ಎಂಸಿಡಿ ಅಧಿಕಾರ ಉಳಿಸಿಕೊಳ್ಳುವುದು ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು, ಹೀಗಾಗಿ ಚುನಾವಣೆಯನ್ನು ಅದು ತೀರಾ ಗಂಭೀರವಾಗಿ ಪರಿಭಾವಿಸಿದ್ದುದರಲ್ಲಿ ಅಚ್ಚರಿಯಿಲ್ಲ. ಆದರೆ, ಮೋದಿ ವರ್ಚಸ್ಸಿನ ಅತಿ ಅವಲಂಬನೆ ಒಳ್ಳೆಯದಲ್ಲ ಎಂಬ ಎಚ್ಚರ ಅದಕ್ಕಿರಲಿ.
ದೇಶದ ರಾಜಧಾನಿ ದಿಲ್ಲಿಯ ಮುನಿಸಿಪಲ್ ಕಾರ್ಪೊರೇಶನ್ ಚುನಾವಣೆಯಲ್ಲಿ ಬಿಜೆಪಿ ತನ್ನ ಪ್ರತಿಸ್ಪರ್ಧಿಗಳ ಎದುರು ಭಾರೀ ಅಂತರದ ಜಯ ಗಳಿಸಿದೆ. ಹಾಲಿ ದಿಲ್ಲಿ ವಿಧಾನಸಭೆಯನ್ನು ಆಳುತ್ತಿರುವ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಆದರೆ ಬಿಜೆಪಿಗೂ ಅದಕ್ಕೂ ಸ್ಥಾನಗಳಿಕೆಯಲ್ಲಿ ಭಾರೀ ಅಂತರವಿದೆ. 2014ರ ಮಹಾಚುನಾವಣೆ, ಇತ್ತೀಚೆಗಿನ ಉತ್ತರಪ್ರದೇಶ, ಉತ್ತರಾಖಂಡ ವಿಧಾನಸಭೆ ಚುನಾವಣೆಗಳ ಸೋಲುಗಳ ಪುನರಾವರ್ತನೆ ಕಾಂಗ್ರೆಸ್ ಪಾಲಿಗೆ ದಿಲ್ಲಿಯಲ್ಲೂ ನಡೆದಿದೆ. ಯಥಾಪ್ರಕಾರ ಬಿಜೆಪಿ ತನ್ನ ಗೆಲುವಿನ ಯಶಸ್ಸಿನ ಹಿರಿಮೆಯನ್ನು ಪ್ರಧಾನಿ ಮೋದಿ ಅವರ ವರ್ಚಸ್ಸು ಮತ್ತು ಅಧ್ಯಕ್ಷ ಅಮಿತ್ ಶಾ ಅವರ ಕಾರ್ಯತಂತ್ರಗಳ ಹೆಗಲ ಮೇಲೇರಿಸಿದೆ.
ಎರಡು ವರ್ಷಗಳ ಹಿಂದೆ ನಡೆದ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಮೂರು ಸ್ಥಾನಗಳನ್ನು ಮಾತ್ರ ಪಡೆಯಲು ಶಕ್ತವಾಗಿದ್ದ ಬಿಜೆಪಿ ಈ ಮುನಿಸಿಪಲ್ ಕಾರ್ಪೊರೇಶನ್ ಚುನಾವಣೆಯನ್ನು ವಿಧಾನಸಭಾ ಚುನಾವಣೆಗೆ ಸರಿಸಮಾನವಾಗಿ ಪರಿಭಾವಿಸಿತ್ತು ಎಂದರೆ ತಪ್ಪಿಲ್ಲ. ದೇಶವನ್ನಾಳುವ ತನ್ನ ಗದ್ದುಗೆಯ ಸನಿಹದಲ್ಲಿಯೇ ಆಪ್ ಅಧಿಕಾರದಲ್ಲಿರುವುದು, ಅದರ ನೇತಾರ ಅರವಿಂದ ಕೇಜ್ರಿವಾಲ್ ಮಗ್ಗುಲಿನಲ್ಲಿ ಸಿಲುಕಿದ ಮುಳ್ಳಿನಂತಿರುವುದು