ಮುಂಜಾನೆಯ ಮುಗುಳು ನಗುವಿ ನಲ್ಲಿಯೂ ಒಂದು ಸ್ವಾದವಿದೆ, ಮುಸ್ಸಂಜೆಯ ಮಬ್ಬಿನಲ್ಲಿಯೂ ಒಂದು ಆಹ್ಲಾದವಿದೆ. ಸೂರ್ಯ ಹುಟ್ಟುವಾಗಲೂ ಕಂಪಿದೆ, ಮುಳುಗುವಾಗ ಬಾನಲ್ಲೆಲ್ಲ ಹೊನ್ನಿನ ರಂಗಿದೆ. ಆದರೆ, ಇದನ್ನು ಗಮನಿಸಿ ಸಂತೋಷ ಪಡಬೇಕಾದ ಮನಸ್ಸುಗಳು ಮಾತ್ರ ಮರೆ ಯಾಗುತ್ತಿವೆ. ಜಂಜಾಟದ ಬದುಕೆಂಬ ಚಕ್ರ ವ್ಯೂಹದೊಳಗೆ ಹೊಕ್ಕು, ಹೊರ ಬರಲಾರದೆ ಚಡ ಪಡಿಸುತ್ತಿವೆ. ಯಾಕೆ ಹೀಗೆ? ನಮ್ಮ ಪೂರ್ವಜರಿಗೆ ಸಿಗುತ್ತಿದ್ದ ಈ ನೈಸರ್ಗಿಕ ಆನಂದದಿಂದ ನಾವು ವಂಚಿತರಾಗುತ್ತಿರುವುದು ಯಾವುದರಿಂದಾಗಿ? ಅದಕ್ಕುತ್ತರ ನಮ್ಮ ಚಿಂತನೆ ಮತ್ತು ಯೋಚನಾ ಕ್ರಮ.
ಒಂದು ಪುಟಾಣಿ ಇರುವೆ, ಮಣಭಾರವೆನಿಸುವ ಅನ್ನದ ಅಗುಳನ್ನು ಹೊತ್ತು ಸಾಗುತ್ತದೆ, ತನ್ನ ಒಡನಾಡಿಗಳನ್ನೆಲ್ಲ ಒಟ್ಟು ಸೇರಿಸಿ ಆಹಾರ ಸಂಗ್ರಹಿಸಲು ಮುಂದಾಗುತ್ತದೆ. ಕೊನೆಗೆ ಉಣ್ಣುವ ಸಂದರ್ಭದಲ್ಲಿಯೂ ಹಂಚಿಕೊಂಡು ತಿನ್ನುವ ಮನಸ್ಸು ಅವುಗಳಲ್ಲಿದೆ. ಎಲ್ಲರನ್ನೊಳಗೊಂಡು ಬದುಕುವುದರ ಹಿಂದಿನ ಮಹತ್ವ ಪುಟಾಣಿ ಜೀವರಾಶಿಗಳೇ ಸಾರುತ್ತವೆ. ಆದರೆ ಮನುಷ್ಯ ಹಾಗಲ್ಲ. ಅವನಿಗೆ ಸದಾ ಕಾಲ ಕೂಡಿಡುವುದು ಮತ್ತು ತನ್ನನ್ನು ತಾನು ಅಭಿವೃದ್ಧಿ ಪಡಿಸಿಕೊಳ್ಳಬೇಕು ಎನ್ನುವುದರತ್ತಲೇ ಚಿತ್ತ. ಇನ್ನೊಬ್ಬನ ಬೆಳವಣಿಗೆಯನ್ನು ಸಹಿಸಲಾರದ ಸದಾ ಹೊಟ್ಟೆಕಿಚ್ಚಿನ ಜೀವನ. ಅವನಿಂದಲೂ ಮೇಲಕ್ಕೆ ತಾನು ಹೇಗೆ ಏರುವುದು ಎನ್ನುವುದರ ಚಿಂತೆ. ಹೀಗಿರುವಾಗ ಸಿಕ್ಕ ಸಮಯವನ್ನು ಸಂತೋಷದಿಂದ ಕಳೆಯುವುದನ್ನು ಮರೆಯುತ್ತಾನೆ. ಕೂಡಿಡುವುದರಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಾನೆ.
