ಮೈಸೂರು: ಪುಲ್ವಾಮ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತ ನಡೆಸಿದ ಪ್ರತಿ ದಾಳಿಗೆ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ದೇಶದಲ್ಲಿನ ಸಣ್ಣಗುಂಪು ಸಾಕ್ಷ್ಯ ಕೇಳುತ್ತಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಬುಧವಾರ ನಡೆದ ಕಾರ್ಯಕ್ರಮ ದಲ್ಲಿ “ಭಾರತ ಸರ್ಕಾರದ ಇಂಟಲಿಜೆನ್ಸ್ ಬ್ಯೂರೋದ ನಿವೃತ್ತ ಅಧಿಕಾರಿ ಆರ್.ಎನ್. ಕುಲಕರ್ಣಿ ಅವರು ಬರೆ ದಿರುವ ಫ್ಯಾಕ್ಟರ್ ಆಫ್ ಟೆರರಿಸಂ ಇನ್ ಇಂಡಿಯಾ ಪುಸ್ತಕ ಲೋಕಾ ರ್ಪಣೆಗೊಳಿಸಿ ಮಾತನಾಡಿದರು.
ಉಗ್ರರ ವಿರುದ್ಧದ ದಾಳಿಯ ಸಂದರ್ಭದಲ್ಲಿ ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲುವ ಬದಲಿಗೆ ಸಾಕ್ಷ್ಯ ಕೇಳುವ ಮೂಲಕ ಸೇನೆಯ ವಿಶ್ವಾಸ ಕುಸಿಯು ವಂತೆ ಮಾಡುವುದು ಸರಿಯಲ್ಲ ಎಂದರು.
ಭದ್ರತೆ ವಿಚಾರ: 26/11 ಮುಂಬೈ ದಾಳಿಯ ಬಳಿಕ ಅಂದಿನ ಯುಪಿಎ ಸರ್ಕಾರ ಸೇನೆಗೆ ಸಂಪೂರ್ಣ ಸಹಕಾರ ನೀಡಿದ್ದರೆ, ಜಮ್ಮು-ಕಾಶ್ಮೀರ ದಲ್ಲಿ ಇಂದಿನ ಸ್ಥಿತಿ ಇರುತ್ತಿರಲಿಲ್ಲ. ಭಾರತದಲ್ಲಿ ಭಯೋ ತ್ಪಾದನೆ ಇಷ್ಟು ದೊಡ್ಡ ಮಟ್ಟಕ್ಕೆ ತಲೆ ಎತ್ತು ತ್ತಿರಲಿಲ್ಲ. ನರೇಂದ್ರ ಮೋದಿ ಪ್ರಧಾನಮಂತ್ರಿ ಆದ ಮೇಲೆ ಆತಂರಿಕ ವಲಯದಲ್ಲಿನ ಭಯೋತ್ಪಾದನೆ, ಅದಕ್ಕೆ ರಾಜಕೀಯ ಬೆಂಬಲವನ್ನು ತಿಳಿದಿದ್ದ ಅವರು, ಜಗತ್ತಿನ ಹಲವು ರಾಷ್ಟ್ರಗಳನ್ನು ಸುತ್ತಿ ಭಯೋತ್ಪಾದನೆ ವಿರುದ್ಧ ಹೋರಾಡಲು ಎಲ್ಲರನ್ನು ಒಪ್ಪಿಸಿದರು. ಸಶಸ್ತ್ರಪಡೆಯನ್ನು ಸಜ್ಜುಗೊಳಿ ಸಿದರು. ಸೈನಿಕರ ಈ ಹೋರಾಟಕ್ಕೆ ಸಾಕ್ಷ್ಯ ಕೇಳಲಾಗುತ್ತಿದೆ. ಪ್ರಜಾಪ್ರಭುತ್ವದ ಹೆಸರಿ ನಲ್ಲಿ ಯಾರನ್ನಾದರೂ ಪ್ರಶ್ನಿಸುವುದು ಸುಲಭ, ಆದರೆ, ದೇಶದ ಭದ್ರತೆ ವಿಚಾರ ವಾದ್ದರಿಂದ ಇದಕ್ಕೆಲ್ಲ ಉತ್ತರಿಸುವುದು ಕಷ್ಟ ಎಂದರು.
