Advertisement

ಮಹನೀಯರನ್ನು ಜಾತಿ ಜೈಲಲ್ಲಿ ಬಂಧಿಸಬೇಡಿ

11:32 AM Oct 24, 2018 | |

ಮೈಸೂರು: ಸರ್ಕಾರದ ವತಿಯಿಂದ ಆಚರಿಸಲಾಗುವ ಎಲ್ಲಾ ಜಯಂತಿಗಳು ಜಾತಿಗಳಿಗೆ ಸೀಮಿತಗೊಳಿಸಿರುವ ಪರಿಣಾಮ ಹಲವು ಮಹನೀಯರು ಜಾತಿಯನ್ನು ಮೀರಿ ಬೆಳೆಯಲು ಬಿಟ್ಟಿಲ್ಲ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ವಿಷಾದ ವ್ಯಕ್ತಪಡಿಸಿದರು. 

Advertisement

ಕುವೆಂಪು ಕಾವ್ಯಾಧ್ಯಯನ ಪೀಠ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ “ಕುವೆಂಪು ಸಾಹಿತ್ಯ-ಸಾಂಸ್ಕೃತಿಕ ಅನುಸಂಧಾನ’ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಸರ್ಕಾರಗಳು ಜಾತಿ ಜಯಂತಿಗಳನ್ನು ಮಾಡುತ್ತಿದ್ದು, ವಾಲ್ಮೀಕಿ, ಅಂಬೇಡ್ಕರ್‌, ಕನಕದಾಸರಂತಹ ದೊಡ್ಡ ದೊಡ್ಡ ವ್ಯಕ್ತಿಗಳನ್ನು ಜಾತಿಯ ಜೈಲುಗಳಲ್ಲಿ ಬಂಧಿಸುತ್ತಿದ್ದೇವೆ ಎಂದರು.

ಇದರಿಂದಾಗಿ ಅನೇಕ ದೊಡ್ಡ ವ್ಯಕ್ತಿಗಳನ್ನು ಜಾತಿಯನ್ನು ಮೀರಿ ಬೆಳೆಯಲು ಬಿಟ್ಟಿಲ್ಲ. ಆದರೆ ಕುವೆಂಪು ಅವರು ಸಾಹಿತ್ಯ ಕ್ಷೇತ್ರದಲ್ಲಿದ್ದರು, ಅದನ್ನು ಮೀರಿದ ದೊಡ್ಡ ಸಾಂಸ್ಕೃತಿಕ ವ್ಯಕ್ತಿತ್ವ ಹೊಂದಿದ್ದರು. ಅವರೊಳಗೆ ಸಾಮಾಜಿಕ ವ್ಯಕ್ತಿತ್ವ ನಿರಂತರವಾಗಿ ಕೆಲಸ ಮಾಡುತ್ತಿದ್ದು, ಸಂಸ್ಕೃತಿ ಮತ್ತು ಸಮಾಜದ ಜತೆಗೆ ಸಂಬಂಧ ಕಲ್ಪಿಸಿದ ಸೃಜನಶೀಲತೆ, ಚಿಂತನಶೀಲತೆ ಎರಡನ್ನೂ ಒಟ್ಟಿಗೆ ನಿರ್ವಹಿಸಿದ ಆಧುನಿಕ ಕನ್ನಡ ಸಾಹಿತ್ಯದ ಚಿಂತನಾ ಶಿಖರ ಕುವೆಂಪು ಅವರಾಗಿದ್ದು, ಅವರನ್ನು ರಮ್ಯತೆಯ ಶಿಖರವೆಂದು ಕರೆದವರೂ ಇದ್ದಾರೆ ಎಂದರು. 

ಸಾಂಕೇತಿಕ ಪೀಠಗಳು: ಇತ್ತೀಚಿನ ದಿನಗಳಲ್ಲಿ ವಿವಿಗಳಲ್ಲಿರುವ ಪೀಠಗಳನ್ನು ಸ್ಥಾಪಿಸಿ ಒಂದಷ್ಟು ಲಕ್ಷ ಹಣವಿಟ್ಟು ಅದರ ಬಡ್ಡಿಯಲ್ಲಿ ಕೆಲಸ ಮಾಡಿಕೊಂಡು ಹೋಗಿ ಎನ್ನುತ್ತಾರೆ. ಸಾಲದ ಹೊರೆಯಲ್ಲಿ ನರಳುತ್ತಿರುವ ಭಾರತದಲ್ಲಿ ಬಡ್ಡಿ ಮತ್ತು ಬಡ್ಡಿಮಕ್ಕಳು ಪ್ರಜೆಗಳು. ದೇಶದ ಆರ್ಥಿಕ ಸ್ಥಿತಿ, ಸಾಮಾಜಿಕ ಸಂರಚನೆಗೆ ಅನುಗುಣವಾಗಿ ಪೀಠಗಳು ಅದೇ ಸ್ವರೂಪ ಪಡೆದುಕೊಂಡಿವೆ.

