡೆಯುತ್ತಿದೆ.

ಈ ಬಗ್ಗೆ ಮುಖ್ಯಾಧಿಕಾರಿ(ಸಿಒ)ಗಳಿಗೆ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳಿಗೆ ಈ ಮಾಹಿತಿ ಇಲ್ಲ. ಆದರೂ ಪುರಸಭೆ ವ್ಯಾಪ್ತಿಯಲ್ಲಿ ಕಾಮಗಾರಿ ಯಾವ ರೀತಿ ನಡೆಯುತ್ತಿದೆ ಎಂದರೆ ಶಾಸಕ ಸಿ.ಎನ್‌.ಬಾಲಕೃಷ್ಣ ಕಡೆ ಕೈ ತೋರುತ್ತಿದ್ದಾರೆ. ಎರಡೂ¾ರು ದಿವಸದಲ್ಲಿ ಅನುದಾನ ಬಿಡುಗಡೆ ಆಗಿರುವುದು ಹಾಗೂ ಕಾಮಗಾರಿ ಬಗ್ಗೆ ಮಾಹಿತಿ ನೀಡಬೇಕು ಎಂದು ಎಂಎಲ್‌ಸಿ ಗೋಪಾಲಸ್ವಾಮಿ ಆಜ್ಞೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next