ಇಂದು ದಾರಿ ಬದಲಾಯಿಸಿದ್ದೇನೆ. ನಿಧಾನವಾಗಿ ಸಾವರಿಸಿಕೊಳ್ಳುತ್ತಿದ್ದೇನೆ. ನಿನ್ನ ಮೋಸದ ಹೆಜ್ಜೆ ಮರೆಯುತ್ತಿದ್ದೇನೆ. ಕಿಬ್ಬೊಡಲಲ್ಲಿ ಹೆಪ್ಪುಗಟ್ಟಿದ ನೋವು ಕರಗುತ್ತಿದೆ. ನೀನು ನನ್ನ ಬಾಳಲ್ಲಿ ಬರಲೇ ಇಲ್ಲವೆಂಬಂತೆ ಬದುಕುತ್ತೇನೆ.
ದೇವರು ಕೂಡ ನಿದ್ದೆ ಹೋಗಿ, ಜಗತ್ತಿನಲ್ಲೊಂದು ಹಿತವಾದ ನಿಶ್ಶಬ್ದ. ಮುಸುಕೆಳದು ಕಣ್ಣ ಮುಚ್ಚಿದರೂ ನಿದ್ದೆ ಹತ್ತುತ್ತಿಲ್ಲ. ಟೆರೇಸ್ ಹತ್ತಿ, ಮೇಲಕ್ಕೆ ನೋಟ ನೆಟ್ಟರೆ ನಿಶೆಯ ಕಪ್ಪು ಸೆರಗು ಚಂದ್ರನನ್ನು ನುಂಗಿ ಹಾಕಿದೆ. ಒಂಟಿಯಾಗಿ ನಕ್ಷತ್ರ ಎಣಿಸುತ್ತ ಕುಳಿತರೆ, ಯಾವುದೋ ಎರಡು ನಕ್ಷತ್ರ ಮೋಡದೊಳಗೆ ಮರೆಯಾಗಿ, ಅಲ್ಲಿಯೂ ನಿನ್ನದೇ ನೆನಪು.
ದಿನವೂ ನೀನು, ತುಂಬಿದ ಬಸ್ಸನ್ನು ಹತ್ತಿ ಅತ್ತಿತ್ತ ಹುಡುಕುತ್ತಿದ್ದೆ. ನಿನ್ನ ಕಣ್ಣುಗಳು ಹುಡುಕಾಟ ನಡೆಸುವುದು ನನಗಾಗಿಯೇ ಎಂದು ಗೊತ್ತಿದ್ದರೂ ನಿನ್ನೆಡೆಗೆ ನಾನು ತಿರುಗಿಯೂ ನೋಡುತ್ತಿರಲಿಲ್ಲ. ನಿನ್ನ ಆ ನೋಟ ಇಂದು, ನಿನ್ನೆಯದಾಗಿರಲಿಲ್ಲ. ಮೂರು ವರ್ಷಗಳ ಹಿಂದೆಯೇ ನಿನ್ನ ಕಣ್ಣಿನಾಳದಲ್ಲಿದ್ದ ಪ್ರೀತಿಯನ್ನು ನಾನು ಗುರುತಿಸಿದ್ದೆ. ಆದರೆ ನೀನು ಎದೆಯೊಳಗಿನ ಪ್ರೀತಿಯನ್ನು ನನ್ನೆದುರು ಹೇಳಿಕೊಂಡಿದ್ದು ವರ್ಷಗಳ ಹಿಂದಷ್ಟೇ. ನಾನು ಸೋತು, ಶರಣಾಗಿ ನಿನ್ನ ಪ್ರೀತಿಯನ್ನು ಒಪ್ಪಿಕೊಳ್ಳಲು ಕಾರಣ ನಿನ್ನ ತಣ್ಣನೆಯ ಕಣ್ಣುಗಳು. ನಿನ್ನ ಈ ಕಣ್ಣಿನೊಳಗೆ ನಾನು ಜೀವಿಸಬೇಕೆಂದು ನನಗೆ ನಾನೇ ಮಾತು ಕೊಟ್ಟಿ¨ªೆ. ಆ ಕಣ್ಣುಗಳಲ್ಲಿ ಸ್ನೇಹವೋ, ಪ್ರೀತಿಯೋ, ಅನುರಾಗವೋ ಏನೋ ಒಂದಿತ್ತು. ಈ ಅಪರಿಚಿತ ಭಾವವೊಂದನ್ನು ಬಿಟ್ಟು.
