ಯೋಗಿ ಅಭಿನಯದ “ಕೋಲಾರ’ ನಾಡಿದ್ದು ಬಿಡುಗಡೆಯಾಗುತ್ತಿದೆ. ಅದಾಗಿ ಒಂದೆರೆಡು ತಿಂಗಳುಗಳಿಗೆ “ದುನಿಯಾ 2′ ಬಿಡುಗಡೆಯಾಗಲಿದೆ. ಅದಾದ ಮೇಲೆ ಯೋಗಿ ಯಾವುದೇ ಹೊಸ ಚಿತ್ರವನ್ನೂ ಒಪ್ಪಿಲ್ಲ. ಅಷ್ಟೇ ಅಲ್ಲ, ನವೆಂಬರ್‌ನಲ್ಲಿ ಮದುವೆ ಮುಗಿದ ನಂತರ ಹೊಸ ಚಿತ್ರ ಒಪ್ಪುವುದಾಗಿ ತೀರ್ಮಾನಿಸಿದ್ದಾರೆ. ಅಷ್ಟೇ ಅಲ್ಲ, ಮದುವೆಯಾದ ಮೇಲೆ ಇಮೇಜ್ ಬದಲಾಯಿಸಿಕೊಳ್ಳಬೇಕು ಎಂಬ ಯೋಚನೆಯಲ್ಲಿದ್ದಾರೆ.
ಯಾಕೆ ಇಂಥದ್ದೊಂದು ತೀರ್ಮಾನ ಮತ್ತು ಯೋಚನೆ ಎಂದರೆ ಅದಕ್ಕೆ ಕಾರಣವಿದೆ. ಪ್ರಮುಖವಾಗಿ ಯೋಗಿಗೆ ಕಥೆ ಹೇಳುವುದಕ್ಕೆ ಬರುವವರೆಲ್ಲಾ, ಒಂದೇ ತರಹ ಕಥೆ ಮತ್ತು ಪಾತ್ರಗಳನ್ನು ತರುತ್ತಾರಂತೆ. “ಬಹಳ ವಿಚಿತ್ರವಾಗಿರುತ್ತದೆ. ಕಥೆ ಹೇಳ್ಳೋಕೆ ಬರುವವರೆಲ್ಲಾ ನಿಮ್ಮನ್ನೇ ಗಮನದಲ್ಲಿಟ್ಟುಕೊಂಡು ಕಥೆ ಬರೆದಿದ್ದೇವೆ, ನೀವೇ ಆ ಪಾತ್ರವನ್ನು ಮಾಡಬೇಕು ಅಂತಾರೆ. ಯಾವ ಪಾತ್ರ ಎಂದು ಕೇಳಿದರೆ, ಮತ್ತದೇ ಚಪ್ಪರ್ ಪಾತ್ರಗಳು.
ಯಾಕೆ, ನಾನು ಚಪ್ಪರ್ ತರಹ ಕಾಣ್ತೀನಾ? ನಾನದಲ್ಲ. ಆ ತರಹ ಪಾತ್ರ ಮಾಡಿ ಸಾಕಾಗಿದೆ. ಹಾಗಾಗಿ ಬೇರೆ ತರಹದ ಪಾತ್ರಗಳನ್ನು ಮಾಡುವುದಕ್ಕೆ ತೀರ್ಮಾನಿಸಿದ್ದೇನೆ’ ಎನ್ನುತ್ತಾರೆ ಯೋಗಿ. ಕಳೆದ ಕೆಲವು ವರ್ಷಗಳಲ್ಲಿ ಅವರು ಏನಿಲ್ಲವೆಂದರೂ 300 ಕಥೆಗಳನ್ನು ಕೇಳಿದ್ದಾರಂತೆ. “ನನಗೆ ಅವಕಾಶ ಇಲ್ಲ ಅಂತ ಅಂದ್ಕೋಂಡಿದ್ದಾರೆ. ಆದರೆ, ಕೆಲವು ವರ್ಷಗಳಲ್ಲಿ ಅದೆಷ್ಟು ಚಿತ್ರ ಬಿಟ್ಟಿದ್ದೀನಿ ಅಂತ ನನಗೆ ಗೊತ್ತು. ಏನಿಲ್ಲವೆಂದರೂ 300ರಿಂದ 400 ಕಥೆ ಬಿಟ್ಟಿದ್ದೀನಿ.
ಬರುವವರೆಲ್ಲಾ ಅದೇ ತರಹದ ಪಾತ್ರಗಳನ್ನು ತರುತ್ತಾರೆ. ಕಥೆ ಕೇಳುತ್ತಿದ್ದಂತೆ, ಇದೆಂತದ್ದು ಅಂತ ಗೊತ್ತಾಗತ್ತೆ. ಒನ್‌ಲೈನ್ ಖುಷಿಕೊಟ್ಟರೆ ಮಾತ್ರ ಕಥೆ ಮುಂದುವರೆಸೋಕೆ ಹೇಳ್ತೀನಿ. ಇಲ್ಲ ಕಥೆ ಕೇಳಲ್ಲ. ಕೆಲವು ಕಥೆಗಳು ಚೆನ್ನಾಗಿದ್ದಿದ್ದೂ ಇದೆ. ಆದರೆ, ಏನೇನೋ ಸಮಸ್ಯೆಯಿಂದಾಗಿ ಚಿತ್ರ ಟೇಕಾಫ್ ಆಗಿಲ್ಲ’ ಎನ್ನುತ್ತಾರೆ. ಅದೇ ಕಾರಣಕ್ಕೆ ಮದುವೆಯಾದ ಮೇಲೆ ಸಂಪೂರ್ಣ ಚೇಂಜ್‌ಓವರ್ ಮಾಡಿಕೊಳ್ಳುವುದಕ್ಕೆ ತೀರ್ಮಾನಿಸಿದ್ದಾರೆ.
“ಒಮ್ಮೆ ರಾಜಿಯಾದರೆ ಪದೇಪದೇ ರಾಜಿಯಾಗುತ್ತಲೇ ಇರಬೇಕು. ಅದೇ ಕಾರಣಕ್ಕೆ ಇನ್ನು ಮುಂದೆ ರಾಜಿ ಆಗಬಾರದು ಅಂತ ತೀರ್ಮಾನಿಸಿದ್ದೇನೆ’ ಎನ್ನುತ್ತಾರೆ ಯೋಗಿ.