ಬೆಳಗಾವಿ: ಜಿಲ್ಲೆಯಲ್ಲಿರುವ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಕುರಿತ ಮಾಹಿತಿ ಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಕೆ.ಎಂ. ಚಂದ್ರೇಗೌಡ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಾರ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಮಾಹಿತಿ ಹಕ್ಕು ಕಾಯ್ದೆಯ ಕುರಿತು ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾಹಿತಿ ಹಕ್ಕು ಕಾಯ್ದೆಯ ಕುರಿತು ಎಲ್ಲ ಅಧಿಕಾರಿಗಳು ತಿಳಿದುಕೊಳ್ಳಬೇಕು. ಆರ್‌ಟಿಐ ಅಡಿ ಅರ್ಜಿ ಸಲ್ಲಿಕೆಯಾದ ತಕ್ಷಣ ಅಧಿಕಾರಿಗಳು ಭಯ ಪಡುವ ಅಗತ್ಯವಿಲ್ಲ. ಪ್ರತಿದಿನ ಕಚೇರಿಗೆ ತೆರಳಿದ ತಕ್ಷಣ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲಿಸಬೇಕು ಎಂದರು. ಈ ಅರ್ಜಿಗಳನ್ನು ಸರಿಯಾಗಿ ಸಂಗ್ರಹಿಸಿಟ್ಟು, ಬೇಗನೆ ಮಾಹಿತಿ ಒದಗಿಸಬೇಕು. ಉತ್ತರ ನೀಡಲು ಆಗದಂತಹ ಪ್ರಶ್ನೆಗಳಿದ್ದರೆ ಅದರ ಬಗ್ಗೆಯೂ ವಿಳಂಬ ಮಾಡದೇ ಅರ್ಜಿದಾರರಿಗೆ ತಿಳಿಸಬೇಕು ಎಂದು ಹೇಳಿದರು.
ಅರ್ಜಿದಾರರಿಗೆ ಉತ್ತರ ನೀಡುವಾಗ ಮಾಹಿತಿ ಸಂಗ್ರಹಿಸಲು ಹಾಗೂ ಝರಾಕ್ಸ್ ಪ್ರತಿಗಳಿಗೆ ತಗುಲಿದ ವೆಚ್ಚವನ್ನು ಪಡೆಯಬಹುದು. ರಜೆದಿನ ಸೇರಿ 30 ದಿನಗಳೊಳಗಾಗಿ ಉತ್ತರ ನೀಡಬೇಕು. 3 ತಿಂಗಳಲ್ಲಿ ಮಾಹಿತಿ ಕೊಡದಿದ್ದರೆ ಅರ್ಜಿದಾರರಿಗೆ ಉಚಿತವಾಗಿ ಮಾಹಿತಿ ಒದಗಿಸಬೇಕಾಗುತ್ತದೆ. ಆಗ ಅಧಿಕಾರಿಗಳ ವೇತನದಲ್ಲಿನ ಹಣ ಕಡಿತಗೊಳಿಸಬೇಕಾಗುತ್ತದೆ ಎಂದು ಹೇಳಿದರು.
ಅರ್ಜಿಗಳ ಪರಿಶೀಲನೆ: ವಿವಿಧ ಇಲಾಖೆಗಳಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಆಯುಕ್ತರು ಪರಿಶೀಲಿಸಿ, ಪರಿಹಾರ ಸೂಚಿಸಿದರು. ಕೆಲವು ಇಲಾಖೆಯ ಅಧಿಕಾರಿಗಳಿಗೆ ಶೀಘ್ರ ಮಾಹಿತಿ ಒದಗಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಮಾತನಾಡಿ, ಮಾಹಿತಿ ಹಕ್ಕು ಕುರಿತು ಅಧಿಕಾರಿಗಳು ಭಯಪಡುವ ಅಗತ್ಯವಿಲ್ಲ. ಅರ್ಜಿಗಳಿಗೆ ಉತ್ತರ ನೀಡಲು ಅನಗತ್ಯ ವಿಳಂಬ ಮಾಡುವ ಬದಲು ತಮ್ಮ ಕಚೇರಿಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಸೂಕ್ತ ರೀತಿಯಲ್ಲಿ ಸಂಗ್ರಹಿಸಿ ಬೇಗ ಉತ್ತರ ಒದಗಿಸಬೇಕು ಎಂದು ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಎಚ್.ಬಿ. ಬೂದೆಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೇಖರ್. ಎಚ್.ಟಿ ಉಪಸ್ಥಿತರಿದ್ದರು. ಉಪವಿಭಾಗಾಧಿಕಾರಿ ಕವಿತಾ ಯೋಗಪ್ಪನವರ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎನ್. ಮುನಿರಾಜು ಅಗತ್ಯ ಮಾಹಿತಿ ನೀಡಿದರು.
ಬೆಳಗಾವಿ: ಜಿಲ್ಲಾಧಿಕಾರಿ ಕಚೇರಿ ಸಭಾಭನವದಲ್ಲಿ ಶುಕ್ರವಾರ ಮಾಹಿತಿ ಹಕ್ಕು ಕಾಯ್ದೆಯ ಕುರಿತು ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ರಾಜ್ಯ ಮಾಹಿತಿ ಆಯೋಗದ ಆಯುಕ್ತ ಕೆ.ಎಂ. ಚಂದ್ರೇಗೌಡ ಮಾತನಾಡಿದರು.