Advertisement

ಡಿಎಂಕೆ ಆಫ‌ರ್‌ ಧಮಾಕಾ : ಜನಪ್ರಿಯ ಘೋಷಣೆಗಳ ಪ್ರಣಾಳಿಕೆ ಬಿಡುಗಡೆ

02:35 AM Mar 14, 2021 | Team Udayavani |

ಚೆನ್ನೈ/ದಿಸ್‌ಪುರ: ಸ್ಥಳೀಯ ತಮಿಳರಿಗೆ ಶೇ.75 ಉದ್ಯೋಗ ಮೀಸಲಾತಿ, ಪೆಟ್ರೋಲ್‌- ಡೀಸೆಲ್‌ ಬೆಲೆ ತಲಾ 5 ರೂ. ಕಡಿತ, ಎಲ್‌ಪಿಜಿ ಸಿಲಿಂಡರ್‌ ಮೇಲೆ 100 ರೂ. ಸಬ್ಸಿಡಿ, ಹಾಲಿನ ದರ ಲೀಟರ್‌ಗೆ 3 ರೂ. ಕಡಿತ, ದೇಗುಲ- ಚರ್ಚ್‌- ಮಸೀದಿಗಳಿಗೂ ಬಂಪರ್‌ ಗಿಫ್ಟ್…!

Advertisement

ಶತಾಯಗತಾಯ ತಮಿಳುನಾಡಿನ ಸಿಎಂ ಗದ್ದುಗೆ ಏರಲೇಬೇಕೆಂಬ ಛಲದಲ್ಲಿರುವ ಡಿಎಂಕೆ, ಮತದಾರರ ಮುಂದಿಟ್ಟಿರುವ ಪ್ರಮುಖ ಆಫರ್‌ಗಳಿವು. ಆಡಳಿತ ಪಕ್ಷ ಎಐಎಡಿಎಂಕೆ- ಬಿಜೆಪಿ ಮೈತ್ರಿಯನ್ನು ಮಣಿಸಿ, ಗೆದ್ದುಬೀಗುವ ಉತ್ಸಾಹದಲ್ಲಿರುವ ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್‌ ಶನಿವಾರ ಪಕ್ಷದ ವತಿಯಿಂದ ಚುನಾವಣ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ.

ಸರ್ವಧರ್ಮೀಯರ ಓಲೈಕೆ: ನಾಸ್ತಿಕ ಪಕ್ಷ ಎಂಬ ಹಣೆಪಟ್ಟಿ ಕಳಚಿಕೊಳ್ಳುವ ಪ್ರಯತ್ನವನ್ನೂ ಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ಮಾಡಿದೆ. ಲಕ್ಷ ಮಂದಿ ಯಾತ್ರೆ ಕೈಗೊಳ್ಳುವ ಹಿಂದೂ ದೇಗುಲಗಳಿಗೆ 25 ಸಾವಿರ ರೂ. ಸಹಾಯಧನ, ಹಿಂದೂ ದೇಗುಲಗಳ ಜೀರ್ಣೋದ್ಧಾರಕ್ಕೆ 1 ಸಾವಿರ ಕೋಟಿ ರೂ. ಮೀಸಲಿಡುವುದಾಗಿ ವಾಗ್ಧಾನ ನೀಡಿದೆ. ದೇಗುಲ ಅರ್ಚಕರಿಗೆ ಸಂಭಾವನೆ ಏರಿಸುವ ಆಸೆ ತೋರಿಸಿದೆ. ಅಲ್ಲದೆ, ಮಸೀದಿ- ಚರ್ಚ್‌ಗಳ ಮರುನಿರ್ಮಾಣಕ್ಕೆ 200 ಕೋಟಿ ರೂ. ನೀಡುವುದಾಗಿಯೂ ಹೇಳಿದೆ.

