ಶಿವಯೋಗ ಮಂದಿರ (ಬಾಗಲಕೋಟೆ): “”ವೀರಶೈವ ಲಿಂಗಾಯತ ಸಮುದಾಯವನ್ನು ಹಿಂದೂ ಧರ್ಮದಿಂದ ಒಡೆಯಲು ಬಿಡುವುದಿಲ್ಲ. ಹೆದರಬೇಡಿ, ಬಿಜೆಪಿ ಧರ್ಮ ಒಡೆಯಲು ಅವಕಾಶ ಕೊಡುವುದಿಲ್ಲ” ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ನಡೆದ ವೀರಶೈವ ಲಿಂಗಾಯತ ಮಠಾಧಿಪತಿಗಳ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, “ಹಿಂದಿನ ಪ್ರಧಾನಿಗಳು ದೇಗುಲಕ್ಕೆ ಬರಲು ಹಿಂದೇಟು ಹಾಕುತ್ತಿದ್ದರು. ಮೋದಿ ಸರಕಾರ ದೃಷ್ಟಿಕೋನ ಬದಲಿಸುವ ಕೆಲಸ ಮಾಡಿದೆ. ಹೀಗಾಗಿ ಯಾರೂ ಅಂಜಬೇಕಿಲ್ಲ. ವೀರಶೈವ ಲಿಂಗಾಯತ ಒಡೆಯಲು ಬಿಡುವುದಿಲ್ಲ. ನಮ್ಮ ಮೇಲೂ ಜವಾ ಬ್ದಾರಿ ಇದೆ. ನಾನು ರಾಜಕೀಯ ಮಾಡಲು ಇಲ್ಲಿಗೆ ಬಂದಿಲ್ಲ. ಸಂತರ ಆಶೀರ್ವಾದ ಪಡೆಯಲು ಬಂದಿದ್ದೇನೆ’ ಎಂದು ಹೇಳಿದರು.
ಸಭೆಗೂ ಮುನ್ನ, ಪ್ರತ್ಯೇಕ ಧರ್ಮ ಮಾನ್ಯತೆಗೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿರುವ ವೀರಶೈವ ಲಿಂಗಾಯತ ಮಠಾಧಿಪತಿಗಳು, ಅಮಿತ್ ಶಾ ಅವರಿಗೆ ರಾಜ್ಯ ಸರಕಾರದ ಶಿಫಾರಸು ತಿರಸ್ಕರಿಸುವಂತೆ ಹಕ್ಕೊತ್ತಾಯ ಮಂಡಿಸಿದರು. ಜತೆಗೆ ವೀರಶೈವ ಲಿಂಗಾಯತರನ್ನು ಒಬಿಸಿಗೆ ಸೇರಿಸಲು ಮನವಿ ಮಾಡಿಕೊಂಡರು.
ಬಾದಾಮಿ ತಾಲೂಕು ಶಿವಯೋಗ ಮಂದಿರದಲ್ಲಿ ಮಂಗಳವಾರ ರಾಷ್ಟ್ರೀಯ ವೀರಶೈವ ಮಠಾಧೀಶರ ಪರಿಷತ್ ನೇತೃತ್ವದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ವಿವಿಧ ಜಗದ್ಗುರುಗಳು ಹಾಗೂ ಸ್ವಾಮೀಜಿಗಳ ಸಭೆಯಲ್ಲಿ ಪಂಚಪೀಠಗಳ ಪೈಕಿ ಭಾಗಿಯಾಗಿದ್ದ ಕಾಶೀ ಪೀಠದ ಡಾ|ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲದ ಶ್ರೀ ಚೆನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ, ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಶ್ರೀ ಹಾಗೂ ಶಿವಯೋಗ ಮಂದಿರದ ಅಧ್ಯಕ್ಷ ಡಾ| ಸಂಗನಬಸವ ಶ್ರೀಗಳು ಅಮಿತ್ ಶಾ ಅವರಿಗೆ ಯಾವುದೇ ಕಾರಣಕ್ಕೂ ಧರ್ಮ ವಿಭಜನೆಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.
ಸಿದ್ದರಾಮಯ್ಯ ತಮ್ಮನ್ನು ತಾವು “ಅಹಿಂದ’ ನಾಯಕ ಎಂದು ಹೇಳಿ ಕೊಳ್ಳುತ್ತಾರೆ. ಆದರೆ, ಅವರಿಗೆ ಕಾಳಜಿ ಇರುವುದು ಅಲ್ಪಸಂಖ್ಯಾಕರ ಬಗ್ಗೆ ಮಾತ್ರ. ಹಿಂದುಳಿದ ವರ್ಗದವರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದಿದ್ದಾರೆ ಅಮಿತ್ ಶಾ. ಹಾವೇರಿಯ ಕಾಗಿನೆಲೆಯಲ್ಲಿ ನಡೆದ ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು. “”ಯಡಿಯೂರಪ್ಪ ಸರಕಾರ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗದವರಿಗೆ ನ್ಯಾಯ, ಗೌರವ ಕೊಡುವ ಕೆಲಸ ಮಾಡುತ್ತದೆ. ಹಿಂದುಳಿದ ವರ್ಗದವರಿಗೆ ಸಂವಿಧಾನಬದ್ಧ ಹಕ್ಕು ತಂದು ಕೊಡುವ ಮಸೂದೆಯನ್ನು ಬಿಜೆಪಿ ಮಂಡಿಸಿದೆ. ಕಾಂಗ್ರೆಸ್ ಎಷ್ಟೇ ವಿರೋಧ ಮಾಡಿದರೂ ಹಿಂದುಳಿದ ವರ್ಗದವರಿಗೆ ಅನುಕೂಲವಾಗುವ ಆ ಮಸೂದೆಯನ್ನು ಸಂಸತ್‌ನ ಎರಡೂ ಸದನಗಳಲ್ಲಿ ಪಾಸ್ ಮಾಡಿ ಕಾನೂನು ಮಾಡುತ್ತೇವೆ ಎಂದು ಶಾ ಹೇಳಿದರು.