ಈ ಮಧ್ಯೆ ಸೂರ್ಯೋದಯ ನೋಡುವ, ಸಂಜೆಯ ಸವಿಯನ್ನು ಸವಿಯುವುದಕ್ಕೆ ಸಮಯವಾದರೂ ಎಲ್ಲಿಂದ. ಹಿಂದೆ ರಾತ್ರಿ 9 ಗಂಟೆಗೆ ನಿದ್ದೆಗೆ ಶರಣಾಗುವ, ಬೆಳಗ್ಗೆ 5 ರಿಂದ 6 ಗಂಟೆಯ ಹೊತ್ತಿಗಗಲೇ ಎದ್ದು ಪ್ರಕೃತಿಯ ಜತೆ ಸೇರಿ ಕೆಲಸ ಮಾಡುವ ವಾತಾವರಣ ಈಗಿಲ್ಲ. ಪ್ರಸ್ತುತ ಜನತೆ ನಿದ್ರಾದೇವಿಯ ಮುಖ ನೋಡುವುದೇ ಮಧ್ಯರಾತ್ರಿ. ಇನ್ನು ಮುಂಜಾನೆಯ ಮುಖ ನೋಡುವುದು ಬಿಡಿ, ಕೆಲವರಿಗಂತೂ ಸೂರ್ಯ ನೆತ್ತಿಯ ಮೇಲೆ ಬಂದರೂ ಬೆಳಗಾಗುವುದಿಲ್ಲ. ಹೀಗಿರುವಾಗ ನೆಮ್ಮದಿಯ ಮಾತೆಲ್ಲಿ. ಹಣ ಸಂಪಾದಿಸುವ, ಸಂಪತ್ತು ಕ್ರೋಡೀಕರಣದ ಧಾವಂತವೂ ನಮ್ಮನ್ನು ಸಂತೋಷದಿಂದ ವಿಮುಖರಾಗುವಂತೆ ಮಾಡುತ್ತಿದೆ ಎಂದರೂ ಸುಳ್ಳಲ್ಲ.
ಕೂಡಿಡುವುದೇ ಬದುಕು ಎಂದು ತಿಳಿದುಕೊಂಡರೆ ನಾವು ಕೂಡಿಟ್ಟದ್ದನ್ನು ಉಣ್ಣುವ ಫಲವೂ ನಮ್ಮದಾಗದೆ ಹೋಗಬಹುದು. ಹಾಗಾಗಿ ಇಂದಿನ ಸುಖಗಳನ್ನು ಬದಿಗೆ ತಳ್ಳಿ, ಕಾಣದ ನಾಳೆಗಳಿಗಾಗಿ ಕಾಯುವುದಿದೆಯಲ್ಲ ಅದಕ್ಕಿಂತ ಮೂರ್ಖತನ ಮತ್ತೂಂದಿಲ್ಲ, ನಾಳೆಯ ಚಿಂತೆಯನ್ನು ನಾಳೆಗೆ ಬಿಟ್ಟು ಇದ್ದುದನ್ನು ಅನುಭವಿಸಿಕೊಂಡು ಇಂದಿನ ಖುಷಿಯ ಆಸ್ವಾದನೆಯೇ ಬದುಕಿನ ಪರಮೋಚ್ಚ ಗುಟ್ಟು.ಇದನ್ನು ಅರಿತವ ಬಂಗಾರದ ಬದುಕು ಕಟ್ಟಿಕೊಳ್ಳಬಲ್ಲ.
– ಭುವನ ಬಾಬು,ಪುತ್ತೂರು