ಆದರೆ ಇಂದು ಆ ತಣ್ಣನೆಯ ಕಣ್ಣುಗಳನ್ನು ಕಂಡರೇ ಮೈ ನಡುಗುತ್ತದೆ. ಉಸಿರಾಟ ಏರಿಳಿತವನ್ನು ಮರೆತು ಸ್ತಬ್ಧವಾಗುತ್ತದೆ. ಬೆನ್ನ ಸಂದಿಯಲ್ಲಿ ಹಾವು ಸರಿದಾಡಿದಂತಾಗುತ್ತದೆ. ಕಾರಣ, ಆ ನಿನ್ನ ಕಣ್ಣುಗಳೇ ನನ್ನ ವ್ಯಕ್ತಿತ್ವವನ್ನು ಅನುಮಾನಿಸಿದ್ದು. ಬೆಳದಿಂಗಳ ಸಂಜೆಯಲ್ಲಿಯೇ ನೀನು, ಮತ್ತೆಂದೂ ನನ್ನ ಮುಖ ನೋಡುವುದಿಲ್ಲ ಎಂದು ತಳ್ಳಿ ಹೋಗಿದ್ದು.. ಆಗಲೇ ನಾನು ಆ ತಣ್ಣನೆಯ ಕಣ್ಣುಗಳಲ್ಲಿ ವಿಷ ಜಂತುವನ್ನು ಕಂಡಿದ್ದು. ಅಂದು ನಿನ್ನ ತೊರೆಯುವಿಕೆ ಸಹಿಸಲಾಗದೇ ಬಿಕ್ಕಳಿಸುತ್ತಾ ಕುಸಿದಿದ್ದೆ. ನೀನು ಒಮ್ಮೆಯೂ ತಿರುಗಿ ನೋಡದೆ ದಾಪುಗಾಲಿಟ್ಟು ದೂರ ಹೋದೆ. ಮೇಲಿದ್ದ ಬೆಳದಿಂಗಳ ಚಂದಿರನೂ ಅಣಕಿಸಿ ಮರೆಯಾದ. ಇವತ್ತಿಗೂ ಬೆಳದಿಂಗಳೆಂದರೆ ಭಯ ಬೀಳುತ್ತೇನೆ. ಅಮವಾಸ್ಯೆಯಲ್ಲೂ ಚಂದಿರನನ್ನು ಕಾಣಲು ಹಾತೊರೆಯುತ್ತೇನೆ.
ಇಬ್ಬರೂ ಜತೆಯಾಗಿದ್ದಾಗ ಮನಸಿನ ಪೂರ್ತಿ ಪ್ರೀತಿ, ಸುಖದ ತೇರು ತುಂಬಿತ್ತು. ಅಲ್ಲಿ ಬರೀ ಸಂಭ್ರಮ. ಎದೆಯ ತುಂಬಾ ಪುಳಕದ ಸಂತೆ. ಕಣ್ಣ ತುಂಬಾ ಕದಡುವ ಕನಸು. ನಾನು ಸೀರೆ ಉಟ್ಟರೆ, ನೀನು ನೆರಿಗೆ ಹಿಡಿಯಬೇಕೆಂಬ ಹೊಂದಾಣಿಕೆಯ ಸೂತ್ರ. ದೂರದೂರಿನಲ್ಲಿ ಇಬ್ಬರೇ ಬದುಕಬೇಕೆಂಬ ಏಕಾಂತದ ಬಯಕೆ. ಹನಿ ಮಳೆಯಲ್ಲಿ ಬೆಚ್ಚಗಿನ ಅಪ್ಪುಗೆ. ತಣ್ಣನೆಯ ಕಣ್ಣುಗಳಿಗೆ ದಿನವೂ ಬೆಚ್ಚಗಿನ ಮುತ್ತುಗಳು. ನೂರಾರು ಒಲವಿನ ಪತ್ರಗಳು. ಇಂಥ ಭಾವವಾಗಿದ್ದ, ಭಕ್ತಿಯಾಗಿದ್ದ, ಜೀವವಾಗಿದ್ದ ಪ್ರೀತಿಗೆ ಕೊಳಚೆಯೆಂದು ಹೆಸರಿಟ್ಟು ಹೋದೆಯಲ್ಲಾ!