ಅದಕ್ಕೆ ಅಸಹನೀಯವಾಗಿತ್ತು. ಹೀಗಾಗಿ ಆಪ್ ಗೆಲುವನ್ನು ತಡೆಯಲು ಅದು ಮುನಿಸಿಪಲ್ ಕಾರ್ಪೊರೇಶನ್ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಪ್ 67 ಸ್ಥಾನಗಳನ್ನು ಗೆದ್ದುದರಿಂದ ಬಿಜೆಪಿಗೆ ಈ ಚುನಾವಣೆ ಅಧಿಕಾರ ಉಳಿಸಿಕೊಳ್ಳುವುದು ಪ್ರತಿಷ್ಠೆಯ ಪ್ರಶ್ನೆಯೂ ಆಗಿತ್ತು. ಇದಕ್ಕೆ ಅದು ನಡೆಸಿದ ಪ್ರಚಾರವೇ ಸಾಕ್ಷಿ. ರಾಜನಾಥ್ ಸಿಂಗ್, ಉಮಾಭಾರತಿ, ಸ್ಮತಿ ಇರಾನಿ, ವೆಂಕಯ್ಯ ನಾಯ್ಡು ಅವರಂತಹ ಘಟಾನುಘಟಿ ನಾಯಕರು ಪ್ರಚಾರದಲ್ಲಿ ಭಾಗವಹಿಸಿದ್ದರು, ನಿರ್ಮಲಾ ಸೀತಾರಾಮನ್, ಜಿತೇಂದ್ರ ಸಿಂಗ್, ವಿಜಯ್ ಗೋಯಲ್ ಅವರಂಥವರು ಅಮಿತ್ ಶಾ ಮೇಲ್ವಿಚಾರಣೆಯಲ್ಲಿ ಚುನಾವಣಾ ಕಾರ್ಯತಂತ್ರದ ಉಸ್ತುವಾರಿ ವಹಿಸಿದ್ದರು ಎಂಬುದು ಈ ಚುನಾವಣೆಯನ್ನು ಅದು ಎಷ್ಟು ಗಂಭೀರವಾಗಿ ತೆಗೆದುಕೊಂಡಿತ್ತು ಎಂಬುದನ್ನು ಸೂಚಿಸುತ್ತದೆ.
ಇದಕ್ಕೆ ತದ್ವಿರುದ್ಧವಾಗಿ ಪ್ರಬಲ ಸ್ಪರ್ಧೆ ಒಡ್ಡುವ ನಿರೀಕ್ಷೆ ಹುಟ್ಟಿಸಿದ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಹಗರಣಗಳು, ಕೀಳು ಮಟ್ಟದ ವಿವಾದಗಳಲ್ಲಿ ಸಿಲುಕಿತ್ತು ಮತ್ತು ಭರವಸೆಗಳನ್ನು ಈಡೇರಿಸದೆ ನಿರಾಶೆ ಮೂಡಿಸಿತ್ತು. ಇತ್ತೀಚೆಗಿನ ಉತ್ತರ ಪ್ರದೇಶ ಚುನಾವಣೆಯಲ್ಲಿ ಇಲೆಕ್ಟ್ರಾನಿಕ್ ಮತಯಂತ್ರಗಳನ್ನು ತಿರುಚಲಾಗಿದೆ ಎಂಬ ಕೇಜ್ರಿವಾಲ್ ಆರೋಪ ಮತ್ತು ದಿಲ್ಲಿ ಮುನಿಸಿಪಲ್ ಚುನಾವಣೆಯಲ್ಲಿ ಹಳೆಯ ಮತಪೆಟ್ಟಿಗೆಗಳನ್ನು ಬಳಸಬೇಕು ಎಂಬ ಅವರ ಆಗ್ರಹ ದಿಲ್ಲಿಯ ಜನರಿಗೆ ಹಾಸ್ಯಾಸ್ಪದವಾಗಿ ಕಂಡಿದ್ದರೆ ಅಚ್ಚರಿಯಿಲ್ಲ. ಈ ಚುನಾವಣೆಯಲ್ಲೂ ಇವಿಎಂ ತಿರುಚಲಾಗಿದೆ ಎಂಬ ರಾಗವನ್ನು ಆಪ್ ಮತ್ತೆ ಹಾಡಿದೆ.
