Advertisement

ಚಿತ್ರ ವಿಮರ್ಶೆ: ಸಂಬಂಧಗಳ ಸುತ್ತ ‘ಡಿಎನ್‌ಎ’ ಟೆಸ್ಟ್

12:33 PM Jan 29, 2022 | Team Udayavani |

ಒಂದು ಫ್ಯಾಮಿಲಿ ಡ್ರಾಮಾದಲ್ಲಿ ನಾವು ಏನು ಬಯಸಬಹುದು ಹೇಳಿ? ಸುಂದರ ಸಂಸಾರ, ಅಲ್ಲೊಂದಷ್ಟು ಕಾಮಿಡಿ, ಭಾವನಾತ್ಮಕ ಸನ್ನಿವೇಶ, ಸಣ್ಣಪುಟ್ಟ ಮುನಿಸು, ಕೊನೆಗೆ ಎಲ್ಲರನ್ನು ಚಕಿತಗೊಳಿಸುವಂತಹ ಘಟನೆ… ಇಷ್ಟನ್ನು ನೀಟಾಗಿ ಕಟ್ಟಿಕೊಟ್ಟರೆ ಒಂದು ಸಿನಿಮಾವನ್ನು ಒಮ್ಮೆ ನೋಡಲಡ್ಡಿಯಿಲ್ಲ. ಕೋವಿಡ್‌ ನಿರ್ಬಂಧಗಳ ನಡುವೆಯೇ ಈ ವಾರ ತೆರೆಗೆ ಬಂದಿರುವ “ಡಿಎನ್‌ಎ’ ಚಿತ್ರ ಒಂದು ಫ್ಯಾಮಿಲಿ ಡ್ರಾಮಾವಾಗಿ ಮೆಚ್ಚುಗೆ ಪಡೆಯುತ್ತದೆ.

Advertisement

ಸುಂದರ ಸಂಸಾರದಲ್ಲಿ ಬೀಸುವ ಒಂದು ಬಿರುಗಾಳಿ ಹೇಗೆ ಎರಡು ಸಂಸಾರದ ನಿದ್ದೆಗೆಡಿಸುತ್ತದೆ, ಒಂದು ಡಿಎನ್‌ಎ ಟೆಸ್ಟ್‌ನಿಂದ ಸಂಬಂಧಗಳು ಹೇಗೆ ಮೌಲ್ಯ ಕಳೆದುಕೊಳ್ಳುತ್ತವೆ ಎಂಬ ಅಂಶವನ್ನಿಟ್ಟುಕೊಂಡು ಈ ಸಿನಿಮಾವನ್ನು ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ.

ಕಥೆಯ ಬಗ್ಗೆ ಹೇಳುವುದಾದರೆ, ಕಾರ್ಪೋರೇಟ್‌ ಕಂಪನಿಯಲ್ಲಿ ಕೆಲಸ ಮಾಡುವ ದಂಪತಿ ಹಾಗೂ ಕಿರಾಣಿ ಅಂಗಡಿ ಮಾಲೀಕನ ಕುಟುಂಬದ ನಡುವೆ ಬರುವ ಡಿಎನ್‌ಎ ಟೆಸ್ಟ್‌ ನಿಂದ ಸಂಬಂಧಗಳು ಹೇಗೆ ಬದಲಾಗುತ್ತದೆ ಎಂಬುದು ಕಥೆಯ ಜೀವಾಳ. ಯೋಗ್‌ ರಾಜ್‌ ಭಟ್‌ ಹಾಗೂ ನೀನಾಸಂ ಸತೀಶ್‌ ಜುಗಲ್‌ ಬಂದಿಯಲ್ಲಿ “ಸಂಬಂಜಾ ಅನ್ನೋದು ದೊಡ್ಡದು ಕನಾ’ ಹಾಡಿನೊಂದಿಗೆ ಪ್ರಾರಂಭವಾಗುವ ಸಿನಿಮಾ ಒಂದು ಸಾಮಾನ್ಯ ಕಥೆ ಎನಿಸಿದರೂ ಜನರ ಮನಸ್ಸನ್ನು ಮುಟ್ಟುವಂತೆ ನಿರ್ದೇಶಕರು ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.

ಇದನ್ನೂ ಓದಿ:ಲವ್‌ ಮಾಕ್ಟೇಲ್‌-2 ಟ್ರೇಲರ್‌ ವಿಷಯದಲ್ಲಿ ಗಂಡ-ಹೆಂಡ್ತಿ ಜಗಳ!

ಮೊದಲಾರ್ಧದಲ್ಲಿ ಪಾತ್ರಗಳ ಪರಿಚಯದ ಜೊತೆಗೆ ಪ್ರಾರಂಭವಾಗುವ ಕಥೆ ಕೊಂಚ ನಿಧಾನವಾಗಿ ಸಾಗುತ್ತದೆ. ಮಧ್ಯಂತರದಲ್ಲಿ ಹೊಸ ಪಾತ್ರಗಳ ಆಗಮನದಿಂದ ಕೊಂಚ ಬದಲಾವಣೆ ನೀಡುವುದರ ಜೊತೆ ಘಟನೆಯ ಸತ್ಯಾಂಶವನ್ನು ತಿಳಿಸುತ್ತದೆ. ಭಾವನಾತ್ಮಕ ಘಟನೆಗಳ ಮೂಲಕ ಚಿತ್ರ

Advertisement

ಸಾಗುವುದರಿಂದ ಎಮೋಶನಲ್‌ ಡ್ರಾಮಾ ತೆರೆದುಕೊಳ್ಳುತ್ತದೆ. ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಕಾಡುವ ಕಥೆಯ ಮಧ್ಯದಲ್ಲಿ ಅಚ್ಯುತ್‌ ಕುಮಾರ್‌ ಅವರ ಸಣ್ಣ ಹಾಸ್ಯ ಚಟಾಕಿ ಚಿತ್ರಕ್ಕೆ ಮತ್ತಷ್ಟು ಮೆರಗು ನೀಡಿದೆ.

ರೋಜರ್‌ ನಾರಾಯಣ್‌ ಅವರ ಅಭಿನಯ, ಎಸ್ತರ್‌ ನೊರೊನ್ಹಾ ಹಾಗೂ ಯಮುನಾ ಅವರ ಮಾತೃ ಮಮತೆಯ ಭಾವನೆ ಎಲ್ಲವೂ ಸುಂದರವಾಗಿ ಮೂಡಿಬಂದಿದೆ. ಮಾಸ್ಟರ್‌ ಕೃಷ್ಣ ಚೈತ್ಯನ್ಯ ಹಾಗೂ ಮಾಸ್ಟರ್‌ ಧ್ರುವ ಮೇಹು ತಮ್ಮ ಪಾತ್ರಗಳಿಗೆ ಜೀವ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದಲ್ಲಿನ ಜಯಂತ್‌ ಕಾಯ್ಕಿಣಿ, ಪ್ರಕಾಶ್‌ ರಾಜ್‌ ಮೇಹು ಅವರ ಸಾಹಿತ್ಯ ಕಥೆಗೆ ಚೈತನ್ಯ ತುಂಬಿದೆ.

ವಾಣಿ ಭಟ್ಟ

Advertisement

Udayavani is now on Telegram. Click here to join our channel and stay updated with the latest news.

Next