ಸಾವಿನ ಲೆಕ್ಕ ಹಾಕಿಲ್ಲ: ಉಗ್ರರ ನೆಲೆ ಮೇಲಿನ ದಾಳಿಯಲ್ಲಿ 200, 300, 400, 500 ಮಂದಿ ಮೃತಪಟ್ಟಿದ್ದಾರೆ ಎಂದೆಲ್ಲ ಹೇಳಲಾಗುತ್ತಿದೆ. ಆದರೆ, ನಮ್ಮ ಪ್ರತಿ ದಾಳಿಗೆ ಬೌಂಡರಿ ನಿಗದಿಪಡಿಸಿದ್ದೆವು. ಅದನ್ನು ನಾಶಪಡಿಸಲಾಗಿದೆ. ಸಾವು- ನೋವು ಲೆಕ್ಕ ಹಾಕಿಲ್ಲ. ಪುಲ್ವಾಮ ಘಟನೆಗೆ ಅದು ಪ್ರತೀಕಾರವಲ್ಲ. ಬದಲಿಗೆ ಭಯೋತ್ಪಾದನೆ ವಿರುದ್ಧದ ಹೋರಾಟದ ನಿರಂತರ ಪ್ರಕ್ರಿಯೆ ಎಂದು ಹೇಳಿದರು.
ಪಾಕಿಸ್ತಾನಕ್ಕೆ ನೇರ ಯುದ್ಧ ಸಾಧ್ಯವಾಗ ದಿರುವುದರಿಂದ ಧರ್ಮದ ಆಧಾರದ ಮೇಲೆ ಜಿಹಾದಿಗೆ ಸೆಳೆದು ಭಾರತದ ಒಳಗೆ ಆಂತರಿಕ ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಪಠಾಣ್ ಕೋಟ್ ದಾಳಿ, ಉರಿ ದಾಳಿ, ಸಂಸತ್ ಮೇಲಿನ ದಾಳಿ ಮತ್ತು ಮುಂಬೈ ದಾಳಿ ಎಲ್ಲವೂ ಇದೇ ಆಗಿತ್ತು . ಭಾರತದಲ್ಲಿ ಜಿಹಾದಿ ಭಯೋತ್ಪಾದನೆ ಮತ್ತು ರೆಡ್ ಕಾರಿಡಾರ್ ಭಯೋತ್ಪಾದನೆ ಇದೆ. ಸಿದ್ಧಾಂತದ ಆಕರ್ಷಣೆಗೆ ಒಳಗಾಗಿ ರೆಡ್ ಕಾರಿಡಾರ್ ಭಯೋತ್ಪಾದನೆಗೆ ಒಳಗಾಗು ವವರ ಸಂಖ್ಯೆ ಹೆಚ್ಚಾಗಿದೆ. ಪಾಕಿಸ್ತಾನ ಪ್ರಾಯೋಜಿತ ಜಿಹಾದಿಗಳು ಜಮ್ಮುವಿನಲ್ಲಿ ಭಾರತೀಯ ಸೇನಾಪಡೆಯ ಮೇಲೆ ದಾಳಿ ಮಾಡುತ್ತಿವೆ ಎಂದರು.
ಕೆಲ ಮಾನವ ಹಕ್ಕು ಸಂಘಟನೆಗಳು ಸೇನೆಯ ಕೆಲಸಕ್ಕೆ ಅನಗತ್ಯವಾಗಿ ಅಡ್ಡಿಪಡಿಸುತ್ತಿವೆ. ಸೇನೆ ಮೇಲೆ ದಾಳಿ ನಡೆಸುವವ ರನ್ನು, ಆಂತರಿಕ ಗಲಭೆ ಸೃಷ್ಟಿಸುವವರನ್ನು ಮಾನವ ಹಕ್ಕುಗಳ ಹೆಸರಿನಲ್ಲಿ ಈ ಸಂಘಟನೆಗಳು ಬೆಂಬಲಿಸುತ್ತವೆ ಎಂದು ತರಾಟೆಗೆ ತಗೆದುಕೊಂಡರು. ದೇಣಿಗೆ: ಇದೇ ಸಂದರ್ಭದಲ್ಲಿ ಸೈನಿಕರ ಕ್ಷೇಮಾಭಿವೃದ್ಧಿ ನಿಧಿಗೆ ಆದಿತ್ಯ ಆಸ್ಪತ್ರೆವತಿಯಿಂದ 1 ಕೋಟಿ ಮತ್ತು ಮಾಧುರಿ ತಾತಾಚಾರಿ ಅವರು 5 ಲಕ್ಷ ರೂ. ದೇಣಿಗೆ ನೀಡಿದರು.