ಉಡುಪಿ/ಮಂಗಳೂರು: ಕಳೆದೆರಡು ದಿನಗಳಿಂದ ಮೀನಿಗೆ ರಾಸಾಯನಿಕ ಪದಾರ್ಥಗಳನ್ನು ಮಿಶ್ರ ಮಾಡಲಾಗುತ್ತಿದೆ ಎನ್ನುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ಘಟನೆಗೂ ಮಹಿಳಾ ಮೀನು ಮಾರಾಟಗಾರರಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಆದುದರಿಂದ ಗ್ರಾಹಕರು ಈ ಹಿಂದಿನಂತೆ ಮೀನನ್ನು ಖರೀದಿಸಿ ಸೇವಿಸಬಹುದು. ಅಲ್ಲದೆ ಈ ಬಗ್ಗೆ ಯಾವುದೇ ಗೊಂದಲ, ಆತಂಕಕ್ಕೆ ಒಳಪಡುವ ಅಗತ್ಯವಿಲ್ಲ ಎಂದು ದ.ಕ., ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಎ.ಸುವರ್ಣ ತಿಳಿಸಿದ್ದಾರೆ.
ಹಲವಾರು ಶತಮಾನಗಳಿಂದ ಮಹಿಳಾ ಮೀನು ಮಾರಾಟಗಾರರು ತಮ್ಮ ಸಾಂಪ್ರದಾಯಿಕ ಕಸುಬಾದ ಮೀನು ಮಾರಾಟ ವೃತ್ತಿಯನ್ನು ನಡೆಸಿಕೊಂಡು ಬರುತ್ತಿದ್ದು, ಮೀನಿಗೆ ಯಾವುದೇ ರಾಸಾಯನಿಕಗಳನ್ನು ಬಳಸದೆ ತಾಜಾ ಮೀನನ್ನು ನೇರವಾಗಿ ಮೀನುಗಾರರಿಂದ ಗ್ರಾಹಕರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿ ಗ್ರಾಹಕರ ವಿಶ್ವಾಸ ಗಳಿಸಿದ್ದಾರೆ.
ಇತ್ತೀಚೆಗೆ ಕೇರಳ ರಾಜ್ಯದ ವಿವಿಧೆಡೆ ಆಹಾರ ಸುರಕ್ಷತಾ ಇಲಾಖೆ ದಾಳಿ ನಡೆಸಿದಾಗ ಕೆಲವು ಮಾಲ್ ಮತ್ತು ಮಳಿಗೆಗಳಲ್ಲಿ ಮಾತ್ರ ಮೀನನ್ನು ಸಂರಕ್ಷಿಸಿಡಲು ಹಾನಿಕಾರಕ ಫಾರ್ಮಾಲಿನ್ ರಾಸಾಯನಿಕವನ್ನು ಬಳಕೆ ಮಾಡಿದ್ದು, ಇಂತಹ ಸುಮಾರು 6 ಸಾವಿರ ಕೆಜಿ ಮೀನನ್ನು ವಶಪಡಿಸಿಕೊಂಡು ಕೇರಳದಲ್ಲಿ ಈ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಮಾರುಕಟ್ಟೆಗಳಲ್ಲಿ ಮೀನು ಮಾರಾಟಗಾರರು ಎಂದಿನಂತೆ ಗ್ರಾಹಕರಿಗೆ ಮೀನನ್ನು ಒದಗಿಸುತ್ತಿದ್ದಾರೆ. ಈಗಾಗಲೇ ಮತ್ಸಕ್ಷಾಮ,ವದಂತಿಗಳಿಂದ ತೀವ್ರ ತೊಂದರೆಗೊಳಗಾದ ಮೀನುಗಾರರಿಗೆ ಸೂಕ್ತ ನ್ಯಾಯ ಒದಗಿಸಿ, ಹಾನಿಕಾರಕ ರಾಸಾಯನಿಕ ಬಳಸುವವರ ವಿರುದ್ಧ ಕಠಿನ ಕ್ರಮಕೈಗೊಂಡು ಮತ್ಸ
ಗ್ರಾಹಕರಲ್ಲಿರುವ ಗೊಂದಲಗಳನ್ನು ಪರಿಹರಿಸಬೇಕೆಂದು ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.