Advertisement

ಆಶಯಗಳಿಗೆ ಧಕ್ಕೆ ಬಾರದಿರಲಿ ಸಂವಿಧಾನ ಧರ್ಮವಾಗಲಿ

01:13 AM Nov 26, 2019 | sudhir |

ಇಡೀ ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಮತ್ತು ದೊಡ್ಡ ಸಂವಿಧಾನವೆಂದೇ ಕರೆಸಿಕೊಂಡಿರುವ ಭಾರತದ ಸಂವಿಧಾನವನ್ನು 1949ರ ನವೆಂಬರ್‌ 26 ರಂದು ಒಪ್ಪಿಕೊಳ್ಳಲಾಯಿತು. ಪ್ರಪಂಚದ ಯಾವುದೇ ದೇಶದ ಸಂವಿಧಾನವನ್ನು ಗಮನಿಸಿದರೂ, ಇಷ್ಟು ವೈವಿಧ್ಯಮಯ, ವಿವೇಕಯುತ ಸಂವಿಧಾನ ಕಂಡುಬರುವುದಿಲ್ಲ. ದೇಶದ ಪ್ರತಿಯೊಬ್ಬನಿಗೂ ಮೂಲಭೂತ ಹಕ್ಕುಗಳಾಗಿ ಸ್ವಾತಂತ್ರ್ಯ, ಸಮಾನತೆ, ಶೋಷಣೆ ವಿರುದ್ಧದ ಹಕ್ಕು, ಧಾರ್ಮಿಕ ಸ್ವಾತಂತ್ರ್ಯ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಮತ್ತು ಸಾಂವಿಧಾನಿಕ ಪರಿಹಾರದ ಹಕ್ಕುಗಳನ್ನು ನೀಡಲಾಗಿದೆ. ಇಲ್ಲಿ ಯಾರೊಬ್ಬರೂ ಕೀಳಲ್ಲ, ಮೇಲೂ ಅಲ್ಲ ಎಂಬುದನ್ನೂ ಸಂವಿಧಾನದ ಪೀಠಿಕೆಯಲ್ಲೇ ವಿಷದಪಡಿಸಲಾಗಿದೆ.

Advertisement

ಭಾರತದ ಪಾಲಿಗೆ ಸಂವಿಧಾನವೇ ಧರ್ಮ, ಸಂವಿಧಾನ ಪುಸ್ತಕವೇ ಧರ್ಮಗ್ರಂಥ. ಪೀಠಿಕೆಯಲ್ಲೇ ಸಂವಿಧಾನದ ಆಶಯಗಳಾದ ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಪ್ರಭುತ್ವ ಮತ್ತು ಗಣತಂತ್ರ ಅಂಶಗಳ ಬಗ್ಗೆ ವಿವರಣೆ ನೀಡಲಾಗಿದ್ದು, ಪ್ರತಿಯೊಬ್ಬರ ಹಕ್ಕು, ಸ್ವಾತಂತ್ರ್ಯ, ಚಿಂತನೆಗಳಿಗೆ ಗೌರವ ನೀಡಲಾಗಿದೆ. ಇಂದಿಗೂ ಸಂವಿಧಾನದ ಉದಾತ್ತ ಅಂಶಗಳು, ಜನರ ಆಶಯಗಳು, ಆತನ ಪ್ರಗತಿ, ಏಳ್ಗೆ ಮತ್ತು ಆತನ ಸ್ವತಂತ್ರ ಚಿಂತನೆಗಳ ಬೆನ್ನೆಲುಗಾಗಿ ನಿಂತಿವೆ. ಇಂಥ ಈ ಸಂವಿಧಾನಕ್ಕೆ ಗೌರವ ಕೊಡುವ ದೃಷ್ಟಿಯಿಂದಲೇ 2015ರಿಂದ ನವೆಂಬರ್‌ 26 ರಂದು ಸಂವಿಧಾನ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ಸಂವಿಧಾನದ ಕರಡುಪ್ರತಿಯನ್ನು ಒಪ್ಪಿಕೊಳ್ಳುವುದು 1949ರ ನವೆಂಬರ್‌ 26ರಂದು. ಅಂದರೆ, ಸರಿಯಾಗಿ ಭಾರತ ಅಧಿಕೃತವಾಗಿ ಸಂವಿಧಾನವನ್ನು ಒಪ್ಪಿಕೊಳ್ಳುವ ಎರಡು ತಿಂಗಳು ಮುಂಚಿನ ದಿನ. 1950ರ ಜನವರಿ 26ರಂದು ಭಾರತ ಸಂವಿಧಾನವನ್ನು ಅಳವಡಿಸಿಕೊಂಡಿತು. ಮೊದಲಿಗೆ ಹಿಂದಿಯನ್ನು ಸಿದ್ಧಗೊಂಡಿದ್ದ ಈ ಸಂವಿಧಾನವನ್ನು ಎರಡು ತಿಂಗಳ ಕಾಲ ಆಂಗ್ಲ ಭಾಷೆಗೆ ಅನುವಾದಿಸಿದ ನಂತರ ಅದನ್ನು ಅಳವಡಿಸಿಕೊಳ್ಳಲಾಯಿತು.

