ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘವು ಈ ಹಿಂದೆ ನಿರ್ಮಾಪಕರಿಗೆ ಜೀವವಿಮೆ ಮಾಡಿಸಿಕೊಟ್ಟಿದ್ದಷ್ಟೇ ಅಲ್ಲ, ಪ್ರತಿ ವರ್ಷ ಅದನ್ನು ಮುಂದುವರೆಸಿಕೊಂಡು ಬಂದಿದೆ. ಈಗ ಇನ್ನೊಂದು ಹೆಜ್ಜೆ ಮುಂದಿಟ್ಟಿರುವ ನಿರ್ಮಾಪಕರ ಸಂಘವು, ಗ್ಲೋಬಲ್ ಇನ್ಶೂರೆನ್ಸ್ ಎಂಬ ಸಂಸ್ಥೆಯನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿಕೊಟ್ಟಿದೆ.
ಈ ಸಂಸ್ಥೆಯು ಈಗಾಗಲೇ ಬಾಲಿವುಡ್‌ನಲ್ಲಿ ಹಲವು ಚಿತ್ರಗಳಿಗೆ ಮತ್ತು ಹಲವು ಪ್ರತಿಷ್ಠಿತ ಸಂಸ್ಥೆಗಳಿಗೆ ಇನ್ಶೂರೆನ್ಸ್ ಮಾಡಿಸಿಕೊಟ್ಟಿದೆ. ಈಗ ಕನ್ನಡ ಚಿತ್ರರಂಗಕ್ಕೂ ಗ್ಲೋಬಲ್ ಇನ್ಶೂರೆನ್ಸ್ ಕಾಲಿಡುವುದಕ್ಕೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಒಂದು ಸಮಾರಂಭ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ಗ್ಲೋಬಲ್ ಸಂಸ್ಥೆಯನ್ನು ನಿರ್ಮಾಪಕರ ಸಂಘವು ಕನ್ನಡ ನಿರ್ಮಾಪಕರಿಗೆ ಪರಿಚಯಿಸಿಕೊಟ್ಟಿತು.
ಈ ಸಮಾರಂಭದಲ್ಲಿ ಗ್ಲೋಬಲ್ ಸಂಸ್ಥೆಯ ಮುಖ್ಯಸ್ಥರ ಜೊತೆಗೆ, ಶಿವರಾಜಕುಮಾರ್, ಯಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು, ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ, ಕಾರ್ಯದರ್ಶಿ ಸೂರಪ್ಪ ಬಾಬು ಮುಂತಾದವರು ಇದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಮುನಿರತ್ನ, “ಚಿತ್ರ ನಿರ್ಮಾಣದ ಹಂತದಲ್ಲಿ ಸಾಕಷ್ಟು ಅವಘಡಗಳಾಗುತ್ತವೆ.
ಇತ್ತೀಚೆಗೆ “ಮಾಸ್ತಿಗುಡಿ’ ಚಿತ್ರೀಕರಣ ಸಂದರ್ಭದಲ್ಲಿ ಇಬ್ಬರು ತಮ್ಮ ಪ್ರಾಣವನ್ನು ಕಳೆದುಕೊಂಡರು. ಅಂತಹ ಘಟನೆಗಳು ಎಲ್ಲೂ ನಡೆಯಬಾರದು. ಇಂತಹ ದುರ್ಘಟನೆಗಳನ್ನು ತಡೆಯುವುದಕ್ಕೆ ವಿಮೆ ಅಗತ್ಯವಾಗುತ್ತದೆ. ಹಾಗಾಗಿ ಪ್ರತಿ ಚಿತ್ರಕ್ಕೂ ಅದರ ಅವಶ್ಯಕತೆಗೆ ತಕ್ಕಂತೆ ವಿಮೆ ಮಾಡಿಸಿದರೆ ಅನುಕೂಲ. ಇನ್ಶೂರೆನ್ಸ್ ಉಪಯೋಗಕ್ಕೆ ಬರಲೂಬಹುದು, ಬರದಿರಲೂಬಹುದು. ಹಾಗಂತ ಇನ್ಶೂರೆನ್ಸ್ ಮಾಡಿಸಿದ್ದೀವಿ ಅಂತ ಬೇಜವಾಬ್ದಾರಿತನ ಬೇಡ’ ಎಂದು ಹೇಳಿದರು. ಹಾಗೆಯೇ, ವಿಮೆ ಮಾಡಿಸಿದ ನಿರ್ಮಾಪಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದಕ್ಕೆ ಇನ್ಶೂರೆನ್ಸ್ ಸಂಸ್ಥೆಯವರಿಗೆ ಹೇಳಿದರು.
