Advertisement

ವಾಸ್ತು ದೋಷ ನಿವಾರಣೆ ವಿಚಾರದಲ್ಲಿ ಅವಸರ ಬೇಡ…

11:42 AM Nov 13, 2017 | |

ಒಬ್ಬಿಬ್ಬರಲ್ಲ, ನಾಲ್ಕು ಮಂದಿ ವಾಸ್ತು ತಜ್ಞರ ಸಲಹೆ ಪಡೆದು ಮನೆಯನ್ನು ಕಟ್ಟಿಸಲಾಗಿದೆ. ಇನ್ನು ಮುಂದೆ ಸಣ್ಣದೊಂದು ತೊಂದರೆಯೂ ಎದುರಾಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಲು ಸಾಧ್ಯವಿಲ್ಲ. ಜನ್ಮ ಕುಂಡಲಿಯಲ್ಲಿ ದೋಷಗಳಿದ್ದಾಗ ಪರಿತಾಪ ಕಟ್ಟಿಟ್ಟ ಬುತ್ತಿ….
   
ಮುಗಿಲು ಹರಿದು ಬೀಳುತ್ತಿದೆ ಎಂಬುದನ್ನು ಊಹಿಸಿಕೊಂಡು ಅಥವಾ ಊಹಿಸಿಕೊಳ್ಳುತ್ತ ಪರದಾಡುವುದು, ಗೊಂದಲದಲ್ಲಿ ನರಳಾಡುವುದು ಕೆಲವರ ಕ್ರಮ. ನಿಜಕ್ಕೂ ಮುಗಿಲು ಹರಿದು ಬೀಳಲಾರದು. ಬಿದ್ದರೂ ತಿರುಗಿ ಸಂಸ್ಥಾಪಿಸಲು ನೂರಾರು ದಾರಿಗಳು ಇದ್ದೇ ಇವೆ. ಯಾಕೆ ಮುಗಿಲು ಹರಿದು ಬೀಳುವ ಕ್ರಿಯೆ ಪ್ರಸ್ತಾಪಿಸಿದೆನೆಂದರೆ ಕೆಲವರು ತಂತಮ್ಮ ಮನೆಗಳ ವಾಸ್ತು ಸರಿಯಾಗಿಲ್ಲ, ಏನೋ ತೊಂದರೆ ಇರುವುದರಿಂದ ತಮಗೆ ನಿರಂತರವಾಗದ ತೊಂದರೆಗಳು ಜೀವನದಲ್ಲಿ ಎದುರಾಗುತ್ತಿರುತ್ತಲೇ ಇರುತ್ತವೆ ಎಂಬ ನಿರ್ಧಾರಕ್ಕೆ ಬಂದು ತಲುಪುತ್ತಾರೆ. 

Advertisement

ವಾಸ್ತು ಶುದ್ಧತೆ ಮನೆಯ ಮಟ್ಟಿಗೆ ಒಂದು  ಬಹುಮುಖ್ಯ ಅಂಗ ಹೌದಾದರೂ, ಎಲ್ಲವೂ ಅದೇ ಅಲ್ಲ. ಮನೆಯ ವಾಸ್ತು ತೊಂದರೆಗಳಿದ್ದೂ ಸಮೃದ್ಧಿಯಿಂದಲೇ ಜೀವನ ಸಾಗಿಸುತ್ತಿರುವ ಹಲವು ಮಂದಿಯ ಉದಾಹರಣೆಗಳನ್ನು ಕೊಡಬಹದು. ವಾಸ್ತುವನ್ನು ಸರಿಯಾದ ರೀತಿಯಲ್ಲಿ ಪೂರೈಸಿ, ನಿರ್ವಹಿಸಿ, ನಿರ್ದೇಶಿಸಿ ಮನೆ ಕಟ್ಟಿದವರ ಮನೆಯಲ್ಲಿ ಸಮೃದ್ಧಿ ಮತ್ತು ಶಾಂತಿ ನೆಲೆಸಿದೆ ಎಂದು ಅರ್ಥವಲ್ಲ.

