Advertisement

ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೊಗೆಯೋವರೆಗೂ ವಿರಮಿಸದಿರಿ

02:55 PM Apr 17, 2022 | Team Udayavani |

ಚಿಕ್ಕಮಗಳೂರು: ರಾಜ್ಯದಲ್ಲಿರುವ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೂಗೆಯುವವರೆಗೂ ಕಾರ್ಯಕರ್ತರು ವಿಶ್ರಮಿಸಬಾರದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

Advertisement

ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿ ಕೆ.ಎಸ್. ಈಶ್ವರಪ್ಪ ಅವರನ್ನು ಬಂಧಿಸಬೇಕು ಮತ್ತು ಬೆಲೆ ಏರಿಕೆ ತಡೆಗಟ್ಟಬೇಕು ಎಂದು ಆಗ್ರಹಿಸಿ ಶನಿವಾರ ನಗರದ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಹಮ್ಮಿಕೊಂಡಿದ್ದ ಬೃಹತ್‌ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಎಂದಿಗೂ ಕಾಣದಂತಹ ಭ್ರಷ್ಟ ಸರ್ಕಾರ ರಾಜ್ಯದಲ್ಲಿದೆ. ಈ ಸರ್ಕಾರ ರಚನೆಯಾಗಿದ್ದೇ ಭ್ರಷ್ಟಾಚಾರದಿಂದ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ನ 17 ಶಾಸಕರನ್ನು ಭ್ರಷ್ಟ ಹಣದಿಂದ ಖರೀದಿಸಿ ಸರ್ಕಾರ ರಚಿಸಿದ್ದಾರೆ. ಇದೊಂದು ಅನೈತಿಕ ಸರ್ಕಾರ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.

ಬಿಜೆಪಿ ಬಹುಮತ ಪಡೆದು ಸರ್ಕಾರ ರಚನೆ ಮಾಡಿಲ್ಲ, 2008ರಲ್ಲಿ ರೆಡ್ಡಿಗಳು ಅಕ್ರಮವಾಗಿ ಸಂಪಾದಿಸಿದ ಹಣದಲ್ಲಿ ಆಪರೇಷನ್‌ ಕಮಲ ನಡೆಸಿ ಸರ್ಕಾರ ರಚಿಸಿದರು. 2018ರಲ್ಲಿ ಆಪರೇಷನ್‌ ಕಮಲ ಮಾಡಿ 20 ರಿಂದ 25 ಕೋಟಿ ಹಣ ನೀಡಿ ಕಾಂಗ್ರೆಸ್‌- ಜೆಡಿಎಸ್‌ ಶಾಸಕರನ್ನು ಖರೀದಿಸಿ ಸರ್ಕಾರ ರಚಿಸಿದರು. ಭ್ರಷ್ಟಾಚಾರದ ಹಣವನ್ನು ಚೆಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದರು ಎಂದರು.

ಯಡಿಯೂರಪ್ಪ ಮಗ ವಿಜಯೇಂದ್ರ 10-20 ಪರ್ಸೆಂಟ್‌ ಕಮಿಷನ್‌ ಪಡೆಯುತ್ತಾರೆ ಎಂದು ಅವರ ಪಕ್ಷದ ಯತ್ನಾಳ್‌ ಆರೋಪಿಸಿದರು. ಭದ್ರಾ ಮೇಲ್ದಂಡೆ ಕಾಮಗಾರಿಗೆ 2 ಸಾವಿರ ಕೋಟಿಗೆ ಟೆಂಡರ್‌ ಕರೆದು ಶೇ.10ರಷ್ಟು ಕಮಿಷನ್‌ ಪಡೆದಿದ್ದಾರೆ ಎಂದು ವಿಶ್ವನಾಥ್‌ ಆರೋಪಿಸಿದರು. ಇದಕ್ಕಿಂತ ಸಾಕ್ಷಿ ಬೇಕಾ ಮಿಸ್ಟರ್‌ ಬೊಮ್ಮಾಯಿ, ಮಿಸ್ಟರ್‌ ಯಡಿಯೂರಪ್ಪ ಎಂದು ಟೀಕಿಸಿದ ಅವರು ಇದೊಂದು ಲಜ್ಜೆಗೆಟ್ಟ ಸರ್ಕಾರ ಎಂದು ಕಿಡಿ ಕಾರಿದರು. 4 ಕೋಟಿ ರೂ. ಕಾಮಗಾರಿ ನಡೆಸಿದ ಸಂತೋಷ್‌ ಪಾಟೀಲ್‌ 40 ಪರ್ಸೆಂಟ್‌ ನೀಡಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಾಟ್ಸ್‌ ಆ್ಯಪ್‌ ಮೆಸೇಜ್‌ನಲ್ಲಿ ನನ್ನ ಸಾವಿಗೆ ಈಶ್ವರಪ್ಪ ಕಾರಣವೆಂದು ಬರೆದಿದ್ದಾರೆ. ಕುಟುಂಬದವರು ಈಶ್ವರಪ್ಪ ಕಾರಣವೆಂದು ದೂರು ನೀಡಿದ್ದಾರೆ. ಆದರೆ ಈಶ್ವರಪ್ಪ ಮೇಲೆ ಭ್ರಷ್ಟಾಚಾರದ ಕೇಸ್‌ ಹಾಕಿಲ್ಲ. ಇದಕ್ಕೆ ಬೊಮ್ಮಾಯಿ ಕಾರಣ ಎಂದ ಅವರು, 40 ಪರ್ಸೆಂಟ್‌ ಸರ್ಕಾರವನ್ನು ಕಿತ್ತೂಗೆಯಲು ಮುಂದಾಗಬೇಕು ಎಂದರು.