1949ರ ನವೆಂಬರ್‌ 25ರಂದು, ಅಂದರೆ ಸಂವಿಧಾನವನ್ನು ಒಪ್ಪಿಕೊಳ್ಳುವ ಹಿಂದಿನ ದಿನವಷ್ಟೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಸಂವಿಧಾನದ ಕುರಿತಂತೆ ಒಂದು ಭಾಷಣ ಮಾಡುತ್ತಾರೆ. ಭವಿಷ್ಯತ್ಕಾಲಕ್ಕಾಗಿ ಕೆಲವೊಂದು ಎಚ್ಚರಿಕೆಗಳನ್ನೂ ನೀಡುತ್ತಾ, ರಾಜಕಾರಣದಲ್ಲಿ ಭಕ್ತಿ ಎಂಬುದು ಇರಲೇಕೂಡದು ಎಂದೂ ಹೇಳುತ್ತಾರೆ. ಅಂದರೆ, ಧಾರ್ಮಿಕತೆಯಲ್ಲಿ ಭಕ್ತಿ ಎಂಬುದು ಮೋಕ್ಷದ ಹಾದಿಯಾಗುತ್ತದೆ. ಆದರೆ, ರಾಜಕಾರಣದಲ್ಲಿ ಭಕ್ತಿ ಅಥವಾ ಹೀರೋಯಿಸಂ ಎಂಬುದು ಅವನತಿಗೆ ಮತ್ತು ಸರ್ವಾಧಿಕಾರಕ್ಕೆ ದಾರಿಯಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡುತ್ತಾರೆ. ಅಂತೆಯೇ, ಅಸಮಾನತೆ ಬಗ್ಗೆ ಹೇಳುವ ಅವರು, ಮುಂದೆಯೂ ಅಸಮಾನತೆಯನ್ನು ಪಾಲಿಸಿಕೊಂಡು ಹೋದರೆ, ರಾಜಕೀಯ ಪ್ರಜಾಪ್ರಭುತ್ವ ಅಳಿವಿನಂಚಿಗೆ ತಲುಪುತ್ತದೆ ಎಂದು ಹೇಳುತ್ತಾರೆ.