ವಿವಿಗಳಿಗೆ ವಿಧಿಯಿಲ್ಲದೆ ಪೀಠಗಳನ್ನು ಸ್ಥಾಪಿಸಲಿದ್ದು, ಈ ಪೀಠಗಳು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತವೆ ಎಂಬ ಪ್ರಶ್ನೆಯನ್ನು ನಾವು ಕೇಳಿಕೊಳ್ಳುತ್ತಿಲ್ಲ. ಇದರಿಂದ ಅಧ್ಯಯನ ಪೀಠಗಳು ಪುನರ್ವಸತಿ ಕೇಂದ್ರಗಳಾಗದೆ ಅದಕ್ಕೊಂದು ಸಾರ್ಥಕತೆ ಬರಬೇಕಿದೆ. ಈ ನಿಟ್ಟಿನಲ್ಲಿ ಯಾರ ಹೆಸರಿನಲ್ಲಿ ಪೀಠಗಳನ್ನು ಸ್ಥಾಪಿಸಲಾಗುತ್ತದೆಯೋ ಅವರಿಗೆ ಗೌರವ ತರುವಂತಹ ಚರ್ಚೆ, ಚಿಂತನೆಗಳು ನಡೆಯಬೇಕು ಎಂದು ಹೇಳಿದರು. 

Advertisement

ವಿಭಜಿತ ಓದು ಅಪಾಯ: ವಿಮರ್ಶೆ ಪೂರ್ವಾಗ್ರಹಗಳಿಂದ ನಮ್ಮ ಮೊದಲ ತಲೆಮಾರಿನ ದೊಡ್ಡ ಲೇಖಕರೂ ಸಹ ವಿಮೋಚನೆಗೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಪರ- ವಿರೋಧದ ನೆಲೆಯಲ್ಲಿ ನಿಂತುಕೊಳ್ಳುವುದು ವಿಮರ್ಶೆಯ ಕೆಲಸ ಅಲ್ಲ. ವಿಮರ್ಶೆ ಅರ್ಥೈಸಿಕೊಳ್ಳುವ ಮತ್ತು ಅರ್ಥೈಸಿಕೊಡುವ ಕೆಲಸ ವಿಮರ್ಶೆಯದು.

ವ್ಯಾಖ್ಯಾನ ಮಾಡಬೇಕು ಅಗತ್ಯವಿದ್ದಾಗ ತೀರ್ಮಾನಿಸಬೇಕು. ಅದನ್ನು ಬಿಟ್ಟು ನಾವು ಆಡಳಿತ-ವಿರೋಧ ಪಕ್ಷಗಳಂತೆ ವಿಂಗಡಣೆಯಂತೆ ನಮ್ಮ ಮನಸ್ಸು ವಿಭಜಿತಗೊಳ್ಳುವುದಾದರೆ, ಸಾಹಿತ್ಯದ ಓದು ಕೂಡ ವಿಭಜನೆಗೊಳ್ಳಲಿದ್ದು, ವಿಭಜಿತ ಓದು ಯಾವತ್ತೂ ಅಪಾಯಕಾರಿ ಎಂದರು. 

ಸಮಾರಂಭದಲ್ಲಿ ಮೈಸೂರು ವಿವಿ ಪ್ರಭಾರ ಕುಲಪತಿ ಪೊ›.ಆಯಿಷಾ ಶರೀಫ್, ಕವಿ ಪೊ›.ರಾಮೇಗೌಡ, ಕಾವ್ಯಾಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಪೊ›.ಸಿ.ಪಿ.ಸಿದ್ಧಾಶ್ರಮ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪೊ›.ಎನ್‌.ಎಂ.ತಳವಾರ್‌, ಜಾನಪದ ಅಧ್ಯಯನ ವಿಭಾಗದ ಅಧ್ಯಕ್ಷ ಡಾ.ಎಂ.ನಂಜಯ್ಯ ಹೊಂಗನೂರು ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next