ಯಾದಗಿರಿ: ಚುನಾವಣೆ ಸಂದರ್ಭದಲ್ಲಿ ಬಣ್ಣ ಬಣ್ಣದ ಮಾತುಗಳನ್ನಾಡಿ ಸಮಾಜದ ಜಾತಿಗಳಲಿ ಒಡಕು ಹುಟ್ಟಿಸುವವರನ್ನು ನಂಬಿ ಮೋಸ ಹೋಗಬೇಡಿ ಎಂದು ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಸ್ಥಳೀಯ ಸಂಸ್ಥೆ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ಚುನಾವಣೆ ಯಾದಗಿರಿ ಜನರಿಗೆ ಪ್ರಮುಖವಾಗಿದೆ. ಈ ಭಾಗದಲ್ಲಿ ನಮ್ಮ ಪಕ್ಷ ಸಾಕಷ್ಟು ಕೆಲಸ ಮಾಡಿದ್ದರೂ ಬೇರೆಯವರ ಮಾತು ಕೇಳಿ ದುಡ್ಡು, ಮೋದಿ ಹೆಸರು ಹಾಗೂ ಯಡಿಯೂರಪ್ಪ ಅಳಿಯ ಶಾಸಕನಾಗಬೇಕು ಎಂದು ಜನರು ರಾಜ್ಯದಲ್ಲಿ, ಯಾದಗಿರಿಯಲ್ಲಿ ಮಾಲಕರಡ್ಡಿ ಹಾಗೂ ಗುರುಮಠಕಲ್ ಬಾಬುರಾವ ಚಿಂಚನಸೂರಗೆ ಮೋಸ ಮಾಡಿದರು ಎಂದು ವಿಧಾನಸಭೆ ಚುನಾವಣೆಯಲ್ಲಾದ ಸೋಲನ್ನು ನೆನೆಸಿದರು.
ಬಸವಣ್ಣರ ತತ್ವದಂತೆ ನುಡುದಂತೆ ನಡೆದರೆ ಒಳ್ಳೆಯದು. ದೇಶದಲ್ಲಿ ಅವಾಂತರ, ಮೋಸ ಹಾಗೂ ಸಮಾಜಗಳಲ್ಲಿ ಒಡಕು ಹುಟ್ಟಿಸುವುದನ್ನು ದೇಶ ಮತ್ತು ರಾಜ್ಯದ ಜನರು ಸಹಿಸಲ್ಲ ತಿರುಗಿಬೀಳುತ್ತಾರೆ ಎಂದು ಹೇಳಿದರು. ಸಂವಿಧಾನವನ್ನು ಹೊಳಗುವ ಬಿಜೆಪಿ ಸಂವಿಧಾನದ ತತ್ವಗಳಡಿ ಏಕೆ ನಡೆಯಲ್ಲ? ಜನರಿಗೆ ಮೋಸ ಮಾಡುವುದೇ ಮನ್ ಕೀ ಬಾತ್ ಎಂದು ಟಾಂಗ್ ನೀಡಿದರು.
ವಿದೇಶದಲ್ಲಿನ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆ 15 ಲಕ್ಷ ರೂ. ಹಾಕುತ್ತೇವೆ ಎಂದು ಹೇಳಿದ್ದರು. ಅದು ಎಲ್ಲಿದೆ? ದೇಶದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಹೇಳಿದ್ದರು. ಈವರೆಗೆ ಒಂದೂವರೆ ಲಕ್ಷ ಉದ್ಯೋಗ ನೀಡಿಲ್ಲ. ಬದಲಿಗೆ ನೀರವ್, ಮಲ್ಯ, ಲಲಿತ್‌ಗೆ ಬ್ಯಾಂಕ್‌ಗಳಲ್ಲಿನ 1.68 ಸಾವಿರ ಕೋಟಿ ರೂ. ಲೂಟಿ ಮಾಡಲು ಮೋದಿ ಸರ್ಕಾರ ನೌಕರಿ ನೀಡಿದೆ ಎಂದು ಟಿಕೀಸಿದರು. ಮೋದಿ ಮತ್ತು ಶಾ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದ ಅವರು, ನಮ್ಮ ಹೋರಾಟ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಸುವುದಕ್ಕೆ ಹೊರತು ವೈಯಕ್ತಿಕವಲ್ಲ ಎಂದು ಹೇಳಿದರು.
ರಾಯಚೂರು-ಯಾದಗಿರಿ ಸಂಸದ ಬಿ.ವಿ. ನಾಯಕ ಮಾತನಾಡಿ, ರಾಜ್ಯದಲ್ಲಿ ಮತೀಯ ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರಬಾರದು ಎಂದು ಜೆಡಿಎಸ್ ಜತೆ ಸೇರಿ ಸರ್ಕಾರ ರಚಿಸಿದೆವು. ಕಳೆದ ಚುನಾವಣೆಯಲ್ಲಿ ಮರಳು ಮಾಡಿ ಬಣ್ಣದ ಮಾತಿನಿಂದ ಮೋದಿ ಅಧಿಕಾರ ಪಡೆದು ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ಬುಡಮೇಲು ಮಾಡಿದ್ದಾರೆ ಎಂದು ಟೀಕಿಸಿದರು.
ಹಿಂದುಳಿದ ಭಾಗದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಕಲಂ 371(ಜೆ) ಜಾರಿಗೊಳಿಸಿದೆ. ಇನ್ನಷ್ಟು ಪಕ್ಷವನ್ನು ಬಲ ಪಡಿಸಿ ಬಡವರು, ದೀನ ದಲಿತರ ಸೇವೆ ಮಾಡಲು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಸಬೇಕು ಎಂದು ಮನವಿ ಮಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಚನ್ನಾರೆಡ್ಡಿ ತುನ್ನೂರ, ಮರಿಗೌಡ ಹುಲಕಲ್, ಭೀಮಣ್ಣಗೌಡ ಸಂಕನೂರ, ಜಗದೇವ ಗುತ್ತೇದಾರ, ಮಂಜುಳಾ ಗೂಳಿ, ರಾಘವೇಂದ್ರ ಮಾನಸಗಲ್, ಸಿದ್ದಲಿಂಗರೆಡ್ಡಿ ಉಳ್ಳೇಸೂಗೂರ, ಸುದರ್ಶನ ನಾಯಕ, ಸುರೇಶ ಜೈನ್, ವಿಶ್ವನಾಥ ನೀಲಹಳ್ಳಿ, ಮರೆಪ್ಪ ಬಿಳಾರ ಇದ್ದರು.