ನವಲಗುಂದ: ತಾಲೂಕಿನಲ್ಲಿ ಮಳೆ ಸರಿಯಾಗಿ ಆಗದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಬೇಕು. ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೇ ಕಾರ್ಯನಿರ್ವಹಿಸಬೇಕೆಂದು ತಾಪಂ ಅಧ್ಯಕ್ಷೆ ಅನ್ನಪೂರ್ಣಾ ಶಿರಹಟ್ಟಿಮಠ ಸೂಚಿಸಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ನೂತನ ತಾಪಂ ಅಧ್ಯಕ್ಷೆಯಾದ ಮೇಲೆ ನಡೆದ ಮೊದಲ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸ ಬೇಕೆಂದು ಹೇಳಿದರು.
ಕೃಷಿ ಅಧಿಕಾರಿ ಪ್ರತಿಭಾ ಹೂಗಾರ ಮಾಹಿತಿ ನೀಡಿ, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಹೆಸರು ಬಿತ್ತನೆಗೆ ಮುಂದಾಗಿದ್ದಾರೆ. ಶೇ.5 ಕೂಡ ಬಿತ್ತನೆಯಾಗಿಲ್ಲ. ಈ ಬಾರಿ 2 ಸಾವಿರ ರೈತರು ಕೃಷಿಹೊಂಡ ನಿರ್ಮಿಸಿಕೊಂಡಿದ್ದಾರೆ. ಕೃಷಿ ಇಲಾಖೆಯಿಂದ ರೈತರಿಗೆ ಯಂತ್ರ, ತಾಡಪತ್ರಿ ಮತ್ತಿತರ ಸಲಕರಣೆ ನೀಡುತ್ತಿದ್ದೇವೆ ಎಂದರು. ಅಧಿಕಾರಿ ಬಿ.ಎಚ್. ಪಾಟೀಲ ಮಾತನಾಡಿ, ಗ್ರಾಮೀಣ ಪ್ರದೇಶದ ಎಲ್ಲ ಕೆರೆಗಳಲ್ಲಿ 2 ತಿಂಗಳಿಗಾಗುವಷ್ಟು ನೀರು ಇದೆ. ನೀರಿನ ಅಭಾವ ಕಂಡು ಬಂದರೆ ಟ್ಯಾಂಕರ್ ಮತ್ತು ಬೋರ್‌ವೆಲ್ ಮೂಲಕ ನೀರು ಪೂರೈಸುತ್ತೇವೆಂದು ತಿಳಿಸಿದರು.
ಗ್ರೇಡ್ 2 ತಹಶೀಲ್ದಾರ್ ಎಂ.ಜೆ. ಹೊಕ್ರಾಣಿ, ಬಿಇಒ ಗಿರೀಶ ಪದಕಿ, ಅಧಿಕಾರಿಗಳಾದ ಕೆ.ಎಚ್. ಖ್ಯಾಡದ, ಕೆ.ಬಿ. ಜಾಟಿ, ಬಸವರಾಜ ಗಾಣಿಗೇರ, ಸ್ಥಾಯಿ ಸಮಿತಿ ಅಧ್ಯಕ್ಷ ನಾಗನಗೌಡ ಪಾಟೀಲ, ತಾಪಂ ಸದಸ್ಯ ದೇವಪ್ಪ ರೋಣದ, ತಾಪಂ ಇಒ ಪವಿತ್ರಾ ಪಾಟೀಲ ಇನ್ನಿತರರಿದ್ದರು.