Advertisement

ಪಾಶ್ಚಾತ್ಯ ಪರಂಪರೆ ದಾಸರಾಗಬೇಡಿ

12:16 PM Dec 17, 2018 | Team Udayavani |

ಬೆಂಗಳೂರು: ಮೊಬೈಲ್‌ ಎಂಬುದು ಮಾಯೆಯ ದ್ವಾರ. ಮೊಬೈಲ್‌ ಮೂಲಕ ಪಾಶ್ಚಿಮಾತ್ಯ ಸಂಸ್ಕೃತಿ ನಮ್ಮನ್ನು ಆವರಿಸುತ್ತಿದೆ ಎಂದು ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

Advertisement

ಗಿರಿನಗರದ ಶ್ರೀರಾಮಾಶ್ರಮದಲ್ಲಿ ಭಾನುವಾರ ನಡೆದ ಬ್ರಹ್ಮೈಕ್ಯ ರಾಘವೇಂದ್ರ ಭಾರತೀ ಮಹಾಸ್ವಾಮಿಗಳ ಆರಾಧನಾ ಮಹೋತ್ಸವದ ಸಾನ್ನಿಧ್ಯ ವಹಿಸಿ, ಕೆರೆಕೈ ಉಮಾಕಾಂತ ಭಟ್ಟರಿಗೆ ಪಾಂಡಿತ್ಯ ಪುರಸ್ಕಾರ ಹಾಗೂ ಹವ್ಯಕ ಮಹಾಮಂಡಲ ತಯಾರಿಸಿದ ಶಿಷ್ಯಬಂಧ ತಂತ್ರಾಂಶ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಮೊಬೈಲ್‌ ಮಾಯಾ ಜಾಲದೊಳಗೆ ಸೇರಿ ಪಾಶ್ಚಾತ್ಯ ಪರಂಪರೆಗೆ ದಾಸರಾಗಬಾರದು. ಮೊಬೈಲ್‌ ಎಂಬ ಮಾಯೆಯ ಜಾಗದಲ್ಲಿ ಮಠ ಪ್ರವೇಶ ಮಾಡಿ ಒಳಿತಿನೆಡೆಗೆ ಜನರನ್ನು ಕರೆದೊಯ್ಯುವಂತಾಗಲಿ ಎಂದು ಹೇಳಿದರು. ಪರಂಪರೆಯಲ್ಲಿ ಯಾರಿದ್ದರೂ ಅವರು ಶಂಕರಾಚಾರ್ಯರೇ ಆಗಿರುತ್ತಾರೆ.

ಪೀಠ ಹಾಗೂ ಪೀಠಾಧಿಪತಿಗಳ ಬಗ್ಗೆ ಕೀಳಾಗಿ ಮಾತಾಡುವುದು ಸಲ್ಲ. ಅದು ನಮ್ಮ ಸಂಸ್ಕಾರವನ್ನು ತೋರಿಸುತ್ತದೆ. ವಿಚಾರ ಕ್ಷೇತ್ರದಲ್ಲಿ ಇರುವ ಭಯೋತ್ಪಾದಕರು ಶತಮಾನಗಳ ಹಿಂದೆ ಇದ್ದ ಶಂಕರರ ಹೆಸರನ್ನು ಕೇಳಿದರೆ, ಪರಂಪರೆಯಲ್ಲಿ ಬಂದಿರುವ ಈಗಿನ ಪೀಠಾಧಿಪತಿಗಳೂ ಆದಿಶಂಕರರೇ ಆಗಿರುತ್ತಾರೆ ಹಾಗೂ ಪೀಠದಲ್ಲಿ ಇರುವ ಪೀಠಾಧಿಪತಿಗಳು ಆಧಾರಪೀಠವಾಗಿ ಇರುತ್ತಾರೆ ಎಂದರು.

ಪೀಠಾಧಿಪತಿಗಳು ಇಲ್ಲದೇ ಇದ್ದರೆ ಅದು ಪೀಠವೇ ಅಲ್ಲ. ಪೀಠದಲ್ಲಿ ಇರುವವರು ಕೇವಲ ವ್ಯಕ್ತಿಯಾಗಿರುವುದಿಲ್ಲ ಅವರು ಪರಂಪರೆಯ ಶಕ್ತಿಯಾಗಿರುತ್ತಾರೆ. ಹಾಗಾಗಿಯೇ ಅವಿಚ್ಛಿನ್ನ ಪರಂಪರಾಪ್ರಾಪ್ತ, ವಿಖ್ಯಾತ ವ್ಯಾಖ್ಯಾನ ಸಿಂಹಾಸನಾಧೀಶ್ವರ ಎಂಬಿತ್ಯಾದಿ ಬಿರುದಾವಳಿಗಳು ಇಲ್ಲಿನ ಗುರುಪರಂಪರೆಗಿವೆ ಎಂದು ಹೇಳಿದರು.

Advertisement

ಪೂರ್ವಾಚಾರ್ಯರಾದ ರಾಘವೇಂದ್ರ ಭಾರತೀ ಮಹಾಸ್ವಾಮಿಗಳು ವಿದ್ಯಾಪ್ರೀತರಾಗಿದ್ದರು. ವೇದ, ವೇದಾಂಗಗಳಲ್ಲಿ ಅತಿಶಯವಾದ ಆಸಕ್ತಿ ಹೊಂದಿದವರಾಗಿದ್ದರು. ಹಾಗಾಗಿ ಪ್ರತಿ ವರ್ಷ ಅವರ ಆರಾಧನೆಯ ಪುಣ್ಯದಿನದಂದು ನಾಡಿನ ಶ್ರೇಷ್ಠ ವಿದ್ವಾಂಸರೊಬ್ಬರಿಗೆ ಪುರಸ್ಕಾರ ನೀಡಿ ದೊಡ್ಡ ಗುರುಗಳನ್ನು ನೆನಪಿಸಿಕೊಳ್ಳುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.

ನಿವೃತ್ತ ಐಪಿಎಸ್‌ ಅಧಿಕಾರಿ ತಿಮ್ಮಪ್ಪಯ್ಯ ಮಡಿಯಾಳ್‌, ಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಭಟ್‌, ಮಹಾಮಂಡಲದ ಈಶ್ವರಿ ಬೇರ್ಕಡವು, ಮಧುಸೂಧನ್‌ ಅಡಿಗ, ಮೋಹನ್‌ಭಾಸ್ಕರ ಹೆಗಡೆ, ರಮೇಶ್‌ಹೆಗಡೆ ಕೊರಮಂಗಲ, ವಾದಿರಾಜ್‌ ಸಾಮಗ, ಆರ್‌.ಎಸ್‌.ಹೆಗಡೆ ಹರಗಿ ಮೊದಲಾದವರು ಇದ್ದರು.

ತೀರ್ಥರಾಜ ಪೂಜೆ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳ ಮೂಲಕ ಪೂರ್ವಾಚಾರ್ಯರ ಆರಾಧನೆ ನಡೆಯಿತು. ವಿದ್ವಾನ್‌ ರಾಘವೇಂದ್ರ ಭಟ್‌ ಕ್ಯಾದಗಿ ಪೂರ್ವಾಚಾರ್ಯರ ಕುರಿತಾದ ಪ್ರಣತಿ ಪಂಚಕ ಎಂಬ ವಿದ್ವತೂ³ರ್ಣ ಪಂಚಕವನ್ನು ಧರ್ಮಸಭೆಯಲ್ಲಿ ವಾಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next