Advertisement

ಜುಲೈವರೆಗೆ ಕುಡಿವ ನೀರಿನ ಭಯಬೇಡ

03:55 PM May 22, 2018 | Team Udayavani |

ಬಳ್ಳಾರಿ: ನಗರದ ಶಾಸಕ ಜಿ.ಸೋಮಶೇಖರರೆಡ್ಡಿ ಅವರು ಶಾಸಕರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ನಗರಕ್ಕೆ ಕುಡಿವ ನೀರು ಪೂರೈಸುವ ಅಲ್ಲೀಪುರ ಕೆರೆಗೆ ಸೋಮವಾರ ಭೇಟಿ ನೀಡಿ, ನೀರಿನ ಮಟ್ಟವನ್ನು ಪರಿಶೀಲನೆ ನಡೆಸಿದರು.

Advertisement

ಅಲ್ಲೀಪುರ ಮತ್ತು ಮೋಕಾ ಕೆರೆಯಲ್ಲಿ ಸದ್ಯ ಎಷ್ಟು ಮೀಟರ್‌ ನೀರು ಸಂಗ್ರಹವಿದೆ. ನಗರಕ್ಕೆ ಮುಂದಿನ ಎಷ್ಟು ದಿನಗಳವರೆಗೆ ನೀರು ಸರಬರಾಜು ಮಾಡಬಹುದು ಎಂಬುದನ್ನು ನಗರ ನೀರು ಸರಬರಾಜು ಇಲಾಖೆ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕ ಜಿ.ಸೋಮಶೇಖರರೆಡ್ಡಿಯವರು, 24×7 ಕುಡಿವ ನೀರು ಪೂರೈಸುವ ಯೋಜನೆ ವಿಳಂಬಕ್ಕೆ ಏನು ಕಾರಣ ಎಂಬುದನ್ನು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಪೂರ್ವ ಪ್ರಚಾರದ ವೇಳೆ ಮಹಿಳೆಯರಿಗೆ ಕೊಟ್ಟ ಮಾತಿನಂತೆ ನಗರಕ್ಕೆ ಕುಡಿವ ನೀರು ಪೂರೈಸುವ ಅಲ್ಲೀಪುರ ಕೆರೆಗೆ ಮೊದಲು ಭೇಟಿ ನೀಡಿದ್ದೇನೆ. ನಗರಕ್ಕೆ ಸಮರ್ಪಕ ಕುಡಿವ ನೀರು ಪೂರೈಸುವ ಅಲ್ಲೀಪುರ ಕೆರೆಯಲ್ಲಿ ಸದ್ಯ 3.9 ಮೀಟರ್‌ ಕುಡಿವ ನೀರು ಸಂಗ್ರಹವಿದೆ.
 
ಮೋಕಾ ಕೆರೆಯಲ್ಲಿ 45 ದಿನಗಳಿಗೆ ಆಗುವಷ್ಟು ನೀರು ಸಂಗ್ರಹಿಸಲಾಗಿದೆ. ಇದರ ಜತೆಗೆ ತುಂಗಭದ್ರಾ ಜಲಾಶಯದಲ್ಲಿ ಕುಡಿವ ನೀರು ಸಲುವಾಗಿ 1 ಟಿಎಂಸಿ ನೀರನ್ನು ಮೀಸಲಿಡಲಾಗಿದೆ. ಹೀಗಾಗಿ ಮುಂದಿನ ಜುಲೈ ತಿಂಗಳವರೆಗೆ ನಗರದಲ್ಲಿ ಕುಡಿವ ನೀರಿನ ಸಮಸ್ಯೆಯಾಗದೆ ಸಮರ್ಪಕವಾಗಿ ಪೂರೈಸಬಹು ಎಂದು ತಿಳಿಸಿದರು. ಮುಂದಿನ ಜುಲೈ ತಿಂಗಳವರೆಗೆ ನಗರಕ್ಕೆ ಕುಡಿವ ನೀರು ಪೂರೈಸಲು ನೀರಿದೆಯಾದರೂ, ಸರಬರಾಜು ಮಾತ್ರ ಸಮರ್ಪಕವಾಗಿ ನಡೆಯುತ್ತಿಲ್ಲ.