Advertisement

ಬಿ.ಎಸ್.ಯಡಿಯೂರಪ್ಪ ಭ್ರಷ್ಟಾಚಾರದಲ್ಲಿ ಅಧಿಕಾರ ಕಳೆದುಕೊಂಡರು. ಈಗ ಈಶ್ವರಪ್ಪ, ಬಸವರಾಜ ಬೊಮ್ಮಾಯಿ ಮೇಲೆ ಭ್ರಷ್ಟಾಚಾರದ ಆರೋಪ ಬಂದಿದೆ. ಈಶ್ವರಪ್ಪ ಭಂಡ. ಅಷ್ಟು ಸುಲಭವಾಗಿ ರಾಜೀನಾಮೆ ನೀಡುತ್ತಿರಲಿಲ್ಲ, ಕೇಂದ್ರದ ವರಿಷ್ಠರ ಸೂಚನೆ ಮೇರೆಗೆ ರಾಜೀನಾಮೆ ನೀಡಿದ್ದಾರೆ. ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಿ ಬಂಧಿಸಬೇಕು. ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇರುವುದರಿಂದ ಪ್ರಕರಣವನ್ನು ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಸಂತೋಷ್‌ ಕುಟುಂಬಕ್ಕೆ ಗುತ್ತಿಗೆ ಕಾಮಗಾರಿ ಹಣ ನೀಡಬೇಕು ಹಾಗೂ 1 ಕೋಟಿ ಪರಿಹಾರ ನೀಡಬೇಕು. ಸಂತೋಷ ಪತ್ನಿಗೆ ಸರ್ಕಾರಿ ಕೆಲಸ ಕೊಡಬೇಕು ಎಂದು ಆಗ್ರಹಿಸಿದರು.

ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಸಭಾಧ್ಯಕ್ಷ ಬಿ.ಎಲ್. ಶಂಕರ್‌ ಮಾತನಾಡಿ, ಜಿಲ್ಲೆಯಲ್ಲಿ ಗುತ್ತಿಗೆದಾರರೊಬ್ಬರು ಹಿಡಿತ ಸಾಧಿಸಿದ್ದಾರೆ. ಅಧಿಕಾರಿಗಳು ಅವರ ಮನೆ ಬಾಗಿಲಿಗೆ ಹೋಗಿ ಕೇಳಿದ ಕೆಲಸ ಮಾಡಿಕೊಡಬೇಕಾಗಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ರಾಜ್ಯದಲ್ಲಿ ಅಧಿಕಾರ ಹಿಡಿಯಲಿದೆ ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್‌ ಮಾತನಾಡಿ, ನಮ್ಮ ರಾಜ್ಯ ಪ್ರಗತಿಪರ ರಾಜ್ಯ. ಅನೇಕ ಮುಖ್ಯಮಂತ್ರಿಗಳು ಒಳ್ಳೆಯ ಹೆಸರು ತಂದಿದ್ದಾರೆ. ಆದರೆ, ಬಿಜೆಪಿ ಸರ್ಕಾರ ರಾಜ್ಯಕ್ಕೆ ಕಪ್ಪುಚುಕ್ಕೆ ತರುತ್ತಿದೆ. ಬಿಜೆಪಿಯವರು ಅಧಿಕಾರ ಹಿಡಿಯಲು ಆಪರೇಷನ್‌ ಕಮಲದಂತಹ ಕೆಟ್ಟ ಸಂಪ್ರದಾಯ ತಂದರು ಎಂದರು.