500 ಅಂಶಗಳ ಪ್ರಣಾಳಿಕೆಯಲ್ಲಿ ಪ್ರಧಾನ 50 ಅಂಶಗಳನ್ನು ಪಕ್ಷಾಧ್ಯಕ್ಷ ಎಂ.ಕೆ. ಸ್ಟಾಲಿನ್‌ ಜನತೆಯ ಮುಂದಿಟ್ಟಿದ್ದಾರೆ. ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್‌ ವಿತರಣೆ, 50 ಲಕ್ಷ ವಿದ್ಯಾರ್ಥಿಗಳ ಕೌಶಲ ಅಭಿವೃದ್ಧಿಗೆ ಪ್ರೋತ್ಸಾಹಿಸುವುದಾಗಿಯೂ ಹೇಳಿದ್ದಾರೆ. ನೀಟ್‌ ಅವ್ಯವಸ್ಥೆ ಖಂಡಿಸಿ ಈ ಹಿಂದೆ ಪ್ರತಿಭಟನೆ ನಡೆಸಿದ್ದ ಸ್ಟಾಲಿನ್‌, ಸಿಎಂ ಸ್ಥಾನಕ್ಕೇರಿದ ಮೊದಲ ಅಧಿವೇಶನದಲ್ಲಿಯೇ ವೈದ್ಯಕೀಯ ಪ್ರವೇಶ ಪರೀಕ್ಷೆ ವಿರುದ್ಧ ಕಾನೂನು ಜಾರಿಗೊಳಿಸುವುದಾಗಿಯೂ ಭರವಸೆ ನೀಡಿದ್ದಾರೆ.

ಕೃಷಿಗೆ ಪ್ರತ್ಯೇಕ ಬಜೆಟ್‌, ತಮಿಳಿನ “ತಿರುಕ್ಕುರಳ್‌’ ಅನ್ನು ರಾಷ್ಟ್ರೀಯ ಗ್ರಂಥವಾಗಿ ಘೋಷಿಸುವುದಾಗಿಯೂ ತಿಳಿಸಿದ್ದಾರೆ. ಅಲ್ಲದೆ, ಎಐಎಡಿಎಂಕೆ ಸಚಿವರು ಪ್ರಸ್ತುತ ಸರಕಾರದಲ್ಲಿ ಭಾರೀ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಇವರ ಮೇಲಿನ ಪ್ರಕರಣಗಳ ತನಿಖೆಗೆ ವಿಶೇಷ ಕೋರ್ಟ್‌ ಸ್ಥಾಪಿಸುವುದಾಗಿಯೂ ಎಚ್ಚರಿಸಿದ್ದಾರೆ.

Advertisement

ಇಷ್ಟೇ ಅಲ್ಲ…: ಪ್ರಣಾಳಿಕೆ ಭಾಗವಾಗಿ ಡಿಎಂಕೆ ಕಳೆದವಾರವೇ ಹಲವು ಆಶ್ವಾಸನೆಗಳನ್ನು ನೀಡಿತ್ತು. ಗೃಹಿಣಿಯರಿಗೆ 1 ಸಾವಿರ ರೂ. ಮಾಸಾಶನ, ಮಹಿಳೆಯರಿಗೆ ನಗರ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ, ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಉಚಿತ ಹಾಲು ವಿತರಣೆ, ಶೈಕ್ಷಣಿಕ ಸಾಲ ಮನ್ನಾ, ಕೋವಿಡ್‌-19 ಪರಿಹಾರವಾಗಿ ರೇಷನ್‌ ಕಾರ್ಡ್‌ದಾರರಿಗೆ 4,000 ರೂ. ಭತ್ತೆ, ಆಸ್ತಿ ತೆರಿಗೆ ಹೆಚ್ಚಳ ಮಾಡದೇ ಇರುವುದು… ಮುಂತಾದ ಭರವಸೆಗಳನ್ನು ಮುಂದಿಟ್ಟಿತ್ತು.

173 ಅಭ್ಯರ್ಥಿಗಳ ಪಟ್ಟಿ ಫೈನಲ್‌: ಪ್ರಣಾಳಿಕೆ ಬೆನ್ನಲ್ಲೇ ಎಂ.ಕೆ. ಸ್ಟಾಲಿನ್‌ ಪಕ್ಷದ 173 ಕ್ಷೇತ್ರಗಳ ಹುರಿಯಾಳುಗಳ ಪಟ್ಟಿಯನ್ನೂ ಬಿಡುಗಡೆ ಮಾಡಿದ್ದಾರೆ. ಕೊಲತೂರ್‌ನಿಂದ ಸ್ಟಾಲಿನ್‌ ಹಣೆಬರಹ ಪರೀಕ್ಷೆಗೆ ಇಳಿದರೆ, ಇವರ ಪುತ್ರ ಇದೇ ಮೊದಲ ಬಾರಿಗೆ ಚೆಪಾಕ್‌- ಟ್ರಿಪ್ಲಿಕೇನ್‌ ಕ್ಷೇತ್ರದಿಂದ ಚುನಾವಣ ಅಖಾಡಕ್ಕೆ ಧುಮುಕಲಿದ್ದಾರೆ.