ಎಷ್ಟೆಲ್ಲ ಜನ ವಾಸ್ತುವಿನ ವಿಚಾರದಲ್ಲಿ ಹಲವು ತಜ್ಞರನ್ನು ಕರೆಸಿ ಸಲಹೆ ಸೂಚನೆಗಳನ್ನು ಪಡೆದು, ಇದ್ದಿದ್ದನ್ನು ಒಡೆದು, ಪುನರ್‌ರೂಪಿಸಿ, ಆಗೋಡೆ, ಈಗೋಡೆ, ಕಿಟಕಿ, ಜಂತಿಗೆ, ನೆಲದ ಎತ್ತರ, ತಗ್ಗು ದಿನ್ನೆಗಳನ್ನೆಲ್ಲ ಅದಲು ಬದಲಾಗಿಸಿದ ಮೇಲೂ ಒದ್ದಾಡುತ್ತ, ಪರದಾಡುತ್ತ ಬದುಕುತ್ತಿದ್ದಾರೆ. ಈ ಮಾತಿಗೆ ಪ್ರತಿಯೊಂದು ಊರಿನಲ್ಲೂ ಹಲವು ಉದಾಹರಣೆಗಳನ್ನು ನೋಡಬಹುದು. 

ಮುಖ್ಯವಾಗಿ ಮನೆಯಲ್ಲಿನ ವಿಚಿತ್ರ ಇಕ್ಕಟ್ಟು, ಬಿಕ್ಕಟ್ಟುಗಳು ಗೊಂದಲವಾಗುವ ರೀತಿಯಲ್ಲಿರಬಾರದು. ಹಜಾರ, ಅಡುಗೆಮನೆ, ಮಲಗುವ ಮನೆ, ಬಚ್ಚಲು, ಕಕ್ಕಸು ಹಾಗೂ ಪೂಜಾ ಗೃಹಗಳು, ಇನ್ನೇನೇ ಇರುವ ಕೋಣೆ, ಬಾಗಿಲು ಹಾಗೂ ಕಿಟಕಿಗಳು ಒಂದಕ್ಕೊಂದು ಪೂರಕವಾಗಿ, ಒಂದು ಇನ್ನೊಂದರಿಂದ ತೊಂದರೆಗೆ ಒಳಪಡುವ ವಿಚಾರದಲ್ಲಿ ಸಂದಿಗªತೆಗಳನ್ನು ಸೃಷ್ಟಿಸುತ್ತಿರಬಾರದು.  ಕೆಲವರ ಮನೆಗಳನ್ನು ಗಮನಿಸಿದರೆ ಈ ಸಂಗತಿ ನಮ್ಮ ಗಮನಕ್ಕೆ ಬರುತ್ತದೆ.

ಎಲ್ಲೋ ಅಡುಗೆ ಮನೆ, ತಾಗಿಯೇ ಇನ್ನೇನೋ ಒಂದು, ಎಲ್ಲೋ ಹರಡಿ, ಗುಪ್ಪೆ ಹಾಕಿದ ತ್ಯಾಜ್ಯಗಳು, ಹಳೆಯ ವಸ್ತುಗಳು, ಕುಳಿತಲ್ಲಿಂದ ಶುಭ್ರವಾದುದನ್ನು ನೋಡಲಾಗದ ಹಜಾರ, ಮಲಗುವ ಕೋಣೆಯಲ್ಲೂ ಎಲ್ಲಾ ಅಸ್ತವ್ಯಸ್ತ. ಹೀಗೆ ಮನಸ್ಸಿಗೆ ಭಾರವಾಗುವ ಹಾಗೆ ಎಲ್ಲಾ ಚಲ್ಲಾಪಿಲ್ಲಿಯಾಗಿರುತ್ತದೆ. ಕೆಲವು ಮನೆಗಳಲ್ಲಂತೂ ಒಮ್ಮೊಮ್ಮೆ ಕಾಲಿಡಲು ಜಾಗವೇ ಇರುವುದಿಲ್ಲ. ಬಚ್ಚಲ ನೀರು ಮನೆಯ ಇತರೆಡೆ ಕೂಡ ಚಿಮ್ಮಿ, ಸೋರಿ, ಹರಿದು ಬಂದು ಬಿಡುವಂಥ ಅವಸ್ಥೆ ಇರುತ್ತದೆ.  ಆದಷ್ಟು ಇವುಗಳನ್ನು ತಪ್ಪಿಸಬೇಕು. 