ಎಷ್ಟೊಂದು ದಿನ ನಿನಗಾಗಿ ಕನವರಿಸಿದೆ ಗೊತ್ತಾ? ಆದರೆ, ನಿರಾಸೆಯ ಹೊರತು ಮತ್ತೇನೂ ಸಿಗಲಿಲ್ಲ. ಕಗ್ಗತ್ತಲ ರಾತ್ರಿಯಲ್ಲಿ ಸಮಯದ ಪರಿವಿಲ್ಲದೇ ಒಬ್ಬಳೇ ಕುಳಿತು ಬಿಕ್ಕಿ ಬಿಕ್ಕಿ ಅತ್ತಿದ್ದೇನೆ. ಎದೆಯ ನೋವೆಲ್ಲ ಹರಿದುಬಂದಿತ್ತು. ಸಂತೈಸುವ ನಿನ್ನ ಕೈಗಳು ಕೊಂಡಿ ಕಳಚಿಕೊಂಡು ಹೋಗಿತ್ತು. ನೀನಿರದ ಬದುಕಿಗೆ ಅರ್ಥವೇ ಇರಲಿಲ್ಲ. ಈ ಏಕಮುಖ ಬದುಕನ್ನು ಎಷ್ಟೇ ಭಾಗಿಸಿ, ಗುಣಿಸಿ, ಕೂಡಿಸಿ, ಕಳೆದರೂ ಉಳಿದಿದ್ದು ಶೇಷ ಮಾತ್ರ. ಕಳೆದು ಹೋಗಿದ್ದು ನಾನು ಮಾತ್ರವಲ್ಲ ಒಂದು ಭಾವನಾತ್ಮಕ ಲೋಕವೇ ಸತ್ತು ಹೋಯ್ತು. ಈಗ ಬದುಕಿಗೆ ಬಣ್ಣಗಳಿಲ್ಲ. ನಿನ್ನ ಬಣ್ಣ ಬಣ್ಣದ ಮಾತುಗಳ ನೆನಪು ಮಾತ್ರ.
ನೀನು ಜೊತೆಗಿರದಿದ್ದರೂ ನಿನ್ನ ನೆನಪಿನ ನೆರಳಿನೊಂದಿಗೆ ಬದುಕಲು ನಿರ್ಧರಿಸಿದ್ದೆ. ಆದರೆ, ಇಂದು ದಾರಿ ಬದಲಾಯಿಸಿದ್ದೇನೆ. ನಿಧಾನವಾಗಿ ಸಾವರಿಸಿಕೊಳ್ಳುತ್ತಿದ್ದೇನೆ. ನಿನ್ನ ಮೋಸದ ಹೆಜ್ಜೆ ಮರೆಯುತ್ತಿದ್ದೇನೆ. ಕಿಬ್ಬೊಡಲಲ್ಲಿ ಹೆಪ್ಪುಗಟ್ಟಿದ ನೋವು ಕರಗುತ್ತಿದೆ. ನೀನು ನನ್ನ ಬಾಳಲ್ಲಿ ಬರಲೇ ಇಲ್ಲವೆಂಬಂತೆ ಬದುಕುತ್ತೇನೆ. ಆದರೆ, ಕೊನೆಯಲ್ಲಿ ಒಂದು ಮಾತು; ಇನ್ನೆಂದೂ ನನ್ನಂಥ ಹುಡುಗಿಯರನ್ನು ಪ್ರೀತಿ ಎಂಬ ಮೋಸದ ಜಾಲದಲ್ಲಿ ಕೆಡವಿ ಉಸಿರುಗಟ್ಟಿಸಬೇಡ. ಕಣ್ಣಲ್ಲಿ ನೀರಪೊರೆಯ ನಾವೆ ತೇಲುತಿದೆ. ಸಾಕಿನ್ನು, ಈ ಪತ್ರಕ್ಕೆ ದುಂಡನೆಯ ಚುಕ್ಕಿ ಇಡುತ್ತೇನೆ.
ಇಂತಿ,
ಮುಗಿದ ಮಾತುಗಳ ನಂತರ ನಿಟ್ಟುಸಿರಾದವಳು
-ಕಾವ್ಯಾ ಜಕ್ಕೊಳ್ಳಿ