ಪ್ರಸ್ತುತ ಶಾಸಕರಾಗಿರುವ, ಹಿರಿಯ ನಾಯಕರಾದ ದುರೈ ಮುರುಗನ್‌, ಕೆ.ಎನ್‌. ನೆಹರೂ, ಕೆ. ಪೊನ್ಮುಡಿ ಮತ್ತು ಎಂಆರ್‌ಕೆ ಪನ್ನೀರ್‌ಸೆಲ್ವಂ ಅವರಿಗೂ ಟಿಕೆಟ್‌ ನೀಡಲಾಗಿದೆ. ಇವರೆಲ್ಲರೂ ಈ ಹಿಂದೆ ಕರುಣಾನಿಧಿ ಸರಕಾರದಲ್ಲಿ ಮಾಜಿ ಸಚಿವರಾಗಿದ್ದು, ಸ್ಟಾಲಿನ್‌ ಹೆಗಲಿಗೆ ಹೆಗಲು ಕೊಡುತ್ತಿದ್ದಾರೆ. ಎಪ್ರಿಲ್‌ 6ರಂದು ನಡೆಯಲಿರುವ ಚುನಾವಣೆಗೆ ಈ ನಾಯಕರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡಾಡುತ್ತಿದ್ದಾರೆ.

ಪ್ರಸ್ತುತ ಚುನಾವಣೆಯಲ್ಲಿ ಡಿಎಂಕೆ ಪಕ್ಷವು ಕಾಂಗ್ರೆಸ್‌, ಎಡ ಪಕ್ಷ, ಎಂಡಿಎಂಕೆ, ವಿಸಿಕೆಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ.

