ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾದರೆ, ಕರ್ನಾಟಕಕ್ಕೆ ಮುಂಗಾರು ಪ್ರವೇಶ ತಡವಾಗುವ ಸಾಧ್ಯತೆಯಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತ (ಆ್ಯಂಟಿ ಸೈಕ್ಲೋನ್) ಸೃಷ್ಟಿಯಾಗುವ ಸಾಧ್ಯತೆಗಳು ಕಂಡು ಬಂದಿವೆ. ಒಂದೊಮ್ಮೆ ಚಂಡ ಮಾರುತ ಸೃಷ್ಟಿಯಾದರೆ ಮೋಡಗಳ ತೀವ್ರತೆ ಹಾಗೂ ಗಾಳಿಯ ವೇಗ ಕಡಿಮೆ ಯಾಗಲಿದ್ದು, ಲಕ್ಷದ್ವೀಪದಿಂದ ಕೇರಳಕ್ಕೆ ಬರುವ ಮುಂಗಾರು ಮಾರುತಗಳು ದುರ್ಬಲಗೊಂಡು ಮುಂಗಾರು ಪ್ರವೇಶ ತಡವಾಗಲಿದೆ ಎಂದು ಕೇಂದ್ರದ ನಿರ್ದೇಶಕ ಶ್ರೀನಿವಾಸರೆಡ್ಡಿ ತಿಳಿಸಿದರು.
ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗುವ ಚಂಡಮಾರುತ, ಮುಂಗಾರು ಮಾರುತ ಗಳಿಗೆ ಅಡ್ಡಿಯಾಗಲಿದೆ. ಇದರಿಂದ ಮಾರುತಗಳ ತೀವ್ರತೆ ಕಡಿಮೆಯಾಗ ಲಿದ್ದು, ಚಂಡಮಾರುತದ ಪ್ರಭಾವ ಕಡಿಮೆಯಾದ ಬಳಿಕವಷ್ಟೇ ಮುಂಗಾರು ಕೇರಳ ಪ್ರವೇಶಿಸುತ್ತದೆ. ಇದರಿಂದಾಗಿ ಮುಂಗಾರು ರಾಜ್ಯ ಪ್ರವೇಶವೂ ತಡವಾಗುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದರು.
ಮೂರು ದಿನಗಳು ಮಳೆ ಸಾಧ್ಯತೆ: ಈ ಮಧ್ಯೆ, ದಕ್ಷಿಣ ಒಳನಾಡು ಹಾಗೂ ಮಲೆನಾಡು ಭಾಗಗಳಲ್ಲಿ ಮುಂದಿನ 3 ದಿನಗಳ ಕಾಲ ಗುಡುಗು-ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿ ಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನು, ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆಯ ಪ್ರಭಾವ ಹೆಚ್ಚಾಗಿದ್ದು, ಮೇಲ್ಮೈ ಸುಳಿಗಾಳಿಯ ಪ್ರಭಾವದಿಂದಾಗಿ ರಾಜ್ಯದ ಹಲವೆಡೆ ಗಳಲ್ಲಿ ಮಳೆ ಮುಂದುವರಿದಿದೆ. ಪ್ರಮುಖವಾಗಿ ದಕ್ಷಿಣ ಒಳನಾಡು, ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮುಂದಿನ ಮೂರು ದಿನಗಳು ದಕ್ಷಿಣ ಒಳನಾಡಿನಲ್ಲಿ ಗುಡುಗು-ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜತೆಗೆ, ಉತ್ತರ ಒಳನಾಡಿನಲ್ಲಿ ತಿಂಗಳಾಂತ್ಯದವರೆಗೆ ವಾಡಿಕೆಗಿಂತ 2 ರಿಂದ 4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಾಗಿರಲಿದ್ದು, ಕೆಲವೆಡೆ ಹಗುರದಿಂದ ಕೂಡಿದ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.