Advertisement
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾನುವಾರ ನಡೆದ ನೀತಿ ಆಯೋಗದ ಆಡಳಿತ ಮಂಡಳಿಯ 7ನೇ ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೆಲವು ಕಾನೂನು ರಚಿಸುವಾಗ ಅಥವಾ ಕಾನೂನುಗಳನ್ನು ಪರಿಷ್ಕರಣೆಗೊಳಿಸುವಾಗ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಬೇಕು. ಯಾವುದೇ ರಾಜ್ಯದ ಬಗ್ಗೆ ಕಾನೂನು ರೂಪಿಸುವಾಗ ಅಥವಾ ಕಾನೂನು ಜಾರಿಗೊಳಿಸುವಾಗ ಆಯಾ ರಾಜ್ಯದ ಅಭಿಪ್ರಾಯವನ್ನು ಪಡೆಯಬೇಕು ಎಂದು ಆಗ್ರಹಿಸಿದರು.
Related Articles
Advertisement
ಓಂಬುಡ್ಸ್ಮನ್ ಬೇಕು: ಪಟ್ನಾಯಕ್ ಸಲಹೆ
ಸಭೆಯಲ್ಲಿ ಮಾತನಾಡಿದ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಯೋಜನೆಗಳ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯಗಳ ನಡುವೆ ಏರ್ಪಡುವ ವಿವಾದವನ್ನು ನೀತಿ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ನೀತಿ ಆಯೋಗದ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರದ ಹಲವಾರು ಯೋಜನೆಗಳು ವಿವಾದಕ್ಕೂ ಈಡಾಗಿರುವ ಉದಾಹರಣೆಗಳುಂಟು. ಇಂಥ ಸಮಸ್ಯೆಗಳನ್ನು ಪರಿಹರಿಸಲು ನೀತಿ ಆಯೋಗವು ಓಂಬುಡ್ಸ್‌ಮನ್‌ನಂಥ ವ್ಯವಸ್ಥೆಯೊಂದನ್ನು ಜಾರಿಗೊಳಿಸಬೇಕು ಎಂದರು.
ಹೆಚ್ಚಿನ ಅನುದಾನಕ್ಕೆ ಮನವಿ
ಒಡಿಶಾವು ಪ್ರತಿ ವರ್ಷವೂ ನೈಸರ್ಗಿಕ ಪ್ರಕೋಪಗಳಿಗೆ ಸಿಲುಕಿ ತತ್ತರಿಸುತ್ತದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಹೊರೆ ಬೀಳುತ್ತಲೇ ಇದ್ದು, ಕೇಂದ್ರದಿಂದ ಹೆಚ್ಚಿನ ಮಟ್ಟದ ಹಣಕಾಸು ನೆರವು ಬೇಕೆಂದು ಆಗ್ರಹಿಸಿದರು.
ಜಿಎಸ್ಟಿ ಪರಿಹಾರ ಅವಧಿ ಹೆಚ್ಚಿಸಿ
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನುಷ್ಠಾನದಿಂದಾಗಿ ರಾಜ್ಯಗಳಿಗೆ ಆಗುತ್ತಿರುವ ನಷ್ಟವನ್ನು ತುಂಬಿಸಲು ಆಯಾ ರಾಜ್ಯಗಳಿಗೆ ನೀಡಲಾಗುವ ಪರಿಹಾರ ಧನ ಹಂಚಿಕೆ ವ್ಯವಸ್ಥೆಯನ್ನು ಮುಂದಿನ ಐದು ವರ್ಷಗಳಿಗೆ ವಿಸ್ತರಿಸಬೇಕೆಂದು ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಆಗ್ರಹಿಸಿದ್ದಾರೆ. ಇದೇ ವೇಳೆ, ಛತ್ತೀಸ್‌ಗಡದಲ್ಲಿರುವ ಕಲ್ಲಿದ್ದಲು ಹಾಗೂ ಅಪರೂಪದ ಖನಿಜಗಳಿಗೆ ವಿಧಿಸಲಾಗುವ ರಾಯಲ್ಟಿ ಧನವನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಮಾತನಾಡಿದ ಅವರು, ಜಿಎಸ್‌ಟಿಯಿಂದಾಗಿ ಪ್ರಸಕ್ತ ಹಣಕಾಸು ವರ್ಷ ಮುಗಿಯುವ ಹೊತ್ತಿಗೆ ಛತ್ತೀಸ್‌ಗಡಕ್ಕೆ 5 ಸಾವಿರ ಕೋಟಿ ರೂ. ನಷ್ಟವಾಗುತ್ತದೆ. ಇದನ್ನು ತುಂಬಿಕೊಡುವ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಆಶ್ವಾಸನೆ ನೀಡಿಲ್ಲ. ಎಲ್ಲಾ ರಾಜ್ಯಗಳಿಗೂ ಇದೇ ರೀತಿಯ ಸಮಸ್ಯೆ ಇರುವುದರಿಂದ ಜಿಎಸ್‌ಟಿ ನಷ್ಟಕ್ಕಾಗಿ ನೀಡುವ ಪರಿಹಾರ ಧನ ವಿತರಣೆ ಸೌಲಭ್ಯವನ್ನು ಮುಂದಿನ ಐದು ವರ್ಷಗಳವರೆಗೆ ವಿಸ್ತರಿಸಬೇಕು ಎಂದು ಹೇಳಿದರು.
ನೀತಿ ಆಯೋಗದ ಸಭೆಗೆ ನಿತೀಶ್ ಗೈರು
ಪ್ರಧಾನಿ ಮೋದಿ ನೇತೃತ್ವದಲ್ಲಿ ನವದೆಹಲಿಯಲ್ಲಿ ಭಾನುವಾರ ನಡೆದ ನೀತಿ ಆಯೋಗದ ಸಭೆಯಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಭಾಗವಹಿಸಿಲ್ಲ. ಕೊರೊನಾ ಕಾರಣಕ್ಕಾಗಿ ಸಭೆಗೆ ಗೈರುಹಾಜರಾಗಿದ್ದಾರೆ ಎಂದು ಹೇಳಿಕೆ ನೀಡಲಾಗಿದೆ. ಜೂ.17ರ ಬಳಿಕ ನಿತೀಶ್ ಕುಮಾರ್ ಗೈರುಹಾಜರಾಗುತ್ತಿರುವ ಕೇಂದ್ರ ಸರ್ಕಾರದ ಮಟ್ಟದ ನಾಲ್ಕನೇ ಮಹತ್ವದ ಸಭೆ ಇದಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪ್ರಮಾಣ ಸ್ವೀಕಾರ ಮತ್ತು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ವಿದಾಯ ಔತಣಕೂಟ, ಕೇಂದ್ರ ಗೃಹ ಸಚಿವ ಅಮಿತ್ ಶಾ ಆಯೋಜಿಸಿದ್ದ ಸಭೆಯಿಂದಲೂ ನಿತೀಶ್ ದೂರ ಉಳಿದಿದ್ದರು. ಬಿಹಾರ ಬಿಜೆಪಿ ಘಟಕ ಮತ್ತು ಮುಖ್ಯಮಂತ್ರಿ ನಡುವಿನ ಹೆಚ್ಚಿದ ಭಿನ್ನಮತವೇ ಈ ಬೆಳವಣಿಗೆಗೆ ಕಾರಣ ಎಂದು ಹೇಳಲಾಗುತ್ತಿದೆ.