ಬಲ್ಕ್ ವಾಟರ್‌ ನೀರು ಪೂರೈಕೆ ಸರಿಯಾಗಿದೆ. ಸದ್ಯ ಒಂಭತ್ತು ದಿನಕ್ಕೊಮ್ಮೆ ಕುಡಿವ ನೀರು ಪೂರೈಸಲಾಗುತ್ತಿದೆ. ಆದರೆ, ಅದನ್ನು ಐದು ದಿನಕ್ಕೊಮ್ಮೆಯಾದರೂ ನೀರು ಸರಬರಾಜು ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. 

ನಗರಕ್ಕೆ ದಿನದ 24 ಗಂಟೆ ನೀರು ಪೂರೈಸುವ 24×7 ಕುಡಿವ ನೀರಿನ ಯೋಜನೆ ವಿಳಂಬವಾಗುತ್ತಿದೆ. 68 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗೆ ಈಗಾಗಲೇ 33 ಕೋಟಿ ರೂ.ಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಇನ್ನುಳಿದ ಅನುದಾನ ಹಾಗೆ ಉಳಿದಿದೆ. ಕಾಮಗಾರಿ ಪೂರ್ಣಗೊಳ್ಳಬೇಕಿದ್ದ ಅವಧಿಯೂ 2017ಕ್ಕೆ ಪೂರ್ಣಗೊಂಡಿದ್ದು, ಇದೀಗ ಪುನಃ 2018 ಡಿಸೆಂಬರ್‌ ತಿಂಗಳೊಳಗಾಗಿ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ.

Advertisement

ಆದರೆ, ಕಾಮಗಾರಿ ವಿಳಂಬಕ್ಕೆ ಕಾರಣವೇನು ಎಂಬುದನ್ನು ಗುತ್ತಿಗೆದಾರರು, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆಯಲಾಗುವುದು. ಸದ್ಯ ಇರುವ ಗುತ್ತಿಗೆದಾರರು ಕಾಮಗಾರಿಯನ್ನು ಪೂರ್ಣಗೊಳಿಸುವ ಇಚ್ಛಾಶಕ್ತಿ ಹೊಂದಿದ್ದರೆ, ಮುಂದುವರೆಸಲಾಗುವುದು. ಒಂದು ವೇಳೆ ಕಾಮಗಾರಿಯನ್ನು ಅರ್ಧಕ್ಕೆ ಮೊಟಕುಗೊಳಿಸಿದರೆ, ನಗರಾಭಿವೃದ್ಧಿ ಇಲಾಖೆ ಸಚಿವರಿಗೆ ದೂರು ನೀಡಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಎಸ್‌.ಮಲ್ಲನಗೌಡ, ಶ್ರೀನಿವಾಸ್‌ ಮೋತ್ಕರ್‌, ಪಾಲಿಕೆ ಅಧಿಕಾರಿಗಳಾದ ತಿಮ್ಮಪ್ಪ, ಈರಣ್ಣ, ಭೀಮಣ್ಣ ಇನ್ನಿತರರಿದ್ದರು.

ಗುತ್ತಿಗೆದಾರರಿಗೆ ನೋಟಿಸ್‌ ಜಾರಿ 24×7 ಕುಡಿವ ನೀರಿನ ಯೋಜನೆ ಕೈಗೆತ್ತಿಕೊಂಡಿರುವ ಗುತ್ತಿಗೆದಾರರು 2017 ಆಗಸ್ಟ್‌ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಕೇವಲ ಶೇ.35 ರಷ್ಟು ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಪರಿಣಾಮ ಅವರಿಗೆ ಪೆನಾಲ್ಟಿ ಹಾಕಿ ನೋಟಿಸ್‌ ಜಾರಿ ಮಾಡಲಾಗಿದೆ. 2018 ಡಿಸೆಂಬರ್‌ ತಿಂಗಳೊಳಗೆ 28 ಜೋನ್‌ ಕಾಮಗಾರಿ ಪೂರ್ಣಗೊಳಿಸುವುದಾಗಿ ಗಡುವು ಕೋರಿರುವ ಗುತ್ತಿಗೆದಾರರು ಈಗಾಗಲೇ 10 ಜೋನ್‌ ಕಾಮಗಾರಿ ಪೂರ್ಣಗೊಳಿಸಿದ್ದಾರೆ ಎಂದು ಪಾಲಿಕೆಯ ಎಕ್ಸಿಕ್ಯೂಟಿವ್‌ ಇಂಜಿನೀಯರ್‌ ಖಾಜಾ ಮೊಹಿನುದ್ದೀನ್‌ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next