ಕೇಂದ್ರ ಸರಕಾರ ಗಾಂಧಿ ಜಯಂತಿಯಿಂದ ತಿಂಗಳ ಕಾಲ ಎಲ್ಲ ಸಚಿ ವಾಲಯಗಳು ಮತ್ತು ಇಲಾಖೆಗಳಲ್ಲಿ ಬಾಕಿ ಇರುವ ದೂರುಗಳನ್ನು ವಿಲೇವಾರಿಗೊಳಿಸಲು ಅಭಿಯಾನವೊಂದನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ಈ ಅಭಿಯಾನದಡಿಯಲ್ಲಿ ಸಂಸತ್ ಸದಸ್ಯರು, ರಾಜ್ಯ ಸರಕಾರಗಳಿಂದ ದೂರು ವಿಲೇವಾರಿ, ಸಂಸದೀಯ ಸಮಿತಿಗಳು ನೀಡಿದ ಭರವಸೆಗಳ ಬಾಕಿ ಅನುಷ್ಠಾನ ಹಾಗೂ ಸಾರ್ವಜನಿಕ ದೂರುಗಳನ್ನು ಕೂಡ ಆದ್ಯತೆಯ ಮೇಲೆ ಇತ್ಯರ್ಥಗೊಳಿಸಲು ಉದ್ದೇಶಿಸಿದೆ.
ಸಾರ್ವಜನಿಕ ದೂರುಗಳಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಲ್ಲಿ ಪ್ರತ್ಯೇಕ ಸಚಿವಾಲಯ ಅಥವಾ ವ್ಯವಸ್ಥೆಗಳಿದ್ದರೂ ದೂರುಗಳಿಗೆ ಕನಿಷ್ಠ ಸ್ಪಂದನೆಯೂ ಲಭಿಸುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ರದ್ದಾಗಿದೆ. ಇನ್ನು ಈ ದೂರುಗಳ ವಿಲೇವಾರಿ, ಇತ್ಯರ್ಥಕ್ಕೆ ಸಂಬಂಧಿಸಿದಂತೆ ಸರಕಾರ ಹಲವಾರು ಸಮಿತಿಗಳನ್ನು ರಚಿಸಿ ವರದಿಗಳನ್ನು ಪಡೆದು ಕೊಂಡಿದ್ದರೂ ಕಾರ್ಯಯೋಗ್ಯವಾದ ಶಿಫಾರಸುಗಳನ್ನು ಅನುಷ್ಠಾನ ಗೊಳಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿರಾಸಕ್ತಿ ವಹಿಸಿದುದರಿಂ ದಾಗಿ ಭಾರೀ ಸಂಖ್ಯೆಯ ದೂರುಗಳು ಪ್ರತಿಯೊಂದೂ ಸಚಿವಾಲಯ ಮತ್ತು ಇಲಾಖೆಗಳಲ್ಲಿ ರಾಶಿಬಿದ್ದಿವೆ. ಕಳೆದೆರಡು ವರ್ಷಗಳಿಂದೀಚೆಗೆ ದೇಶಾದ್ಯಂತ ಕೊರೊನಾ ವ್ಯಾಪಿಸಿದಾಗಿನಿಂದ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಈ ದೂರುಗಳನ್ನು ಕೇಳುವವರೇ ಇಲ್ಲದಂತಾಗಿದೆ.
ಕೆಲವೊಂದು ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ವಿವಿಧ ಸಚಿವಾಲಯ ಮತ್ತು ಇಲಾಖೆಗಳಿಗೆ ಸ್ಪಷ್ಟನೆ ಅಥವಾ ಪರಿಹಾರ ಕೋರಿ ದೂರುಗಳನ್ನು ನೀಡುವುದು ಸಾಮಾನ್ಯ. ಇವುಗಳಲ್ಲಿ ಕೆಲವೊಂದು ಅತ್ಯಂತ ಮಹತ್ವದ ಮತ್ತು ತ್ವರಿತ ಉತ್ತರ ಬಯಸುವ ದೂರುಗಳಾಗಿರುತ್ತವೆ. ಈ ದೂರುಗಳ ವಿಲೇವಾರಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ಹೊಂದಿ ರುವ ನಿಯಮಾವಳಿಗಳಲ್ಲಿ ಕಾಲಮಿತಿಯನ್ನು ನಿಗದಿಪಡಿಸಲಾಗಿದೆಯಾದರೂ ಬಹುತೇಕ ಪ್ರಕರಣಗಳಲ್ಲಿ ಇದನ್ನು ಪಾಲಿಸಲಾಗುತ್ತಿಲ್ಲ.