ಬಿಜೆಪಿ ಸರ್ಕಾರಾವಧಿಯಲ್ಲಿ 5 ಜನ ಮಂತ್ರಿಗಳು ಭ್ರಷ್ಟಾಚಾರದ ಆರೋಪದಲ್ಲಿ ರಾಜೀನಾಮೆ ನೀಡಿದರು. ಮುಖ್ಯಮಂತ್ರಿಗಳೇ ಭ್ರಷ್ಟಾಚಾರದ ಆರೋಪದಲ್ಲಿ ಅಧಿಕಾರ ಕಳೆದುಕೊಂಡರು. ಎರಡನೇ ಬಾರಿ ಅಧಿ ಕಾರದಲ್ಲಿ ರಮೇಶ್‌ ಜಾರಕಿಹೊಳಿ ಮತ್ತು ಈಶ್ವರಪ್ಪ ಅಧಿಕಾರ ಕಳೆದುಕೊಂಡಿದ್ದಾರೆ. ಬಿಜೆಪಿ ದೋಚುವ ಪಕ್ಷವಾಗಿದೆ. ಭ್ರಷ್ಟಾಚಾರ ಮುಕ್ತ ಕರ್ನಾಟಕವಾಗಬೇಕು ಎಂದರು.

ಜಿಲ್ಲಾ ಉಸ್ತುವಾರಿ ಜಿ.ಎ.ಭಾವ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ| ಕೆ.ಪಿ. ಅಂಶುಮಂತ್‌, ಗಾಯತ್ರಿ ಶಾಂತೇಗೌಡ, ಎಂ.ಎಲ್. ಮೂರ್ತಿ, ಟಿ.ಡಿ. ರಾಜೇಗೌಡ, ಎ.ಎನ್. ಮಹೇಶ್‌, ರೇಖಾ ಹುಲಿಯಪ್ಪ ಗೌಡ, ಎಚ್.ಎಚ್. ದೇವರಾಜ್‌, ಮಮತ, ನಯನ, ಸಚಿನ್‌ ಮೀಗಾ, ಜಿ.ಎಚ್. ಶ್ರೀನಿವಾಸ, ಟಿ.ಎಚ್. ಶಿವಶಂಕರಪ್ಪ, ಗೋಪಿಕೃಷ್ಣ, ಕೆಂಪರಾಜ್‌, ಎಚ್‌.ಎಂ. ಸತೀಶ್‌, ಡಾ| ಡಿ.ಎಲ್.ವಿಜಯಕುಮಾರ್‌, ಕೆ. ಮಹ್ಮದ್‌, ಆನಂದ್‌, ಬಿ.ಎಚ್. ಹರೀಶ್‌, ಶಿವಾನಂದಸ್ವಾಮಿ, ಹಿರೇಮಗಳೂರು ಪುಟ್ಟಸ್ವಾಮಿ, ಎಚ್‌.ಪಿ. ಮಂಜೇಗೌಡ, ಸಂತೋಷ್‌ ಇದ್ದರು.

ಐದು ದಿನಗಳ ಕಾಲ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟಿಸಲು ಕೆಪಿಸಿಸಿ 9 ತಂಡಗಳನ್ನು ರಚಿಸಿದೆ. ಜನರ ಬಳಿ ತೆರಳಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ತಿಳಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರಿಗೆ 56 ಇಂಚು ಎದೆಯಿದೆ ಎಂದು ಅವರ ಪಕ್ಷದವರು ಹೇಳುತ್ತಾರೆ. ಬಾಡಿ ಬಿಲ್ಡರ್‌ಗೂ ಇದಕ್ಕೂ ಹೆಚ್ಚು ಇರುತ್ತೆ. 56 ಇಂಚು ಎದೆ ಇದ್ದರೇನಂತೆ. ತಾಯಿ ಹೃದಯ ಇರಬೇಕು. -ಸಿದ್ದರಾಮಯ್ಯ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next