ಇನ್ನು ಶಿವರಾಜಕುಮಾರ್, ನಿರ್ಮಾಪಕರಿಗೆ ಇನ್ಶೂರೆನ್ಸ್‌ಗಾಗಿ ಸಿನಿಮಾ ಮಾಡಬೇಡಿ ಎಂದು ಕಿವಿಮಾತು ಹೇಳಿದರು. “ಇನ್ಶೂರೆನ್ಸಡ್ ಮಾಡಿಸಿದರೆ ಭದ್ರತೆ ಇರುತ್ತದೆ. ಹಾಗಂತ ಏನೇನೋ ಮಾಡಬಾರದು. ಹೀರೋಗಳಿಗೆ ಅದು ಮಾಡಿ, ಇದು ಮಾಡಿ ಅಂತ ಎಲ್ಲಾ ಹೇಳಬಹುದು. ಯಾರೋ ಹೇಳಿದರು ಅಂತ ಮಾಡೋದಲ್ಲ. ಜೀವನ ಮುಖ್ಯ. ಇನ್ನು ಈ ತರಹದ್ದೊಂದು ಸೌಲಭ್ಯ ಸಿಗುತ್ತಿರುವುದು ಬೆಂಬಲಕ್ಕಾಗಿ. ಇನ್ಶೂರೆನ್ಸ್‌ಗಾಗಿ ಸಿನಿಮಾ ಮಾಡಬೇಡಿ. ಅದನ್ನು ಒಳ್ಳೆಯದಕ್ಕೆ ಬಳಸಿಕೊಳ್ಳಿ’ ಎಂದು ಶಿವರಾಜಕುಮಾರ್ ಕಿವಿಮಾತು ಹೇಳಿದರು.
ಒಂದು ಚಿತ್ರಕ್ಕೆ ಆಗುವ ವೇಸ್ಟೇಜ್ ಉಳಿಸಿದರೆ, ಅದೇ ದೊಡ್ಡ ಇನ್ಶೂರೆನ್ಸ್ ಎನ್ನುತ್ತಾರೆ ಯಶ್. “ಈ ತರಹ ಸೌಲಭ್ಯ ಸಿಗುತ್ತದೆ ಎನ್ನುವುದು ಸಂತೋಷ. ಆದರೆ, ಅದನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ ಎನ್ನುವುದು ಮುಖ್ಯ. ಎಷ್ಟೋ ಬಾರಿ, ಒಂದು ಚಿತ್ರ ಮಾಡುವಾಗ ದುಂದುವೆಚ್ಚದಲ್ಲೇ ಸಾಕಷ್ಟು ಹಣ ಹೋಗುತ್ತದೆ. ಅದನ್ನೆಲ್ಲಾ ಕಡಿಮೆ ಮಾಡಿದರೆ, ಅದೇ ದೊಡ್ಡ ಇನ್ಶೂರೆನ್ಸ್ ಆಗುತ್ತದೆ. ನಾವು “ಕೆಜಿಎಫ್’ ಚಿತ್ರಕ್ಕೆ ಈಗಾಗಲೇ ಇನ್ಶೂರೆನ್ಸ್ ಮಾಡಿಸಿದ್ದು, ಜ್ಯೂನಿಯರ್ ಕಲಾವಿದರನ್ನೂ ಸೇರಿಸಿ ಎಲ್ಲರಿಗೂ ಮಾಡಿಸಿದ್ದೇವೆ’ ಎಂದರು.