ಇನ್ನೊಂದೆಡೆ, ಒಂದು ಕಾಲದಲ್ಲಿ ದಿಲ್ಲಿಯಲ್ಲಿ ಸುದೀರ್ಘ ಸಮಯ ಅಧಿಕಾರದಲ್ಲಿದ್ದ ಕಾಂಗ್ರೆಸ್ ನಿರಾಶಾದಾಯಕ ತೃತೀಯ ಸ್ಥಾನಕ್ಕೆ ಕುಸಿದಿದೆ. 2013 ಮತ್ತು 2015ರ ದಿಲ್ಲಿ ವಿಧಾನಸಭಾ ಚುನಾವಣೆ, 2014ರ ಲೋಕಸಭಾ ಚುನಾವಣೆ ಹಾಗೂ ತೀರಾ ಇತ್ತೀಚೆಗೆ ದಿಲ್ಲಿಯ ರಜೌರಿ ಗಾರ್ಡನ್ ಅಸೆಂಬ್ಲಿ ಉಪಚುನಾವಣೆಯ ಸೋಲಿನ ಸರಣಿ ಅದರ ಪಾಲಿಗೆ ಮುನಿಸಿಪಲ್ ಕಾರ್ಪೊರೇಶನ್ ಚುನಾವಣೆಯಲ್ಲೂ ಮುಂದುವರಿದಿದೆ. ಸೋಲಿನ ಹೊಣೆ ಹೊತ್ತು ದಿಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ಮಾಕೆನ್ ರಾಜೀನಾಮೆ ನೀಡಿದ್ದಾರೆ, ಅದರ ಬೆನ್ನಿಗೆ ಪಕ್ಷದೊಳಗಿನ ಅಸಮಾಧಾನ ಮತ್ತೆ ಬಹಿರಂಗವಾಗಿದೆ. ದೀರ್ಘಕಾಲ ದಿಲ್ಲಿ ಮುಖ್ಯಮಂತ್ರಿಯಾಗಿದ್ದ, ಇತ್ತೀಚೆಗಿನ ಉ. ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಎಂದು ಬಿಂಬಿತವಾಗಿದ್ದ ಶೀಲಾ ದೀಕ್ಷಿತ್ ತನ್ನ ಸಹಿತ ಪಕ್ಷದ ಹಿರಿಯ ನಾಯಕರನ್ನು ಪ್ರಚಾರ ಕಾರ್ಯದಲ್ಲಿ ತೊಡಗಿಸದೆ ಇದ್ದುದರ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದಾರೆ. ಬಿಜೆಪಿಯ ಗೆಲುವಿನ ಸರಮಾಲೆ ಇಲ್ಲೂ ಮುಂದುವರಿದಿದೆ ನಿಜ. ಮೋದಿ ವರ್ಚಸ್ಸು ಮತ್ತು ಅಮಿತ್ ಶಾ ಕಾರ್ಯತಂತ್ರವನ್ನು ಅದು ನೆಚ್ಚಿಕೊಂಡಿದೆ. ಆದರೆ, ಒಳ್ಳೆಯ ಆಡಳಿತವನ್ನು ನೀಡುವ ಹೊಣೆಯೂ ಅದರ ಮೇಲಿದೆ. ಕೇವಲ ಮೋದಿ ವರ್ಚಸ್ಸನ್ನು ಅತಿಯಾಗಿ ನೆಚ್ಚಿಕೊಂಡಿರುವುದು ಒಳ್ಳೆಯದಲ್ಲ, ಅದಕ್ಕೆ ಪರ್ಯಾಯವಾಗಿ ಉತ್ತಮ ಆಡಳಿತದ ವ್ಯಕ್ತಿತ್ವವೊಂದನ್ನು ತಾನು ರೂಪಿಸಿಕೊಳ್ಳಬೇಕು ಎನ್ನುವ ಎಚ್ಚರ ಅದಕ್ಕಿರಬೇಕು.