Advertisement

ಇನ್ನು ನಮ್ಮ, ನಮ್ಮ ಜನ್ಮ ಕುಂಡಲಿಯಲ್ಲಿನ ತಾಪತ್ರಯಗಳು ಮನಃಶಾಂತಿ ಸಿಗದ ವಿಷಮ ಪರಿಸ್ಥಿತಿಯನ್ನು ನಿರ್ಮಿಸಬಹುದು. ಬಹು ಸುಸಜ್ಜಿತ, ವಾಸ್ತುವಿನ ಅಂಶಗಳನ್ನು ಗಮನಿಸಿ ಹೇಳುವುದಾದರೆ ಸಕಲಕಲಾವಲ್ಲಭ ಸೂಕ್ಷ್ಮ ಒಗ್ಗೂಡಿದರೂ, ಜನ್ಮ ಕುಂಡಲಿಯಲ್ಲಿ ದೋಷಗಳಿದ್ದಾಗ ಪರಿತಾಪಗಳು ಕಟ್ಟಿಟ್ಟ ಬುತ್ತಿ. ವಾಸ್ತು ಸಮತೋಲನ ಇಲ್ಲಿ ಉಪಯೋಗಕ್ಕೆಬಾರದು.  ಉದಾಹರಣೆಗೆ- ಗುಲ್ಬರ್ಗದ ಕಡೆಯ ಕಲಾವಿದರೊಬ್ಬರು.

ಮನೆಯ, ಮನೆತನದ ಲಾಗಾಯ್ತಿನ ಕೀರ್ತಿ, ವರ್ಚಸ್ಸು ಎಲ್ಲವೂ ಇದ್ದವರು. ಅವರು ಹೊಸ ಮನೆಯೊಂದನ್ನು  ವಾಸ್ತುವಿನ ವಿಚಾರದಲ್ಲಿ ಅತ್ಯದ್ಬುತವಾದ ರೀತಿಯಲ್ಲಿ ಕಟ್ಟಿ ಮುಗಿಸಿದರು. ಆದರೆ ಮನೆಯ ಪ್ರವೇಶದ ದಿನವೇ ದುರ್ದೈವ ಕಾದಿತ್ತು. ಇವರ ಪತ್ನಿ ವಿದ್ಯುತ್‌ ಶಾಕ್‌ ಹೊಡೆದು ಅಸುನೀಗಿದರು. ಇಲ್ಲಿ ದೋಷ ವಾಸ್ತುವಿನ ತೊಂದರೆಯಲ್ಲಿದ್ದಿರಲಿಲ್ಲ. ಪತ್ನಿಗೆ ಶುಕ್ರಾದಿತ್ಯ ಸಂಧಿ ದೋಷ ಇತ್ತು.

ದುರ್ಮರಣವು ಹೊಸ ಮನೆಯ ಸಂಭ್ರಮದ ಕ್ಷಣದಲ್ಲಿ ತಾನು ಕಾಲಿರಿಸಿ, ಸುಂದರವಾದ ಆ ಮನೆಯಲ್ಲಿ ಯಜಮಾನರ ಪತ್ನಿಯ ಕೊರಳಿಗೆ ಉರುಳು ಹಾಕಿತ್ತು. ಕ್ರೂರ ವಿಧಿಗೆ, ವಾಸ್ತು ಕಾರಣವಾಗಿರಲಿಲ್ಲ ಎಂದು ತಿಳಿಸಲು ಈ ಉದಾಹರಣೆ, ಅಷ್ಟೇ. ವಾಸ್ತುವನ್ನು ಸಮರ್ಪಕತೆಗಾಗಿ ಅನುಸರಿಸಿ. ಆದರೆ ಅವಸರ ಬೇಡ. ದುಬಾರಿಯಾದ ಖರ್ಚು ಬೇಡ.  

* ಅನಂತಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next