ಮೂಲ್ಕಿ: ಸಾಧನೆಯ ಮಾಪನ ಕೇವಲ ಪರೀಕ್ಷೆಗೆ ಸೀಮಿತವಾಗದಿರಲಿ. ಅದು ವ್ಯಕ್ತಿತ್ವ ವಿಕಸನ ಮತ್ತು ಕೌಶಲ ವರ್ಧನೆಯಾಗಿ ಪರಿವರ್ತನೆಗೊಂಡು ಜೀವನದ ಶಿಕ್ಷಣ ವಾಗಿರಬೇಕು ಎಂದು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತಾಧಿಕಾರಿ ಡಾ| ಎಚ್. ಶಾಂತಾರಾಮ್ ಹೇಳಿದರು.
ಅವರು ಮೂಲ್ಕಿ ವಿಜಯ ಕಾಲೇಜಿನ ರಕ್ಷಕ -ಶಿಕ್ಷಕ ಸಂಘದ ಮಹಾಧಿವೇಶನನಲ್ಲಿ ದಿಕ್ಸೂಚಿ ಭಾಷಣ ಮಾಡಿ ಮಾತನಾಡಿದರು.
ವಿದ್ಯಾರ್ಥಿಯಾದವನು ಯಾವುದೇ ಅಡ್ಡ ಮಾರ್ಗ ಹಿಡಿಯದೇ ಸ್ವಪ್ರಯತ್ನದಿಂದ ನಿರಂತರವಾಗಿ ಪ್ರಾಮಾಣಿಕತೆಯಿಂದ ಶ್ರಮ ಪಟ್ಟಾಗ ಯಶಸ್ಸು ನಿಶ್ಚಿತ. ಪಠ್ಯೇತರ ಚಟುವಟಿಕೆಗಳಲ್ಲಿ ಪರಿಣತಿಯನ್ನು ಪಡೆದು ಸದ್ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮುಂದುವರಿದಾಗ ವಿದ್ಯಾರ್ಥಿಯ ಬದುಕು ಸಾರ್ಥಕವಾಗ ಬಲ್ಲದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಡಾ| ಶಾಂತಾರಾಮ್ ಅಭಿನಂದಿಸಿ ಗೌರವಿಸಿದರು.
ಕಾಲೇಜಿನ ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ ವಿ. ರಮೇಶ್ ಕಾಮತ್ ಮಾತನಾಡಿ, ಕಾಲೇಜು ಪ್ರಜ್ಞಾವಂತ ಪ್ರಜೆಗಳನ್ನು ರೂಪಿಸಿ ಕೊಡುಗೆಯಾಗಿ ನೀಡುವಲ್ಲಿ ವಿಜಯ ಕಾಲೇಜು ಸುಮಾರು ಐದು ದಶಕಗಳಿಂದಲೂ ಉತ್ತಮ ಪ್ರಯತ್ನವನ್ನು ಮಾಡುವಲ್ಲಿ ಶಿಕ್ಷಕ ವರ್ಗದ ನಿರಂತರ ಪರಿಶ್ರಮವನ್ನು ಶ್ಲಾಘಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ| ಕೆ. ನಾರಾಯಣ ಪೂಜಾರಿ ಸ್ವಾಗತಿಸಿದರು. ಕಾಲೇಜಿನ ವಿಶ್ವಸ್ಥ ಮಂಡಳಿಯ ಟ್ರಸ್ಟಿ ವಿ. ಶಿವರಾಮ ಕಾಮತ್, ಆಡಳಿತ ಮಂಡಳಿಯ ಸದಸ್ಯ ಎಚ್. ರಾಮದಾಸ ಕಾಮತ್, ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಫಮೀದಾ ಬೇಗಂ ವೇದಿಕೆಯಲ್ಲಿದ್ದರು.
ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲಾದಿಕಾರಿ ಡಾ| ಅನಸೂಯ ಟಿ. ಕರ್ಕೇರಾ ವಂದಿಸಿದರು. ಪ್ರೊ| ವಿಜಯಾಕುಮಾರಿ ಕಾರ್ಯಕ್ರಮ ನಿರ್ವಹಿಸಿದರು.