ಮೈಸೂರು: ಹೆಣ್ಣು ಮಕ್ಕಳು ಬಾಹ್ಯ ಸೌಂದರ್ಯಕ್ಕೆ ಮಹತ್ವ ಕೊಡದೇ ಆಂತರಿಕ ಸೌಂದರ್ಯಕ್ಕೆ ಮಹತ್ವ, ಗಟ್ಟಿ ನಿರ್ಧಾರ ಮಾಡುವ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಕಮಲಾ ಹೇಳಿದರು. ಮೈಸೂರು ಚೈಲ್ಡ್‌ಲೈನ್, ಓಡಿಪಿ, ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ, ಎಚ್.ಡಿ.ಕೋಟೆಯ ನಿಸರ್ಗ ಫೌಂಡೇಷನ್ ಸಹಯೋಗದಲ್ಲಿ ನಗರ ಪೀಪಲ್ಸ್ ಪಾರ್ಕ್ ಸಮೀಪದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
18 ವರ್ಷದೊಳಗಿನ ಮಕ್ಕಳು ದುಡಕಿನ ನಿರ್ಧಾರ ಕೈಗೊಳ್ಳಬಾರದು. ಪ್ರೀತಿ ಪ್ರೇಮ ಎಂದು ಓಡಿ ಹೋಗಬಾರದು. ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಬಾರದು. ಈ ವಯಸ್ಸಿನಲ್ಲಿ ಮನಸ್ಸು ಚಂಚಲವಾಗುವುದು ಸಹಜ. ಆದರೆ ಗಟ್ಟಿಯಾದ ನಿರ್ಧಾರಗಳನ್ನು ಕೈಗೊಳ್ಳಬೇಕು. ಬಾಲ್ಯ ವಿವಾಹ, ಶಾಲೆಗೆ ಕಳುಹಿಸದೆ ಇರುವುದು..ಇತ್ಯಾದಿ ಸಂಗತಿಗಳನ್ನು ಮನೆಯಿಂದ ಒತ್ತಡ ಹೇರಬಹುದು. ಆದರೆ ಇವುಗಳಿಂದ ಪಾರಾಗುವುದು ಹೆಣ್ಣು ಮಕ್ಕಳ ಕೈಯಲ್ಲಿರುತ್ತದೆ. ಇದು ನಿಮ್ಮ ಭವಿಷ್ಯ. ಏನು ಮಾಡಬೇಕು, ಏನು ಆಗಬೇಕೆಂದು ನಿವೇ ನಿರ್ಧಾರಿಸಬೇಕು ಎಂದು ಕಿವಿ ಮಾತು ಹೇಳಿದರು.
ಅಪಾಯಕಾರಿ ಲಿಂಗಾನುಪಾತ: ಚೈಲ್ಡ್‌ಲೈನ್ ಜಿಲ್ಲಾ ಸಂಯೋಜಕ ಧನರಾಜ್ ಮಾತನಾಡಿ, ಭ್ರೂಣ ಹತ್ಯೆ ಪರಿಣಾಮವಾಗಿ ಲಿಂಗಾನುಪಾತದ ಕಡಿಮೆಯಾಗುತ್ತಿದೆ. 2015ರ ಸಮೀಕ್ಷೆ ಪ್ರಕಾರ ಸಾವಿರ ಪುರುಷರಿಗೆ 933 ಮಹಿಳೆಯರಿದ್ದಾರೆ. ಕರ್ನಾಟಕದಲ್ಲಿ 0-18 ಹೆಣ್ಣು ಮಕ್ಕಳು 968 ಇದ್ದಾರೆ. ಈ ಅಸಮಾತೋಲನ ಸರಿಯಿಲ್ಲ. ಆದ್ದರಿಂದ ಭ್ರೂಣ ಹತ್ಯೆ, ಹೆಣ್ಣು ಮಕ್ಕಳ ತಿರಸ್ಕೃರ ಇಲ್ಲಿಗೆ ನಿಲ್ಲಬೇಕು. ನೀವೂ ಹೆಣ್ಣು ಮಕ್ಕಳೇ ನೀವು ತಾಯಿ ಆದಾಗ ಹೆಣ್ಣೆಂದು ಜರಿದು ಭ್ರೂಣ ಹತ್ಯೆಕ್ಕೆ ಮುಂದಾಗದಿರಿ ಎಂದು ಹೇಳಿದರು.
ಪ್ರಸ್ತುತ ರಾಜ್ಯದಲ್ಲಿ ಶೇ.23 ರಷ್ಟು ಬಾಲ್ಯವಿವಾಹಗಳು ನಡೆಯುತ್ತಿವೆ. ಹೆಚ್ಚು ಬಾಲ್ಯ ವಿವಾಹ ನಡೆಯುವ ಜಿಲ್ಲೆಗಳ ಪೈಕಿ ಮೈಸೂರು 14ನೇ ಸ್ಥಾನದಲ್ಲಿದೆ. ಹೆಣ್ಣು ಮಕ್ಕಳು ಜಾಗೃತಿರಾಗುವುದರಿಂದ ಬಾಲ್ಯ ವಿವಾಹವನ್ನು ತಡೆ ಗಟ್ಟಬಹುದು ಎಂದು ತಿಳಿಸಿದರು. ಬಾಲ್ಯ ವಿವಾಹ, ಲೈಂಗಿಕ ಕಿರುಕುಳ, ಹೆಣ್ಣು ಮಕ್ಕಳ ರಕ್ಷಣೆ, ಹಕ್ಕು, ಶಿಕ್ಷಣ, ಸಮಾನತೆ ನೀಡುವ ಉದ್ದೇಶದಿಂದ 2012ರಲ್ಲಿ ವಿಶ್ವ ಸಂಸ್ಥೆ ಹೆಣ್ಣು ಮಕ್ಕಳ ದಿನಾಚರಣೆ ಜಾರಿಗೆ ತಂದಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸಿಪಿ ಗಜೇಂದ್ರ ಪ್ರಸಾದ್, ಮಕ್ಕಳ ವಿಶೇಷ ಪೊಲೀಸ್ ಘಟಕದ ಎಸ್‌ಜೆಪಿಯು ಪ್ರಸನ್ನ ಕುಮಾರ್, ಕಾಲೇಜಿನ ಪ್ರಾಂಶುಪಾಲ ಸುಜಾತ, ಜಿಲ್ಲಾ ಮಕ್ಕಳ ರಕ್ಷಣಾ ಘಕಟದ ಕೌನ್ಸರ್ ರಾಧಾ, ಆರ್‌ಎಲ್‌ಎಚ್‌ಪಿ ಸಂಯೋಜಕ ಶಶಿಕುಮಾರ್ ಮತ್ತಿತರಿದ್ದರು.