ಇಂಥ ದೂರುಗಳ ವಿಲೇವಾರಿಯಲ್ಲಾಗುತ್ತಿರುವ ವಿಳಂಬವನ್ನು ಹೋಗಲಾಡಿಸಲು, ಪ್ರಕ್ರಿಯೆಯನ್ನು ತ್ವರಿತ ಮತ್ತು ಸರಳಗೊಳಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ನಿರಂತರ ಹೊಸ ಹೊಸ ಯೋಜನೆ, ವಿಧಾನ ಅನುಸರಿಸಲಾಗುತ್ತ ಬಂದಿದ್ದರೂ ಇವ್ಯಾವುವೂ ನಿರೀಕ್ಷಿತ ಯಶ ಸ್ಸನ್ನು ಕಂಡಿಲ್ಲ. ಸರಕಾರಿ ಕೆಲಸ ಕಾರ್ಯಗಳೆಲ್ಲವೂ ಇದೀಗ ಮೊಬೈಲ್ ಮೂಲಕ ಅಂಗೈಯಲ್ಲಿಯೇ ನಡೆಯುವಂತಾಗಿದ್ದರೂ ದೂರು ಗಳ ಇತ್ಯರ್ಥ ಮಾತ್ರ ಇನ್ನೂ ಆಮೆಗತಿಯಲ್ಲಿ ಸಾಗುತ್ತಿರುವುದು ತೀರಾ ವಿಪ ರ್ಯಾಸ. ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ಇಂತಹ ವಿಳಂಬವನ್ನು ಸಾಕಷ್ಟು ಕಡಿಮೆಗೊಳಿಸಬಹುದಾಗಿದೆ. ಇವೆಲ್ಲದರ ಹಿನ್ನೆಲೆ ಯಲ್ಲಿ ಕೇಂದ್ರ ಸರಕಾರ ಇದೀಗ ದೂರುಗಳ ವಿಲೇವಾರಿಗೆ ಕಡತ ಯಜ್ಞದ ಮಾದರಿಯಲ್ಲಿ ಅಭಿಯಾನವನ್ನು ನಡೆಸಲು ನಿರ್ಧರಿಸಿರುವುದು ಸ್ವಾಗತಾರ್ಹ. ಆದರೆ ಈ ಅಭಿಯಾನವೂ ಕೇವಲ ಆರಂಭಶೂರತನಕ್ಕೆ ಸೀಮಿತವಾಗದಿರಲಿ. ವಿಲೇವಾರಿ ಪ್ರಕ್ರಿಯೆ ನಿರಂತರವಾಗಿ ನಡೆಯು ವಂತಾದಲ್ಲಿ ಈ ಅಭಿಯಾನದ ನೈಜ ಉದ್ದೇಶ ಈಡೇರಿದಂತಾಗಲಿದೆ. ಈ ನಿಟ್ಟಿನಲ್ಲಿ ಸರಕಾರದ ಎಲ್ಲ ಇಲಾಖೆಗಳ ಅಧಿಕಾರಿಗಳ ಇಚ್ಛಾಶಕ್ತಿ ಮತ್ತು ಬದ್ಧತೆ ಪ್ರಮುಖ. ಇಷ್ಟು ಮಾತ್ರವಲ್ಲದೆ ಸಾರ್ವಜನಿಕರೂ ಕೂಡ ಸಣ್ಣಪುಟ್ಟ ವಿಚಾರಗಳಿಗೆಲ್ಲ ದೂರು ನೀಡುವ ಚಾಳಿಯಿಂದ ಹೊರಬಂದು ಜನಹಿತಕ್ಕೆ ಪೂರಕವಾದ ದೂರುಗಳನ್ನು ಮಾತ್ರವೇ ಸಲ್ಲಿಸಿದಲ್ಲಿ ಅಧಿಕಾರಿಗಳ ಶ್ರಮ ಮತ್ತು ಸಮಯ ಎರಡೂ ಉಳಿತಾಯವಾಗಲು ಸಾಧ್ಯ.