ಎಷ್ಟೇ ಸರ್ಕಾರಗಳು ಬರಲಿ, ಏನೇ ಆಗಲಿ, ಇಂದಿಗೂ ಭಾರತದ ಸಂವಿಧಾನವನ್ನು ಮುಟ್ಟಲು, ಅದರ ಆಶಯಗಳನ್ನು ತಿದ್ದುಪಡಿ ಮಾಡಲು ಸಾಧ್ಯವಾಗಿಲ್ಲ. ನಮ್ಮ ಸಂವಿಧಾನದ ಶಕ್ತಿಯೇ ಅಂಥದ್ದು. ವಿಶೇಷವೆಂದರೆ, ಸಂವಿಧಾನದ ಮೊದಲ ತಿದ್ದುಪಡಿಯೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಕಲ್ಯಾಣಕ್ಕಾಗಿ ಮಾಡಿದ್ದು. ಇದನ್ನು 1951ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಸರ್ಕಾರಗಳಿಗೆ ಎಸ್‌ಸಿ/ಎಸ್ಟಿ ಸಮುದಾಯದವರ ಕಲ್ಯಾಣಕ್ಕಾಗಿ ಯಾವುದೇ ದೃಢವಾದ ಕ್ರಮ ತೆಗೆದುಕೊಳ್ಳಲು ಅವಕಾಶ ನೀಡುತ್ತದೆ. ಇದಕ್ಕೆ ಪೂರಕವಾಗಿ ಇತ್ತೀಚೆಗಷ್ಟೇ ಸಂವಿಧಾನಕ್ಕೆ 103ನೇ ತಿದ್ದುಪಡಿ ತರಲಾಗಿದ್ದು, ಇದರಲ್ಲಿ ಸಮಾಜದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿ ನೀಡುವುದನ್ನು ಸೇರಿಸಲಾಗಿದೆ. ಹೀಗಾಗಿ ಮೊದಲ ಮತ್ತು ಇತ್ತೀಚಿನ ತಿದ್ದುಪಡಿಗಳೆರಡೂ ಮೀಸಲಾತಿಗೆ ಸಂಬಂಧಿಸಿದವುಗಳೇ ಆಗಿವೆ ಎಂಬುದು ವಿಶೇಷ.

Advertisement

ದೇಶದ ಪ್ರತಿಯೊಬ್ಬರಿಗೆ ತನ್ನದೇ ಆದ ಸ್ವಾತಂತ್ರ್ಯ, ಸಮಾನತೆ ಸೇರಿದಂತೆ ಎಲ್ಲಾ ರೀತಿಯ ಹಕ್ಕು ನೀಡಿರುವ ಸಂವಿಧಾನವನ್ನು ಇದುವರೆಗೂ ಅಧಿಕಾರ ನಡೆಸಿದವರು ಮತ್ತು ಅದನ್ನು ಪಾಲಿಸುತ್ತಿದ್ದವರು ಕಾಪಾಡಿಕೊಂಡು ಬಂದಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಆರಂಭದಲ್ಲಿ ದೇಶ ಇನ್ನೂ ಶೈಕ್ಷಣಿಕವಾಗಿ ಹಿಂದುಳಿದ ವೇಳೆಯಲ್ಲೂ ಅಥವಾ ಈ ಪರಿಯ ಆಧುನಿಕ ಮತ್ತು ತಾಂತ್ರಿಕ ಯುಗ ಬಾರದೇ ಇರುವ ಹೊತ್ತಿನಲ್ಲೂ ಸಂವಿಧಾನದ ಆಶಯಗಳು ಹಾಗೆಯೇ ಉಳಿದಿವೆ. ಈಗಂತೂ, ಜನ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಇನ್ನೂ ಬುದ್ಧಿವಂತರಾಗುತ್ತಿದ್ದಾರೆ. ಜತೆಗೆ, ಇನ್ನೂ ಹೆಚ್ಚಿನ ವಿವೇಕವಂತರಾಗುತ್ತಿದ್ದಾರೆ. ಇಂಥ ಕಾಲದಲ್ಲಿ ಸಂವಿಧಾನವನ್ನು ಉಳಿಸಿ, ಅದರ ಆಶಯಗಳಿಗೆ ಧಕ್ಕೆ ಬಾರದೇ ಇರುವ ರೀತಿಯಲ್ಲಿ ಪೋಷಿಸಿಕೊಂಡು ಹೋಗಬೇಕಾದುದು ಎಲ್ಲರ ಕರ್ತವ್ಯ.

Advertisement

Udayavani is now on Telegram. Click here to join our channel and stay updated with the latest news.

Next