“ಅದ್ಧೂರಿ’, “ಬಹದ್ದೂರ್’ ಈಗ “ಭರ್ಜರಿ’. ಇದು ಧ್ರುವ ಸರ್ಜಾ ನಟಿಸಿರುವ ಮೂರು ಸಿನಿಮಾಗಳು. ಮೂರಕ್ಕೆ ಮೂರು ಸಿನಿಮಾಗಳು ಗೆದ್ದಿವೆ. ಮೊನ್ನೆಯಷ್ಟೇ ತೆರೆಕಂಡ “ಭರ್ಜರಿ’ ಚಿತ್ರ ಕೂಡಾ ಹಿಟ್‌ಲಿಸ್ಟ್ ಸೇರಿದೆ. ಮೊದಲ ದಿನವೇ ಆರು ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಧ್ರುವ ಸರ್ಜಾ ಕೂಡಾ ದೊಡ್ಡ ಓಪನಿಂಗ್‌ಗೆ ಸಾಕ್ಷಿಯಾಗಿದ್ದಾರೆ. ಸತತವಾಗಿ ಮೂರು ಸಿನಿಮಾಗಳು ಹಿಟ್ ಆದರೆ, ಆ ಹೀರೋಗೆ “ಹ್ಯಾಟ್ರಿಕ್ ಹೀರೋ’ ಎಂದು ಚಿತ್ರರಂಗದ ಮಂದಿ, ಅಭಿಮಾನಿಗಳು ಕರೆಯುತ್ತಾರೆ.
ಈಗಾಗಲೇ “ಹ್ಯಾಟ್ರಿಕ್ ಹೀರೋ’ ಎಂಬ ಬಿರುದು ಶಿವರಾಜಕುಮಾರ್ ಅವರಿಗೆ ಇದೆ. ಈಗ ಧ್ರುವ ಸರ್ಜಾ ಅವರನ್ನು ಕೂಡಾ ಅಭಿಮಾನಿಗಳು “ಹ್ಯಾಟ್ರಿಕ್ ಹೀರೋ’ ಎಂದು ಕರೆಯಲಾರಂಭಿಸಿದ್ದಾರೆ. ಆದರೆ, ಧ್ರುವ ಸರ್ಜಾ ಮಾತ್ರ ಅಭಿಮಾನಿಗಳಲ್ಲಿ “ನನ್ನನ್ನು ಹ್ಯಾಟ್ರಿಕ್ ಹೀರೋ’ ಎಂದು ಕರೆಯಬೇಡಿ ಎಂದು ಮನವಿ ಮಾಡಿದ್ದಾರೆ. ಹಾಗಂತ ಅಭಿಮಾನಿಗಳು ಬೇಸರವಾಗಬೇಕಿಲ್ಲ. ಧ್ರುವ ಅವರನ್ನು “ಹ್ಯಾಟ್ರಿಕ್ ಆ್ಯಕ್ಷನ್ ಪ್ರಿನ್ಸ್’ ಎಂದು ಕರೆಯಬಹುದು.
ಅಷ್ಟಕ್ಕೂ, ಧ್ರುವ “ಹ್ಯಾಟ್ರಿಕ್ ಹೀರೋ’ ಎಂದು ಕರೆಯಬೇಡಿ ಎನ್ನಲು ಕಾರಣ ಶಿವರಾಜ ಕುಮಾರ್ ಅವರ ಮೇಲಿನ ಅಭಿಮಾನ. ಧ್ರುವ ಸರ್ಜಾ, ಶಿವರಾಜಕುಮಾರ್ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದವರು. ಜೊತೆಗೆ ಅವರ ಅಭಿಮಾನಿ ಕೂಡಾ. ಈಗ ಶಿವರಾಜಕುಮಾರ್ ಅವರ ಬಿರುದನ್ನು ತಾನಿಟ್ಟುಕೊಳ್ಳೋದು ಸರಿಯಲ್ಲ ಎಂಬ ಕಾರಣಕ್ಕೆ “ಹ್ಯಾಟ್ರಿಕ್ ಆ್ಯಕ್ಷನ್ ಪ್ರಿನ್ಸ್’ ಎಂದು ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
“ನಮ್ಮ ಹೀರೋ ಧ್ರುವಗೆ “ಹ್ಯಾಟ್ರಿಕ್ ಹೀರೋ’ ಎಂದು ಕರೆಯೋದು ಇಷ್ಟವಿಲ್ಲ. ಏಕೆಂದರೆ ಅವರು ಕೂಡಾ ಶಿವರಾಜಕುಮಾರ್ ಅವರ ಅಭಿಮಾನಿ. ಹಾಗಾಗಿ, ಹ್ಯಾಟ್ರಿಕ್ ಆ್ಯಕ್ಷನ್ ಪ್ರಿನ್ಸ್ ಎಂದು ಕರೆಯಬಹುದು’ ಎನ್ನುವುದು ನಿರ್ದೇಶಕ ಚೇತನ್ ಮಾತು. ಸದ್ಯ “ಭರ್ಜರಿ’ ಚಿತ್ರ ಗೆದ್ದ ಖುಷಿಯಲ್ಲಿರುವ ಧ್ರುವ ಅವರ ಮುಂದಿನ ಚಿತ್ರ “ಪೊಗರು’. ಈ ಚಿತ್ರವನ್ನು ನಂದಕಿಶೋರ್ ನಿರ್ದೇಶಿಸುತ್ತಿದ್ದಾರೆ. ಚಿತ್ರತಂಡ ಹೇಳುವಂತೆ “ಭರ್ಜರಿ’ ಚಿತ್ರ ಮೂರು ದಿನಕ್ಕೆ 16 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಎಲ್ಲಾ ಕಡೆಗಳಲ್ಲೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು, ವಾರಾಂತ್ಯದಲ್ಲಿ ಚಿತ್ರ 25 ಕೋಟಿ ರೂಪಾಯಿ ಕಲೆಕ್ಟ್ ಮಾಡಲಿದೆ ಎಂಬ ನಿರೀಕ್ಷೆ ಚಿತ್ರತಂಡಕ್ಕಿದೆ. ಸಾಮಾನ್ಯವಾಗಿ ಕನ್ನಡ ಸಿನಿಮಾಗಳು ಪ್ರದರ್ಶನವಾಗದ ಊರ್ವಶಿ, ರೆಕ್ಸ್‌ಗಳಲ್ಲೂ “ಭರ್ಜರಿ’ ಪ್ರದರ್ಶನ ಕಂಡಿದೆ. ಜೊತೆಗೆ ಮುಂಬೈನಲ್ಲೂ ಚಿತ್ರ ಬಿಡುಗಡೆಯಾಗಿದೆ. ನಿರ್ಮಾಪಕ ಶ್ರೀನಿವಾಸ್ ಎರಡು ತಿಂಗಳು ಬಿಟ್ಟು, “ಭರ್ಜರಿ’ ಚಿತ್ರವನ್ನು ತೆಲುಗಿನಲ್ಲೂ ಬಿಡುಗಡೆ ಮಾಡಲಿದ್ದು, ಈಗಾಗಲೇ ಡಬ್ಬಿಂಗ್ ಕಾರ್ಯ ಮುಕ್ತಾಯವಾಗಿದೆಯಂತೆ. ತಮಿಳಿನಿಂದ ರೀಮೇಕ್ ರೈಟ್ಸ್‌ಗೆ ಬೇಡಿಕೆ ಬರುತ್ತಿದೆಯಂತೆ.