Advertisement

ಶರಾವತಿಗೆ ಜಿಲ್ಲೆಯ ಅರಣ್ಯ ಸೇರಿಸಬೇಡಿ

06:10 PM Mar 20, 2020 | Suhan S |

ಕಾರವಾರ: ಶಿವಮೊಗ್ಗ ಶರಾವತಿ ಅಭಯಾರಣ್ಯಕ್ಕೆ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶ ಸೇರಿಸಿ ಘೋಷಿಸಲ್ಪಟ್ಟ ಅಭಯಾರಣ್ಯ ಯೋಜನೆ ಮುಂದುವರಿಸಿಕೊಂಡು ಹೋಗಲು ಬದ್ಧವಾಗಿರುವ ಕುರಿತು ಸರಕಾರದ ನೀತಿಯನ್ನು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಬಲವಾಗಿ ಖಂಡಿಸಿದೆ.

Advertisement

ಬರುವ ದಿನಗಳಲ್ಲಿ ಸರಕಾರದ ಈ ನೀತಿಯ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ. ಭಟ್ಕಳ ಶಾಸಕರ ಪ್ರಶ್ನೆಗೆ ಅರಣ್ಯ ಸಚಿವರು ಅನುಪಸ್ಥಿತಿಯಲ್ಲಿ ಸಚಿವ ಸಿ.ಟಿ. ರವಿ ವಿಧಾನ ಸಭಾ ಅಧಿವೇಶನದಲ್ಲಿ ಉತ್ತರಿಸಿದ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ರವೀಂದ್ರ ನಾಯ್ಕ, ಸಚಿವ ರವಿ ಅವರು ನೀಡಿದ ಹೇಳಿಕೆ ಜಿಲ್ಲೆಗೆ ಅನ್ಯಾಯ ಮಾಡುತ್ತದೆ. ಅವರು ನೀಡಿದ ಅಂಕೆ-ಅಂಶಗಳು ಸಹಿತ ಅಸ್ಪಷ್ಟ ಹಾಗೂ ನಿರಾಧಾರವಾಗಿವೆ. ಅಭಯಾರಣ್ಯ ವ್ಯಾಪ್ತಿಯಲ್ಲಿ ಕಂದಾಯ ಗ್ರಾಮ, ಕಂದಾಯ ಭೂಮಿ, ಪಟ್ಟಾ ಭೂಮಿ, ಗೋಮಾಳ ಈ ಹಿಂದೆ ಅರಣ್ಯ ಭೂಮಿ ಕೇಂದ್ರ ಸರ್ಕಾರದಿಂದ ಮಂಜೂರಾಗಿದ್ದು. 1997ರ ಮಂಜೂರಿ ಪಟ್ಟಿಯಲ್ಲಿ ಉಲ್ಲೇಖೀಸಲ್ಪಟ್ಟ ಪ್ರದೇಶವನ್ನು ಹೊರತು ಪಡಿಸಿ, ಕೇವಲ ಅರಣ್ಯ ಪ್ರದೇಶವನ್ನು ಒಳಗೊಂಡು ಶರಾವತಿ ಅಭಯಾರಣ್ಯ ವಿಸ್ತರಣೆ ಮಾಡಲಾಗಿದೆ ಎಂಬ ಹೇಳಿಕೆ ವಸ್ತು ಸ್ಥಿತಿಗೆ ವ್ಯತಿರಿಕ್ತವಾಗಿದೆ.

ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವ ಅಭಯಾರಣ್ಯದ ಪ್ರಾಣಿಗಳಿಂದ ಮಾಲ್ಕಿದಾರರಿಗೆ ಉಂಟಾಗುವ ದೈಹಿಕ ಹಾಗೂ ರೈತಾಪಿ ಬೆಳೆ ಮುಂತಾದವುಗಳಿಗೆ ಆಗುವ ತೊಂದರೆಗಳ ಕುರಿತು ಸರ್ಕಾರದ ಗಮನ ಸೆಳೆಯದ್ದು ವಿಷಾದಕರ ಎಂದು ಪ್ರಸ್ತಾಪಿಸಿದ್ದಾರೆ. ಅಲ್ಲದೇ ಸಮರ್ಪಕ ಉತ್ತರ ದೊರಕದ ಹಿನ್ನೆಲೆಯಲ್ಲಿ ಶಾಸಕರ ಆಕ್ಷೇಪಕ್ಕೆ ಸರ್ಕಾರ ಸಮರ್ಪಕ ಉತ್ತರ ನೀಡದಿರುವುದಕ್ಕೆ ಭಟ್ಕಳ ಶಾಸಕರು ವಿಧಾನ ಸೌಧದಲ್ಲಿ ಆಕ್ಷೇಪ ವ್ಯಕ್ತಪಡಿಸುವುದು ಗಮನಾರ್ಹ ಅಂಶವಾಗಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖೀಸಿದ್ದರು.

