ಬೆಂಗಳೂರು: ಬರಹಗಾರರು ಯಾವುದೋ ಒಂದು ಸಿದ್ಧಾಂತಕ್ಕೆ ಸೀಮಿತಗೊಳ್ಳದೆ ಚೌಕಟ್ಟು ಮೀರಿ ಬೆಳೆಯಬೇಕು ಎಂದು ಹಿರಿಯ ಸಾಹಿತಿ ಡಾ.ಬಸವರಾಜ ಕಲ್ಗುಡಿ ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕ ಲೇಖಕಿಯರ ಸಂಘ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ದಾವಣಗೆರೆಯ ವೈದ್ಯೆ, ಸಾಹಿತಿ ಡಾ.ಎಚ್.ಗಿರಿಜಮ್ಮ ಅವರಿಗೆ “ಅನುಪಮಾ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದರು.
ಅನುಪಮಾ ನಿರಂಜನ ಹಾಗೂ ಗಿರಿಜಮ್ಮ ಅವರಿಗೆ ಮಾನವೀಯ ನೆಲೆಯಷ್ಟೇ ಮುಖ್ಯವಾಗಿದ್ದು, ಅವರ ಬರಹಗಳಲ್ಲಿ ಅದನ್ನು ಸೂಕ್ಷ್ಮವಾಗಿ ಗಮನಿಸಬಹುದು. ಕನ್ನಡದಲ್ಲಿ ವೈದ್ಯ ಸಾಹಿತ್ಯದೊಂದಿಗೆ ಇತರ ಸಾಹಿತ್ಯ ಪ್ರಕಾರಗಳಲ್ಲೂ ಕೂಡ ಇವರಿಬ್ಬರದ್ದು ವಿಶೇಷ ಕೊಡುಗೆಯಾಗಿದೆ ಎಂದು ಹೇಳಿದರು.
ಲೇಖಕಿ ಲಲಿತಾ ಸಿದ್ದಬಸವಯ್ಯ ಮಾತನಾಡಿ, ಗಿರಿಜಮ್ಮ ಅವರ ವೈದ್ಯಕೀಯ ಸಾಹಿತ್ಯ ಮತ್ತು ಇತರ ಸಾಹಿತ್ಯ ಪ್ರಕಾರಗಳು ಎಲ್ಲ ಪ್ರಕಾರಗಳಲ್ಲೂ ಸೈ ಎನ್ನಿಸಿಕೊಂಡಿವೆ. ಅವರ ಬರಹಗಳಲ್ಲಿ ಅಂತಃಕರಣದ ತುಡಿತ ಇದೆ. ಸಾಹಿತ್ಯ ವಿಮಶಾìವಲಯದ ಬಗ್ಗೆ ಅವರೆಂದೂ ತಲೆಕೆಡಿಸಿಕೊಂಡಿಲ್ಲ. ಓದುಗರೇ ನಿಜವಾದ ವಿಮರ್ಶಕರು ಎಂಬುದು ಅವರ ಅಭಿಪ್ರಾಯ. ವೈದ್ಯೆಯಾಗಿ, ಬರಹಗಾರ್ತಿಯಾಗಿ ನಾಡಿನ ಉದ್ದಗಲಕ್ಕೂ ಕೆಲಸ ಮಾಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಈಗಾಗಲೇ 24 ಮಂದಿಗೆ ಅನುಪಮಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದೇ ಮೊದಲ ಬಾರಿಗೆ ವೈಜ್ಞಾನಿಕ, ವೈದ್ಯಕೀಯ ಕ್ಷೇತ್ರದ ಸಾಹಿತ್ಯ ಬರವಣಿಗೆಯಲ್ಲಿ ತೊಡಗಿದ್ದವರನ್ನು ಗುರುತಿಸಿ ಗೌರವಿಸಲಾಗುತ್ತಿದೆ.
ಡಾ.ಎಚ್.ಗಿರಿಜಮ್ಮ ಅವರು, ಸ್ತ್ರೀರೋಗ ತಜ್ಞೆಯಾಗಿ ಸೃಜನಶೀಲ ಸಾಹಿತಿಯಾಗಿ ಕನ್ನಡಿಗರ ಮನಸಿನಲ್ಲಿ ನೆಲೆಸಿದ್ದಾರೆ. ವೈಜ್ಞಾನಿಕ ಹಿನ್ನೆಲೆಯ ಬರವಣಿಗೆಯಲ್ಲಿ ಅನುಪಮಾ ನಿರಂಜನ್ ನಾಡಿನ ಅಪ್ರತಿಮ ಲೇಖಕಿ. ಅವರ ಹೆಸರಿನ ಪ್ರಶಸ್ತಿಗೆ ಗಿರಿಜಮ್ಮ ಅವರನ್ನು ಆಯ್ಕೆ ಮಾಡಿ ಗೌರವಿಸಲಾಗುತ್ತಿದೆ ಎಂದರು.
ಅನುಪಮಾ ನಿರಂಜನ ಅವರ ಹೆಸರಿನಲ್ಲಿ ಪ್ರದಾನ ಮಾಡಲಾಗುತ್ತಿರುವ ಪ್ರಶಸ್ತಿ ಮೊತ್ತವನ್ನು ಹತ್ತು ಸಾವಿರದಿಂದ 25 ಸಾವಿರಕ್ಕೆ ಈ ಬಾರಿಯಿಂದ ಹೆಚ್ಚಿಗೆ ಮಾಡಲಾಗಿದೆ. ಲೇಖಕಿಯರ ಸಂಘ ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿದೆ.
-ಡಾ.ವಸುಂಧರಾ ಭೂಪತಿ, ಅಧ್ಯಕ್ಷೆ, ಲೇಖಕಿಯರ ಸಂಘ.