ಕೆ.ಆರ್.ನಗರ: ನಿಯಮದಂತೆ ಎಲ್ಲಾ ಪರೀಕ್ಷೆಗಳು ಮುಗಿದ ನಂತರ ರೋಗಿಗಳಿಗೆ ಡಯಾಲಿಸಿಸ್‌ಗೆ ಒಳಪಡಿಸಬೇಕು ಎಂದು ವೈದ್ಯಾಧಿಕಾರಿಗೆ ಆರೋಗ್ಯ ಇಲಾಖೆ ಜಂಟಿ ನಿರ್ದೇಶಕ ಡಾ.ರಾಮಚಂದ್ರ ಬಾಯರಿ ಸೂಚಿಸಿದರು.
ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರ ಪರಿ ಶೀಲಿಸಿ, ಸೋಂಕು ಹರಡಿದ ರೋಗಿಗಳಿಗೆ ಔಷಧಿ ವಿತರಿಸಿ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ಕಟ್ಟುನಿಟ್ಟಾಗಿ ನಿಯಮ ಗಳನ್ನು ಪಾಲಿಸುವಂತೆ ಎಚ್ಚರವಹಿಸ ಲಾಗಿದೆ. ರೋಗಿಗಳು ಯಾವುದೇ ಆತಂಕಕ್ಕೆ ಒಳಗಾಗದೆ ಡಯಾಲಿಸಿಸ್ ಮಾಡಿಸಿಕೊಳ್ಳ ಬಹುದು ಎಂದು ಮನವಿ ಮಾಡಿದರು.
ಕಳೆದ 3 ತಿಂಗಳ ಹಿಂದೆ ಡಯಾಲಿಸಿಸ್ ಕೇಂದ್ರಕ್ಕೆ ಬಂದಿದ್ದ ವ್ಯಕ್ತಿಯೋರ್ವನಿಗೆ ಎಚ್ಸಿವಿ ಸೋಂಕು ಇದ್ದು, ಆತನಿಗೆ ಡಯಾಲಿಸಿಸ್ ಮಾಡಿದ ನಂತರ ಯಂತ್ರವನ್ನು ಸ್ವಚ್ಛಗೊಳಿಸಲಿಲ್ಲ. ಹೀಗಾಗಿ ಇತರರಿಗೂ ಅದೇ ಯಂತ್ರ ಬಳಸಿದ್ದು, ಅವರಿಗೆ ಆ ರೋಗಾಣು ಹರಡಿದೆ ಎಂಬ ಶಂಕೆಯಿದ್ದು, ತನಿಖೆ ನಂತರ ಸತ್ಯಾಂಶ ತಿಳಿಯಲಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಹಾಜರಿದ್ದ ಪುರಸಭೆ ಸದಸ್ಯ ಕೋಳಿ ಪ್ರಕಾಶ್ ಮಾತನಾಡಿ, ಕಳೆದ ಹತ್ತಾರು ವರ್ಷಗಳಿಂದ ಡಯಾಲಿಸಿಸ್‌ಗೆ ಒಳಗಾಗಿದ್ದ ಲೋಕೇಶ್‌ಗೆ ಸೋಂಕು ಹರಡಿದ್ದರಿಂದ ಸಾವನ್ನಪ್ಪಿದರು. ಘಟನೆ ನಡೆದು 2 ತಿಂಗಳಾದರೂ ಅವರ ಕುಟುಂಬಕ್ಕೆ ಪರಿಹಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಿಹಾರ ಕೊಡಿಸುವ ಭರವಸೆ ನೀಡಲು ಜಂಟಿ ನಿರ್ದೇಶಕರು ಮುಂದಾದಾಗ, ಸಿಟ್ಟಿಗೆದ್ದ ಕೋಳಿ ಪ್ರಕಾಶ್, ಕನಿಷ್ಠ ಸಾವ ನ್ನಪ್ಪಿದ ವ್ಯಕ್ತಿಯ ಮರಣೋತ್ತರ ಪರೀಕ್ಷೆ ಮಾಡಿಸಿ ಸತ್ಯಾಂಶ ತಿಳಿಯುವ ಪ್ರಯತ್ನ ವನ್ನೂ ಮಾಡಲಿಲ್ಲ ಎಂದು ಕಿಡಿಕಾರಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಇಲಾಖೆಯ ಉಪನಿರ್ದೇಶಕ ಡಾ. ರಾಮಚಂದ್ರ, ತನಿಖೆಯ ಆಧಾರದ ಮೇಲೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಈ ವೇಳೆ ಡಯಾಲಿಸಿಸ್ ಕೇಂದ್ರದ ಸಹಾಯಕ ನಿರ್ದೇಶಕ ಡಾ. ಸೆಲ್ವರಾಜ್, ವೈದ್ಯಾಧಿಕಾರಿ ಡಾ. ಶಿವಶಂಕರ್, ವೈದ್ಯರಾದ ಡಾ. ಟಿ. ಶಿವಪ್ರಸಾದ್, ಡಾ. ತೇಜಮಣಿ, ಡಾ. ಪ್ರಸಾದ್, ಡಾ. ಶಾಲಿನಿ, ಡಾ. ಕುಶಾಲ್ ಶೆಟ್ಟಿ ಇತರರು ಹಾಜರಿದ್ದರು.