ಇಂದಿನವರೆಗೂ ಸರ್ಕಾರದ ಬಳಿ ಘೋಷಿತ ಅಭಯಾರಣ್ಯ ಪ್ರದೇಶದಲ್ಲಿ ಅರಣ್ಯ ವಾಸಿಗಳ ಮತ್ತು ಮಾಲ್ಕಿದಾರರು ಇರುವ ಸಂಖ್ಯೆ, ಸಾರ್ವಜನಿಕ ಪ್ರಾಚೀನ ಕುರುಹುಗಳು, ದಾರ್ಮಿಕ ಕೇಂದ್ರಗಳ ಹಾಗೂ ಅನಾದಿ ಕಾಲದಿಂದ ಅನುಭವಿಸುತ್ತ ಬಂದಿರುವ ಧಾರ್ಮಿಕ ಮತ್ತು ಸಾಂಪ್ರದಾಯಿಕ ಬದ್ದ ಅಂಕಿ-ಸಂಖ್ಯೆ ಇಲ್ಲದಿರುವುದು ಹಾಗೂ ಇವುಗಳನ್ನು ಗಣನೆಗೆ ತೆಗೆದುಕೊಳ್ಳದೆ ಘೋಷಿತ ಅಭಯಾರಣ್ಯ ಯೋಜನೆಗೆ ಬೆಂಬಲಿಸುವುದು ಸರ್ಕಾರದ ಅಸ್ಪಷ್ಟ ನೀತಿಗೆ ಸಾಕ್ಷéವಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಜನಪ್ರತಿನಿಧಿಗಳ ವೈಫಲ್ಯ: ಸಾರ್ವಜನಿಕರಿಗೆ ತೀವ್ರ ತೊಂದರೆ ಉತ್ತರ ಕನ್ನಡ ಜಿಲ್ಲೆಯ 57 ಗ್ರಾಮಗಳ 43,000 ಹೆಕ್ಟರ್‌ ಅರಣ್ಯ ಪ್ರದೇಶ ಶರಾವತಿ ಅಭಯಾರಣ್ಯಕ್ಕೆ ಸೇರ್ಪಡೆಗೊಂಡಿರುವ ಅಧಿಸೂಚನೆಯಿಂದ ಅರಣ್ಯ ಅತಿಕ್ರಮಣದಾರರ ಮತ್ತು ಆ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಮಾಲ್ಕಿದಾರರಿಗೆ ವ್ಯಾಪ್ತಿಯ ಸಮಸ್ಯೆಗಳ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡುವಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ವಿಫಲವಾಗಿದ್ದು ಜನಾಭಿಪ್ರಾಯ ಸಂಗ್ರಹಿಸದೇ ಈವರೆಗೂ ಅಭಯಾರಣ್ಯ ವಿಸ್ತರಣೆಗೆ ಕುರಿತು ಜನಜಾಗೃತಿ ಮೂಡಿಸದೇ ಸದ್ರಿ ಪ್ರದೇಶದಲ್ಲಿ ವಾಸ್ತವ್ಯ ಹಾಗೂ ಭೂಮಿ ಸಾಗುವಳಿ ದಾರರಿಗೆ ಸದ್ರಿ ಯೋಜನೆಯಿಂದ ಮುಂಬರುವ ದಿನಗಳಲ್ಲಿ ಸ್ವತಂತ್ರತೆ ಮತ್ತು ಸ್ವಾವಲಂಬನೆ ಜೀವನಕ್ಕೆ ಆತಂಕ ಉಂಟಾಗುವ ಮೂಲ ಸೌಲಭ್ಯದಿಂದ ವಂಚಿತರಾಗುವ ಜನತೆ ಕುರಿತು ಸ್ಪಷ್ಟ ಚಿತ್ರಣ ನೀಡುವಲ್ಲಿ ಹಾಗೂ ಆ ದಿಶೆಯಲ್ಲಿ ಸರ್ಕಾರ ಗಮನ ಹರಿಸುವಲ್ಲಿ ಜನಪ್ರತಿನಿಧಿಗಳ ವಿಫಲತೆ ಎದ್ದು ಕಾಣುತ್ತದೆ ಎಂದು ರವೀಂದ್ರ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಲ್ಲದಿದ್ದರೆ ಪ್ರತ್ಯಕ್ಷ ಹಾಗೂ ಅಪ್ರತ್ಯಕ್ಷವಾಗಿ ಈ ಯೋಜನೆಯಿಂದ ಸುಮಾರು 20,000 ಕುಟುಂಬಕ್ಕಿಂತ ಹೆಚ್ಚಿನ ಸದಸ್ಯರಿಗೆ ತೊಂದರೆ ಉಂಟಾಗುವುದು ಎಂದು ಎಚ್ಚರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next