ಕಾಂಗ್ರೆಸ್‌ ಅತೀ ದೊಡ್ಡ ಭ್ರಷ್ಟ ಪಕ್ಷ: ದೇಶವನ್ನು ಅತೀ ಹೆಚ್ಚು ವರ್ಷ ಆಳಿರುವ ಕಾಂಗ್ರೆಸ್‌ಗಿಂತ ಭ್ರಷ್ಟಾಚಾರ ಪಕ್ಷ ಬೇರೊಂದಿಲ್ಲ ಎಂದು ಕೇಂದ್ರ ಸಚಿವೆ ಸ್ಮತಿ ಇರಾನಿ ಆರೋಪಿಸಿದ್ದಾರೆ. ಅಸ್ಸಾಂನಲ್ಲಿ ನಡೆದ ಪಕ್ಷದ ಬಹಿರಂಗ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ಗಿಂತ ಭ್ರಷ್ಟಾಚಾರ ಪಕ್ಷ ಮತ್ಯಾ ವುದೂ ಇಲ್ಲ. ಬಿಜೆಪಿ ಮಾತ್ರ ಬಡವರ ಉದ್ಧಾರಕ್ಕಾಗಿ ಶ್ರಮಿಸುತ್ತಿದೆ. ಅಸ್ಸಾಂ ಟೀ ಎಸ್ಟೇಟ್‌ಗಳಲ್ಲಿ ದುಡಿ ಯುವ ಕಾರ್ಮಿಕರಿಗೆ ಬೆಂಬಲವಾಗಿ ನಿಂತಿದ್ದು ಬಿಜೆಪಿಯೇ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿ ಸಭೆ
ಚುನಾವಣ ರಾಜ್ಯಗಳ ಪಕ್ಷದ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯ ಕೇಂದ್ರ ಚುನಾವಣ ಸಮಿತಿ ಶನಿವಾರ ರಾತ್ರಿ ಸಭೆ ನಡೆಸಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಜೆ.ಪಿ. ನಡ್ಡಾ, ಪ್ರಧಾನ ಸಂಘಟನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಸೇರಿದಂತೆ ಸಂಸದೀಯ ಮಂಡಳಿ ಸದಸ್ಯರು, ಸಂಬಂಧಿಸಿದ ರಾಜ್ಯಗಳ ಉಸ್ತುವಾರಿಗಳು, ಪಕ್ಷದ ರಾಜ್ಯಾಧ್ಯಕ್ಷರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ಪ್ರಸ್ತುತ ಬಿಜೆಪಿ ಬಂಗಾಲ ಮತ್ತು ಅಸ್ಸಾಂ ರಾಜ್ಯಗಳ 2 ಹಂತಗಳ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದೆ. ಪ್ರಸ್ತುತ ತಮಿಳುನಾಡು, ಅಸ್ಸಾಂ ಅಂತಿಮ ಹಂತ, ಪ. ಬಂಗಾಲದ ಮತ್ತೆರಡು ಹಂತಗಳಿಗೆ ಅಭ್ಯರ್ಥಿಗಳ ಪಟ್ಟಿ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಉತ್ತರ ಪ್ರದೇಶ ನಾಲ್ಕು ಹೋಳಾಗುತ್ತೆ: ಬಿಎಸ್‌ಪಿ
ಬಲಿಯಾ: ಸದ್ಯದಲ್ಲೇ ನಡೆಯಲಿರುವ ಐದು ರಾಜ್ಯಗಳ ಚುನಾವಣೆಯ ಅನಂತರ‌ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ರಾಜ್ಯವನ್ನು ನಾಲ್ಕು ಭಾಗಗಳನ್ನಾಗಿ ವಿಭಜಿಸುತ್ತದೆ ಎಂದು ಗಾಜಿಯಾಪುರದ ಬಿಎಸ್‌ಪಿ ಸಂಸದ ಅಫ‌jಲ್‌ ಅನ್ಸಾರಿ ಆರೋಪಿಸಿದ್ದಾರೆ. ಬಲ್ಲಿಯಾ ಜಿಲ್ಲೆಯ ಬೆಲ್ತಾರಾ ರಸ್ತೆಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಚುನಾವಣ ಫ‌ಲಿತಾಂಶ ಹೊರಬಿದ್ದ ಮೇಲೆ ರಾಜ್ಯದ ವಿಭಜನೆಯಾಗುತ್ತದೆ ಎಂದಿದ್ದಾರೆ. ಇನ್ನು, ಸಿಎಂ ಯೋಗಿ ಆದಿತ್ಯನಾಥ್‌ ವಿರುದ್ಧ ವಾಗ್ಧಾಳಿ ನಡೆಸಿದ ಅವರು, “ಸಿಎಂ ಯೋಗಿ ಅವರು ಒಳಗಿಂದೊಳಗೆ ತಮ್ಮ ವಿರುದ್ಧ ದಾಖಲಾಗಿದ್ದ ಎಫ್ಐಆರ್‌ ರದ್ದುಪಡಿಸುತ್ತಿದ್ದಾರೆ. ಡಿಸಿಎಂ ಕೇಶವ್‌ ಪ್ರಸಾದ್‌ ಸಾಥ್‌ ನೀಡುತ್ತಿದ್ದಾರೆ” ಎಂದಿದ್ದಾರೆ.

25 ವರ್ಷ ಬಳಿಕ ಮಹಿಳಾ ಅಭ್ಯರ್ಥಿ ಕಣಕ್ಕೆ!
ತಿರುವನಂತಪುರ: ಕಾಂಗ್ರೆಸ್‌ ನೇತೃತ್ವದ ಯುನೈಟೆಡ್‌ ಡೆಮಾಕ್ರಾಟಿಕ್‌ ಫ್ರಂಟ್‌(ಯುಡಿಎಫ್)ನ ಮೈತ್ರಿ ಕೂಟದ ಐಯು ಎಂಎಲ್‌ 25 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ದಕ್ಷಿಣ ಕೋಝಿಕೋಡ್‌ ವಿಧಾನಸಭೆ ಕ್ಷೇತ್ರಕ್ಕೆ ಇಂಡಿಯನ್‌ ಯೂನಿಯನ್‌ ಮುಸ್ಲಿಮ್‌ ಲೀಗ್‌ನ ಅಭ್ಯರ್ಥಿಯಾಗಿ ನೂರ್‌ ಬಿನಾ ರಶೀದ್‌ ಸ್ಪರ್ಧಿಸುತ್ತಿದ್ದಾರೆ!

Advertisement

Udayavani is now on Telegram. Click here to join our channel and stay updated with the latest news.

Next