ವಿಜಯಪುರ: ಗೆಲುವಿಗೆ ಅಹಂ ಪಡುವವನು ಉಳಿಯಲಾರ, ಸೋತಾಗ ಕುಸಿದು ಕುಂತವನು ಬೆಳೆಯಲಾರ. ಗೆಲುವಿನ ಸಂಭ್ರಮ ನೆತ್ತಗೇರದಿರಲಿ, ಸೋಲಿನ ನೋವು ಮನಸ್ಸಿಗೆ ತಾಕದಿರಲಿ ಎಂದು ಎಕ್ಸ್‌ಲೆಂಟ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ ಕೌಲಗಿ ಹೇಳಿದರು. ನಗರದ ಎಕ್ಸ್‌ಲೆಂಟ್ ಪಪೂ ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ದ್ವಿತೀಯ ಪಿಯು ವಿದ್ಯಾರ್ಥಿಗಳ ಶುಭಕೋರುವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಯತ್ನಿಸದೇ ಸೋಲು ಒಪ್ಪಿಕೊಳ್ಳುವುದು ವಿದ್ಯಾರ್ಥಿಗಳ ಲಕ್ಷಣವಲ್ಲ. ಸಾಧಿಸುವ ಛಲ, ನಿರಂತರ ಓದು, ಸಮಯ ಪ್ರಜ್ಞೆ ಯಶಸ್ಸಿನ ಸೂತ್ರಗಳು. ನಮ್ಮ ಆತ್ಮವಿಶ್ವಾಸ ನಮ್ಮನ್ನು ಉತ್ತುಂಗ ಶಿಖರಕ್ಕೆ ಕೊಂಡೊಯುತ್ತದೆ. ಪರೀಕ್ಷೆಗೆ ಇನ್ನು ಕೆಲವೆ ದಿನ ಬಾಕಿ ಇರುವುದರಿಂದ ಚೆನ್ನಾಗಿ ಓದಿ
ಅರ್ಥೈಸಿಕೊಂಡು ಪರೀಕ್ಷೆ ಬರೆದು ಉತ್ತಮ ಅಂಕಗಳನ್ನು ಪಡೆದು ಕಲಿತ ಸಂಸ್ಥೆಗೂ, ಪಾಲಕರಿಗೂ ಕೀರ್ತಿ ತರಬೇಕು ಎಂದರು.
ಶಿಕ್ಷಣ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಮಾತನಾಡಿ, ನೀವೆಲ್ಲರೂ ಕೂಡಿ ಕಲಿತಿದ್ದು ಸಂತೋಷಕ್ಕೆ ಕಾರಣವಾದರೆ ಮುಂದಿನ ಶಿಕ್ಷಣಕ್ಕೆ ಬೇರೆಡೆ ಹೋಗುವುದು ಅನಿವಾರ್ಯ ಎಂಬ ದುಃಖ. ಜೀವನದಲ್ಲಿ ಸಕಾರಾತ್ಮಕ ವಿಚಾರಗಳನ್ನು ರೂಢಿಸಿಕೊಳ್ಳಬೇಕು.
ಒಂದೇ ಒಂದು ಘಟನೆ, ವಾಕ್ಯ, ಪದ ಕೂಡ ನಮ್ಮ ಬದುಕನ್ನು ಬದಲಾಯಿಸುವ ಶಕ್ತಿ ಹೊಂದಿದೆ ಎಂದರು. 8ನೇ ತರಗತಿಕಲಿತು ಶಾಲೆ ಬಿಟ್ಟು ಸೀರೆ ಮಾರುವ ಕಾರ್ಯವನ್ನು ಮಾಡಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಪ್ರಪಂಚದ ತುಂಬ ಶಾಖೆಗಳನ್ನು ವಿಸ್ತರಿಸಿದ ಮಹಾನ್ ಶಿಕ್ಷಣಪ್ರೇಮಿ ರಾಯಚಂದ್ರರ ಜೀವನ ಎಲ್ಲರಿಗೂ ಸ್ಪೂರ್ತಿ.
ನಿರ್ದೇಶಕ ರಾಜಶೇಖರ ಕೌಲಗಿ ಮಾತನಾಡಿದರು. ಶಿವಾನಂದ ಕಲ್ಯಾಣಿ, ವಿದ್ಯಾರ್ಥಿಗಳಾದ ಸೌಂದರ್ಯ, ಜಯಗೌರಿ, ಪೂಜಾ, ಸೃಜನಾ, ಶ್ವೇತಾ, ಸನ್ಮತಿ, ಅಮೃತಾ, ನಮ್ರಾ, ಭಾಗ್ಯಶ್ರೀ, ಸಲೇಹಾ, ಕುಮಾರ ಭುವನ, ಶಶಾಂಕ, ಪವನ ಅನಿಸಿಕೆಗಳನ್ನು ಹಂಚಿಕೊಂಡರು.
ಖ್ಯಾತ ಕಲಾವಿದ ಮಹಾಂತೇಶ ಹಡಪದ ಅವರಿಂದ ಹಾಸ್ಯೋತ್ಸವ ನಡೆಯಿತು. ಪ್ರಾಚಾರ್ಯ ಡಿ.ಎಲ್. ಬನಸೋಡೆ, ಶ್ರದ್ಧಾ ಜಾಧವ, ಬಾಗೇಶ ಮುರಡಿ, ಸಂದೀಪ ಹಳ್ಳೂರ ಇದ್ದರು .