ದಾವಣಗೆರೆ: ಜಿಲ್ಲಾ ಕೇಂದ್ರ ದಾವಣಗೆರೆಯಲ್ಲಿ ಸಮೃದ್ಧ ಮಳೆಗಾಗಿ ಪ್ರಾರ್ಥಿಸಿ ಎಸ್.ಎಸ್. ಮಲ್ಲಿಕಾರ್ಜುನ್ ಅಭಿಮಾನಿಗಳ ಬಳಗದಿಂದ ಮಂಗಳವಾರ ಕುಂಭಮೇಳ ನಡೆಯಿತು. ರಾಜ್ಯದ ಇತರೆ ಭಾಗದಲ್ಲಿ, ದಾವಣಗೆರೆಯ ಅಕ್ಕಪಕ್ಕದ ಜಿಲ್ಲೆಯಲ್ಲೂ ಮಳೆಯಾಗುತ್ತಿದೆ. ಆದರೆ, ದಾವಣಗೆರೆಯಲ್ಲಿಯೇ ಮಳೆಯಾಗುತ್ತಿಲ್ಲ.
ಮಳೆಯಾಗದ ಕಾರಣಕ್ಕೆ ಮಳೆಗಾಲದಲ್ಲಿಯೇ ನೀರಿನ ಹಾಹಾಕಾರ ಕಂಡು ಬರುತ್ತಿದೆ. ಒಳ್ಳೆಯ ಮಳೆಯಾಗಲಿ ಎಂದು ಪ್ರಾರ್ಥಿಸಿ, 101 ಮಹಿಳೆಯರು ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಿಂದ ಹಗೇದಿಬ್ಬ ವೃತ್ತದವರೆಗೆ ಕುಂಭಮೇಳ ನಡೆಸಿ, ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ ವಿಶೇಷ ಪೂಜೆ ನೆರವೇರಿಸಿದರು.
ಅಭಿಮಾನಿಗಳ ಬಳಗದ ಅಧ್ಯಕ್ಷ ಡಿ. ನಾಗರಾಜ್ ದೇವಸ್ಥಾನ ಸುತ್ತ ಉರುಳು ಸೇವೆ ಸಲ್ಲಿಸಿದರು. ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ದಾವಣಗೆರೆಯಲ್ಲಿ ಈವೆರೆಗೆ ಒಂದೇ ಒಂದು ಬಾರಿ 20-25 ನಿಮಿಷಗಳ ಕಾಲ ಮಳೆಯಾಗಿದ್ದು, ಗಟ್ಟಿಯಾದ ಮಳೆಯೇ ಆಗಿಲ್ಲ. ಕಪ್ಪುಮೋಡಗಳು ದಟ್ಟೆಸಿದರೂ ಹದವಾದ ಮಳೆ ಎಂಬುದನ್ನು ದಾವಣಗೆರೆ ಜನರು ನೋಡಿಯೇ ಇಲ್ಲ.
ಮಳೆಗಾಲದ ಪ್ರಾರಂಭದಲ್ಲೇ ಜನರು ಕುಡಿಯುವ ನೀರಿನ ಸಮಸ್ಯೆಯಿಂದಾಗಿ ತತ್ತರಿಸಿ ಹೋಗಿದ್ದರು. ಕುಡಿಯುವ ನೀರಿಗಾಗಿ ಜನರು ಹಗಲು-ರಾತ್ರಿಎನ್ನದೆ ಅಲೆದಾಡಿದ್ದರು. ಮಹಾನಗರ ಪಾಲಿಕೆಯಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ವ್ಯವಸ್ಥೆ ಮಾಡಿದ್ದರೂ ಜನರು ನೀರಿಗಾಗಿ ಅಲೆದಾಡಬೇಕಾಯಿತು.
ಹಣ ಕೊಟ್ಟರೂ ಸಕಾಲಕ್ಕೆ ನೀರು ದೊರೆಯದ ಸ್ಥಿತಿ ನಿರ್ಮಾಣವಾಗಿತ್ತು. ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು ಬಿಟ್ಟ ಪರಿಣಾಮ ಪರಿಸ್ಥಿತಿ ಕೊಂಚ ಸುಧಾರಿಸಿದೆ. ಈಗಲೂ ನದಿಯಲ್ಲಿ ನೀರು ಇಲ್ಲದೆ ಇರುವ ಕಾರಣ ನೀರಿನ ಸಮಸ್ಯೆ ಯಾವುದೇ ಕ್ಷಣ ಉದ್ಭವಿಸುವ ಎಲ್ಲಾ ಲಕ್ಷಣಗಳು ಇವೆ.
ಹಾಗಾಗಿಯೇ ಜನರು ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ ವಿಶೇಷ ಪೂಜೆ, ಅಭಿಷೇಕ ನಡೆಸಲಾಗಿದೆ. ಜತೆಗೆ ಕರಗಲ್ಲು ಪೂಜೆ, ಬ್ರಾಹ್ಮಣ ಸಮಾಜದಿಂದ ಪ್ರರ್ಜನ್ಯ ಹೋಮ ಕೈಗೊಳ್ಳಲಾಗಿದೆ. ಆದರೂ, ದಾವಣಗೆರೆಯಲ್ಲಿ ರಭಸದ ಮಳೆಯೇ ಸುರಿದಿಲ್ಲ.
ಈಗ ಸಮೃದ್ಧ ಮಳೆಗಾಗಿ ಪ್ರಾರ್ಥಿಸಿ ಎಸ್. ಎಸ್. ಮಲ್ಲಿಕಾರ್ಜುನ್ ಅಭಿಮಾನಿಗಳ ಬಳಗದಿಂದ ಕುಂಭಮೇಳವನ್ನೂ ನಡೆಸಲಾಗಿದೆ. ಗ್ರಾಮ ಪಂಚಾಯತ್ ಸದಸ್ಯ ಎಲೇಬೇತೂರು ಮಂಜುನಾಥ್, ಉದಯ್ ಗಾಂಧಿನಗರ, ಎಂ. ಜಾಕೀರ್, ಮಂಜುಳಾ, ಪ್ರಶಾಂತ್, ಆನಂದ್, ಕುಮಾರ್, ನಾಗಪ್ಪ, ಲಕ್ಷ್ಮಣ್, ರವಿ ವಿನೋಬ ನಗರ ಇತರರು ಇದ್ದರು.