ಮೈಸೂರು: ಕಿಚ್‌ಗುತ್ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವವರು ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೂ ಆಸ್ಪತ್ರೆಗಳಿಂದ ಬಿಡುಗಡೆ ಮಾಡದಂತೆ ಚಾಮರಾಜ ನಗರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಂಗಳವಾರ ಕೆ.ಆರ್.ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಮೈಸೂರಿನ 11 ಆಸ್ಪತ್ರೆಗಳಲ್ಲಿ 101 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ 24 ಮಂದಿಯ ಸ್ಥಿತಿ ಇನ್ನೂ ಗಂಭೀರವಾಗಿದೆ.
ಚೇತರಿಸಿಕೊಂಡಿರುವ ಕೆಲವರನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡುವುದಾಗಿ ವೈದ್ಯರು ತಿಳಿಸಿದ್ದರು, ಆದರೆ, ಘಟನೆಯ ಗಂಭೀರತೆ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಅವರ ಆರೋಗ್ಯ ಸುಧಾರಣೆಯಾಗುವವರೆಗೂ ಆಸ್ಪತ್ರೆಯಿಂದ ಬಿಡುಗಡೆ ಮಾಡದಂತೆ ಸೂಚಿಸಿರುವುದಾಗಿ ಹೇಳಿದರು.
ಸೋಮವಾರ ಅಧಿವೇಶನದಲ್ಲಿ ಭಾಗವಹಿಸಬೇಕಿತ್ತಾದರೂ ಇಲ್ಲಿ ಇಬ್ಬರು ಸಾವನ್ನಪ್ಪಿದ್ದರಿಂದ ಬೆಳಗಾವಿಗೆ ತೆರಳದೆ ಇಲ್ಲೇ ಇದ್ದು, ಎಲ್ಲ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸುತ್ತೇನೆ. ಆ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಇದು ನನ್ನ ಜವಾಬ್ದಾರಿ ಎಂದರು.
ಸದನದಲ್ಲೂ ಈ ಪ್ರಕರಣ ಪ್ರಸ್ತಾಪವಾಗಿದ್ದು, ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈಗಾಗಲೇ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಮೃತಪಟ್ಟವರೆಲ್ಲರು ಬಡ ಕುಟುಂಬಗಳಾಗಿರುವುದರಿಂದ ಇನ್ನೂ ಹೆಚ್ಚಿನ ಪರಿಹಾರ ನೀಡುವಂತೆ ಒತ್ತಾಯಿಸುವುದಾಗಿ ತಿಳಿಸಿದರು.
ಮಾರ್ಟಳ್ಳಿ ಸಮೀಪದ ಕೋಟೈಪೊದೆ ಗ್ರಾಮದ ಲಂಬಾಣಿ ಸಮುದಾಯದ ಮೃತ ಕೃಷ್ಣಾನಾಯ್ಕ ಮತ್ತು ಮೈಲಿಬಾಯಿ ದಂಪತಿಯ ಮೂವರು ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಆಳ್ವಾಸ್ ಶಿಕ್ಷಣ ಸಂಸ್ಥೆ ಮುಂದೆ ಬಂದಿದೆ. ಅಲ್ಲಿಗೆ ಸೇರಬೇಕೋ ಬೇಡವೋ ಎಂಬುದನ್ನು ಅವರೇ ತೀರ್ಮಾನಿಸಬೇಕಿದೆ ಎಂದು ತಿಳಿಸಿದರು.